ಮಂಗಳೂರು: ಕಂಕನಾಡಿಯಲ್ಲಿ ಆಟೊದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳ – ಎನ್ಐಎ (National Investigation Agency – NIA) ಅಧಿಕಾರಿಗಳು ಎಫ್ಐಆರ್ ದಾಖಲು ಮಾಡಿದ್ದಾರೆ. ಎನ್ಐಎ ಪ್ರಾಥಮಿಕ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಆರೋಪಿಯು ಮಂಗಳೂರಿನಲ್ಲಿ ದೊಡ್ಡ ಪ್ರಮಾಣದ ಸಂಚು ರೂಪಿಸಿರುವುದು ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಬೆಂಗಳೂರು ಘಟಕವು ದಾಖಲಿಸಿರುವ ಪ್ರತಿಯು ‘ಟಿವಿ9’ ಪ್ರತಿನಿಧಿಗೆ ಲಭ್ಯವಾಗಿದೆ.
ಕಳೆದ ನ 19ರಂದು ಕಂಕನಾಡಿಯಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿತ್ತು. ತನಿಖಾಧಿಕಾರಿಗಳು ನಡೆಸಿದ ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯು ದೊಡ್ಡ ಪ್ರಮಾಣದ ಸಂಚು ರೂಪಿಸಿರುವುದು ಬಯಲಾಗಿತ್ತು. ಘಟನಾ ಸ್ಥಳದಲ್ಲಿ 5 ಲೀಟರ್ ಕುಕ್ಕರ್, 9 ವೋಲ್ಟ್ಸ್ ಸಾಮರ್ಥ್ಯದ 3 ಬ್ಯಾಟರಿಗಳು, ಕೆಟ್ಟಿರುವ ಸರ್ಕಿಟ್ಗಳು ಸೇರಿದಂತೆ ಹಲವು ಎಲೆಕ್ಟ್ರಿಕ್ ಉಪಕರಣಗಳು ಪತ್ತೆಯಾಗಿದ್ದವು. ಇವೆಲ್ಲವನ್ನೂ ಈಗ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಶಾರೀಕ್ ವಾಸವಿದ್ದ ಮೈಸೂರಿನ ಮನೆಯಲ್ಲಿಯೂ ಎನ್ಐಎ ಅಧಿಕಾರಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಮನೆಯಲ್ಲಿ ಸುಧಾರಿತ ಸ್ಫೋಟಕಗಳ ತಯಾರಿಕೆಗೆ ಬಳಸುವ ಹಲವು ಪರಿಕರಗಳು ಪತ್ತೆಯಾಗಿದ್ದವು. ರಾಷ್ಟ್ರದ ಭದ್ರತೆಗೆ ಧಕ್ಕೆ ತರುವ ಪ್ರಕರಣವಾಗಿರುವ ಕಾರಣ ಕೇಂದ್ರ ಸರ್ಕಾರದ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಎನ್ಐಎ ಅಧಿಕಾರಿಗಳು ಎಫ್ಐಆರ್ನಲ್ಲಿ ಹೇಳಿದ್ದಾರೆ.
ಶಾರೀಕ್ ಮನೆಯಿದ್ದ ರಸ್ತೆ ಈಗ ಖಾಲಿಖಾಲಿ
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಹಾಗೂ ಶಂಕಿತ ಉಗ್ರ ಶಾರೀಕ್ ನೆಲೆಸಿದ್ದ ಮೈಸೂರಿನ ಲೋಕನಾಯಕನಗರ ಬಡಾವಣೆಯಲ್ಲಿ ನೀರವ ಮೌನ ನೆಲೆಸಿದೆ. ಶಾರೀಕ್ ಇದ್ದ ಮನೆಯಿರುವ ರಸ್ತೆಯಲ್ಲಿಯೂ ಎಲ್ಲ ಮನೆಗಳು ಖಾಲಿಖಾಲಿ. ಬಹುತೇಕ ಮನೆಗಳಲ್ಲಿ ಜನರು ಹೆದರಿಕೆಯಿಂದ ಮನೆ ತೊರೆದು ಬೇರೆಡೆಗೆ ಹೋಗಿದ್ದಾರೆ. ಇರುವವರೂ ಮಾತನಾಡಲು, ಶಾರೀಕ್ ಬಗ್ಗೆ ಯಾವುದೇ ಮಾಹಿತಿ ಕೊಡಲು ಹಿಂಜರಿಯುತ್ತಿದ್ದಾರೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಘಟನೆ ನಡೆದು 6 ದಿನ ಕಳೆದರೂ ಜನರು ಶಾಕ್ನಿಂದ ಹೊರಗೆ ಬಂದಿಲ್ಲ.
ಪ್ರತ್ಯೇಕ ತನಿಖೆ; ಅಲೋಕ್ ಕುಮಾರ್
ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಸಮರ್ಥಿಸಿಕೊಂಡಿರುವ ‘ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್’ (IRC) ಮಾಧ್ಯಮ ಹೇಳಿಕೆ ಕುರಿತು ಪ್ರತ್ಯೇಕ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಕೃತ್ಯದ ಹೊಣೆ ಹೊತ್ತು ಸಂಘಟನೆಯೊಂದು ಹೇಳಿಕೆ ಬಿಡುಗಡೆ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ‘ಈ ರೀತಿಯ ಹೇಳಿಕೆ ಹೊರಡಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಅದರಲ್ಲಿರುವ ಮಾಹಿತಿಯ ಸತ್ಯಾಸತ್ಯತೆ ಎಷ್ಟಿದೆಯೋ ಗೊತ್ತಿಲ್ಲ’ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ