5,300 ವರ್ಷಗಳ ಹಿಂದೆ ತಮಿಳುನಾಡಿನಲ್ಲೇ ಕಬ್ಬಿಣ ಯುಗ ಆರಂಭ: ಸಿಎಂ ಎಂಕೆ ಸ್ಟಾಲಿನ್ ಹೇಳಿಕೆ
Iron Age started from Tamil Nadu: ಪಶ್ಚಿಮ ಭಾರತ ಹಾಗೂ ಆಚೆ ಸಿಂಧೂ ಕಣಿವೆ ನಾಗರಿಕತೆ ಅಸ್ತಿತ್ವದಲ್ಲಿದ್ದ ಸಮಯದಲ್ಲೇ ದಕ್ಷಿಣ ಭಾರತದಲ್ಲಿ ಕಬ್ಬಿಣದ ಯುಗ ಆರಂಭವಾಗಿತ್ತು ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ. ಆ ಸಂದರ್ಭದಲ್ಲಿ ಇಂಡಸ್ ವ್ಯಾಲಿಯಲ್ಲಿ ಕಂಚಿನ ಯುಗ ಇತ್ತು. ತಮಿಳುನಾಡಿನ ವಿವಿಧೆಡೆ ನಡೆದ ಉತ್ಖನನದ ವೇಳೆ ಮಹತ್ವದ ಸಾಕ್ಷ್ಯಾಧಾರಗಳು ಸಿಕ್ಕಿವೆ ಎನ್ನಲಾಗಿದೆ.
ಚೆನ್ನೈ, ಜನವರಿ 23: ತಮಿಳುನಾಡಿನಲ್ಲೇ ಕಬ್ಬಿಣ ಯುಗ ಆರಂಭವಾಗಿದ್ದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ. 5,300 ವರ್ಷಗಳ ಹಿಂದೆ, ಅಂದರೆ, ಕ್ರಿಸ್ತಪೂರ್ವ 33-34 ಶತಮಾನಗಳಷ್ಟು ಹಿಂದೆಯೇ ತಮಿಳುನಾಡಿನಲ್ಲಿ ಕಬ್ಬಿಣದ ಯುಗ ಅಡಿ ಇಟ್ಟಿತು ಎಂದು ಸ್ಟಾಲಿನ್ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಇತ್ತೀಚಿನ ಉತ್ಖನನ ಮತ್ತು ಸಂಶೋಧನೆಯ ಮಾಹಿತಿಯನ್ನು ಉಲ್ಲೇಖಿಸಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಚೆನ್ನೈನ ಅಣ್ಣಾ ಸೆಂಟನರಿ ಲೈಬ್ರರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.
‘ಇರುಂಬಿನ್ ತೊಣ್ಮೈ’ ಪುಸ್ತಕದ ಬಿಡುಗಡೆ, ಕೀಳಡಿ ಓಪನ್ ಏರ್ ಮ್ಯೂಸಿಯಂ ಮತ್ತು ಗಂಗೈಕೊಂಡ ಚೋಳಪುರಂ ಮ್ಯೂಸಿಯಂಗಳಿಗೆ ಶಂಕುಸ್ಥಾಪನೆ, ಕೀಳಡಿ ಉತ್ಖನನಕ್ಕೆ ಸಂಬಂಧಿಸಿದ ವೆಬ್ಸೈಟ್ ಉದ್ಘಾಟನೆ ಕಾರ್ಯಗಳನ್ನೂ ಸಿಎಂ ಸ್ಟಾಲಿನ್ ಈ ಸಂದರ್ಭದಲ್ಲಿ ನೆರವೇರಿಸಿದ್ದಾರೆ.
ಇದನ್ನೂ ಓದಿ: ಪವನ್ ಕಲ್ಯಾಣ್ ಜನಸೇನಾ ಪಕ್ಷಕ್ಕೆ ಚುನಾವಣಾ ಆಯೋಗದಿಂದ ಪ್ರಾದೇಶಿಕ ಪಕ್ಷದ ಮಾನ್ಯತೆ
‘ತಮಿಳುನಾಡಿನಲ್ಲಿ ನಡೆದಿರುವ ಉತ್ಖನನಗಳ ಸಂಗತಿಗಳು ಭಾರತೀಯ ಉಪಖಂಡದ ಚರಿತ್ರೆಯಲ್ಲಿ ಹೊಸ ತಿರುವು ಕೊಟ್ಟಿವೆ. ತಮಿಳುನಾಡಿನಲ್ಲಿ 5,345 ವರ್ಷಗಳ ಹಿಂದೆ ಕಬ್ಬಿಣವನ್ನು ತಯಾರಿಸಲಾಗುತ್ತಿದ್ದುದು ಗೊತ್ತಾಗಿದೆ. ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಲ್ಯಾಬ್ಗಳು ನಡೆಸಿದ ಸಂಶೋಧನೆಗಳಿಂದ ಇದು ರುಜುವಾತಾಗಿದೆ’ ಎಂದು ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಸಿಂಧೂ ಕಣಿವೆ ನಾಗರಿಕತೆಯಲ್ಲಿ ತಾಮ್ರ ಮತ್ತು ಕಂಚಿನ ಯುಗ ಇದ್ದ ಸಮಯದಲ್ಲೇ ತಮಿಳುನಾಡಿನಲ್ಲಿ ಕಬ್ಬಿಣದ ಯುಗ ಅಡಿ ಇಟ್ಟಾಗಿತ್ತು ಎಂದು ಎಂ.ಕೆ. ಸ್ಟಾಲಿನ್ ಕೆಲ ವಾರಗಳ ಹಿಂದೆ ಹೇಳಿದ್ದರು. ಮೂರು ಬೇರೆ ಬೇರೆ ಸ್ಥಳಗಳಲ್ಲಿ ನಡೆಸಿದ ಉತ್ಖನನಗಳಿಂದ ಈ ವಿಚಾರ ದೃಢಪಟ್ಟಿದೆ ಎಂದು ಅವರು ತಿಳಿಸಿದ್ದರು.
ಇಂಡಸ್ ವ್ಯಾಲಿ ಸಿವಿಲೈಸೇಶನ್ ಅಥವಾ ಸಿಂಧೂ ಕಣಿವೆ ನಾಗರಿಕತೆ ಅಳಿದ ಬಳಿಕ ಭಾರತದಲ್ಲಿ ಸುಮಾರು ಕ್ರಿಸ್ತಪೂರ್ವ ಹತ್ತನೇ ಶತಮಾನದಲ್ಲಿ ಕಬ್ಬಿಣ ಬಳಕೆ ಆರಂಭವಾಯಿತು ಎಂಬುದು ಈಗಿನ ಇತಿಹಾಸದಲ್ಲಿ ತಿಳಿಸಿರುವ ಸಂಗತಿ. ಉತ್ತರಪ್ರದೇಶದಲ್ಲಿ ನಡೆಸಲಾದ ಉತ್ಖನನದಲ್ಲಿ ಭಾರತದಲ್ಲಿ ಕಬ್ಬಿಣ ಯುಗದ ಆರಂಭ ಕ್ರಿಸ್ತಪೂರ್ವ 1,800 ವರ್ಷಗಳಷ್ಟು ಹಳೆಯದು ಎಂಬುದು ಗೊತ್ತಾಗಿದೆ. ಆದರೆ, ಕೃಷ್ಣಗಿರಿ ಜಿಲ್ಲೆಯ ಮಾಯಿಲಾದುಂಪರೈ ಎನ್ನುವಲ್ಲಿ ಹೊಸ ಸಾಕ್ಷ್ಯಾಧಾರ ಸಿಕ್ಕಿದ್ದು, ಕ್ರಿ.ಪೂ. 2172ರಲ್ಲಿ (4,200 ವರ್ಷಗಳ ಹಿಂದೆ) ಕಬ್ಬಿಣದ ಬಳಕೆ ಇದ್ದುದು ತಿಳಿದುಬಂದಿತ್ತು.
ಇದನ್ನೂ ಓದಿ: ಗಣರಾಜ್ಯೋತ್ಸವ: ಜಲಜೀವನ್ ಮಿಷನ್ಗೆ ಕೊಡುಗೆ ನೀಡಿದ ಕರ್ನಾಟಕದ ಐದು ಜಲ ಯೋಧರಿಗೆ ಆಹ್ವಾನ
ತಮಿಳುನಾಡು ಆರ್ಕಿಯಾಲಜಿ ಇಲಾಖೆ ಜನವರಿ 5ರಂದು ಬಿಡುಗಡೆ ಮಾಡಿದ ವರದಿ ಪ್ರಕಾರ, ಸಿಂಧೂ ನಾಗರಿಕತೆ ಹಾಗೂ ದಕ್ಷಿಣ ಭಾರತದ ಕಬ್ಬಿಣ ಯುಗ ಎರಡೂ ಏಕಸಮಯದಲ್ಲಿ ಅಸ್ತಿತ್ವದಲ್ಲಿದ್ದುವು ಎಂದು ಹೇಳುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ