ಪುಲ್ವಾಮಾ ದಾಳಿಯ ಆರೋಪಿ ಜೈಶ್ ಉಗ್ರನ ಮನೆ ನೆಲಸಮ ಮಾಡಿದ ಜಮ್ಮು ಕಾಶ್ಮೀರ ಆಡಳಿತ

| Updated By: ರಶ್ಮಿ ಕಲ್ಲಕಟ್ಟ

Updated on: Dec 11, 2022 | 1:43 PM

ಈ ವರ್ಷದ ಏಪ್ರಿಲ್‌ನಲ್ಲಿ, ಕೇಂದ್ರ ಗೃಹ ಸಚಿವಾಲಯವು ನೆಂಗ್ರೂನನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ "ಭಯೋತ್ಪಾದಕ" ಎಂದು ಹೆಸರಿಸಿದೆ

ಪುಲ್ವಾಮಾ ದಾಳಿಯ ಆರೋಪಿ ಜೈಶ್ ಉಗ್ರನ ಮನೆ ನೆಲಸಮ ಮಾಡಿದ ಜಮ್ಮು ಕಾಶ್ಮೀರ ಆಡಳಿತ
ಪುಲ್ವಾಮಾ ದಾಳಿ ಸಂಗ್ರಹ ಚಿತ್ರ
Follow us on

ಜಮ್ಮು ಮತ್ತು ಕಾಶ್ಮೀರ (Jammu and Kashmir) ಆಡಳಿತವು ಪಾಕಿಸ್ತಾನ (Pakistan) ಮೂಲದ ಜೈಶ್-ಎ-ಮೊಹಮ್ಮದ್ (JeM) ಉಗ್ರ ಮತ್ತು ಪುಲ್ವಾಮಾ ಭಯೋತ್ಪಾದಕ ದಾಳಿಯ (Pulwama strike) ಆರೋಪಿ ಆಶಿಕ್ ಹುಸೇನ್ ನೆಂಗ್ರೂನ ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿರುವ ಮನೆಯನ್ನು ಶನಿವಾರ ನೆಲಸಮಗೊಳಿಸಿದೆ. ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದರಿಂದ ಮನೆ ನೆಲಸಮಗೊಳಿಸಲಾಗಿದೆ ಎಂದು ಜಿಲ್ಲೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪುಲ್ವಾಮಾದ ನ್ಯೂ ಕಾಲೋನಿ ರಾಜ್‌ಪೋರಾ ಪ್ರದೇಶದಲ್ಲಿ ಎರಡು ಅಂತಸ್ತಿನ ಕಾಂಕ್ರೀಟ್ ಮನೆಯನ್ನು ಪೊಲೀಸ್ ಸಿಬ್ಬಂದಿಯೊಂದಿಗೆ ಜಿಲ್ಲಾ ಅಧಿಕಾರಿಗಳು ಬುಲ್ಡೋಜರ್ ಬಳಸಿ ನೆಲಸಮ ಮಾಡಿದ್ದಾರೆ. ಮನೆಯನ್ನು ರಾಜ್ಯದ ಭೂಮಿಯಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಲಾಗಿದೆ ಎಂಬ ಕಾರಣದಿಂದ ಕೆಡವಲಾಗಿದೆ ಎಂದು ಹೇಳಿದ ಪುಲ್ವಾಮಾದ ಡೆಪ್ಯುಟಿ ಕಮಿಷನರ್ ಬಸೀರ್ ಚೌಧರಿ, “ಈಗಾಗಲೇ ಮನೆಯನ್ನು ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಸೀಲ್ ಮಾಡಿದೆ” ಎಂದು ದಿ ಸಂಡೇ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿರುವ ನೆಂಗ್ರೂ 40 ಸಿಆರ್‌ಪಿಎಫ್ ಸಿಬ್ಬಂದಿಯನ್ನು ಕೊಂದ 2019 ರ ಪುಲ್ವಾಮಾ ದಾಳಿಯ ಆರೋಪಿಯಾಗಿದ್ದಾನೆ. ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಅರೆಸೇನಾ ಪಡೆಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಉಗ್ರನೊಬ್ಬ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆದು ಈ ದಾಳಿ ನಡೆಸಲಾಗಿತ್ತು. ಈ ದಾಳಿ ಭಾರತ ಮತ್ತು ಪಾಕ್ ನಡುವೆ ಮತ್ತಷ್ಟು ವೈರತ್ವಕ್ಕೆ ಕಾರಣವಾಗಿತ್ತು.

ಈ ವರ್ಷದ ಏಪ್ರಿಲ್‌ನಲ್ಲಿ, ಕೇಂದ್ರ ಗೃಹ ಸಚಿವಾಲಯವು ನೆಂಗ್ರೂನನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ “ಭಯೋತ್ಪಾದಕ” ಎಂದು ಹೆಸರಿಸಿದೆ. ಈತ ಮಸೂದ್ ಅಜರ್‌ನ ಸೋದರಳಿಯ ಮತ್ತು ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಮರ್ ಫಾರೂಕ್‌ನನ್ನು ಜಮ್ಮುವಿನಿಂದ ಪುಲ್ವಾಮಾಕ್ಕೆ ಸಾಗಿಸಿದ್ದ ಎಂದು ನಂಬಲಾಗಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ ವೃತ್ತಿಯಲ್ಲಿ ಚಾಲಕನಾಗಿರುವ ಈತನಿಗೆ 34 ವರ್ಷ.ಈತನ ಕೆಲಸ ಜೈಶ್-ಎ-ಮೊಹಮ್ಮದ್ ಉಗ್ರಗಾಮಿಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುವುದಾಗಿತ್ತು. ಈತ ಜಮ್ಮು ಮತ್ತು ಪಂಜಾಬ್‌ನ ಅಂತರಾಷ್ಟ್ರೀಯ ಗಡಿಯಿಂದ ಕಾಶ್ಮೀರ ಕಣಿವೆಗೆ ಹತ್ತಾರು ಜೈಶ್ ಉಗ್ರಗಾಮಿಗಳನ್ನು ಸಾಗಿಸಿದ್ದಾರೆ ಎಂದು ನಂಬಲಾಗಿದೆ.

ಇದನ್ನೂ ಓದಿ
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಎಫ್​ಐಆರ್ ದಾಖಲಿಸಿದ ಎನ್​ಐಎ ತನಿಖಾಧಿಕಾರಿ
ಕೊನೆಗೂ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಬಗ್ಗೆ ಒಬ್ಬರು ಮಾತಾಡಿದ್ದಾರೆ: ಲ್ಯಾಪಿಡ್ ಹೇಳಿಕೆಗೆ ಸಹಮತ ಸೂಚಿಸಿದ ಮೆಹಬೂಬಾ ಮುಫ್ತಿ
ಪಾಕಿಸ್ತಾನದ ಆರ್ಥಿಕತೆ ಕುಸಿಯುತ್ತಿರುವಾಗ ಭಾರತದ ವಿರುದ್ಧ ಉಗ್ರ ಕೃತ್ಯಗಳನ್ನು ಹೆಚ್ಚಿಸಿದ ಲಷ್ಕರ್, ಜೈಷ್ ಸಂಘಟನೆ

ಪೊಲೀಸರ ಪ್ರಕಾರ, ನೆಂಗ್ರೂನ ಕಿರಿಯ ಸಹೋದರ ಮೊಹಮ್ಮದ್ ಅಬ್ಬಾಸ್ ಸಕ್ರಿಯ ಜೈಶ್ ಉಗ್ರಗಾಮಿಯಾಗಿದ್ದು, 2013 ರಲ್ಲಿ ಪುಲ್ವಾಮಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹತ್ಯೆಯಾಗಿದ್ದ. ಉಗ್ರರ ಸಾಗಣೆಯಲ್ಲಿ ಆತನ ಪಾತ್ರ ಬೆಳಕಿಗೆ ಬಂದ ನಂತರ ನೆಂಗ್ರೂ ಭೂಗತನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮುವಿನ ಸುರಂಗದ ಮೂಲಕ ಆತನನ್ನು ತನ್ನ ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ