ಜಮ್ಮು ಕಾಶ್ಮೀರ: ಎನ್​ಕೌಂಟರ್​ನಲ್ಲಿ ಇಬ್ಬರು ಉಗ್ರರ ಹತ್ಯೆ

ಶೂಟೌಟ್ ಆರಂಭವಾದ ಕೆಲವೇ ನಿಮಿಷಗಳ ನಂತರ ಭಯೋತ್ಪಾದಕರನ್ನು ಕೊಲ್ಲಲಾಯಿತು ಎಂದು ಪೊಲೀಸರು ಟ್ವೀಟ್​ ಮಾಡಿದ್ದಾರೆ.

ಜಮ್ಮು ಕಾಶ್ಮೀರ: ಎನ್​ಕೌಂಟರ್​ನಲ್ಲಿ ಇಬ್ಬರು ಉಗ್ರರ ಹತ್ಯೆ
ಶ್ರೀನಗರದಲ್ಲಿ ಭದ್ರತಾ ಸಿಬ್ಬಂದಿ ಗಸ್ತು (ಸಂಗ್ರಹ ಚಿತ್ರ)
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 15, 2021 | 11:12 PM

ಶ್ರೀನಗರ: ನಗರದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಸೋಮವಾರ ಸಂಜೆ ಇಬ್ಬರು ಉಗ್ರರನ್ನು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದಕರು ಮತ್ತು ಭದ್ರತಾಪಡೆಗಳ ನಡುವೆ ಹೈದರ್​ಪೊರಾ ಬೈಪಾಸ್ ಸಮೀಪ ಗುಂಡಿನ ಚಕಮಕಿ ಆರಂಭವಾಗಿತ್ತು. ಶೂಟೌಟ್ ಆರಂಭವಾದ ಕೆಲವೇ ನಿಮಿಷಗಳ ನಂತರ ಭಯೋತ್ಪಾದಕರನ್ನು ಕೊಲ್ಲಲಾಯಿತು ಎಂದು ಪೊಲೀಸರು ಟ್ವೀಟ್​ ಮಾಡಿದ್ದಾರೆ.

ಎನ್​ಕೌಂಟರ್ ಆರಂಭವಾದಾಗ ನಾವು ಮನೆಗಳಲ್ಲಿಯೇ ಸಿಲುಕೊಂಡೆವು. ಭದ್ರತಾಪಡೆಗಳು ಏಕಾಏಕಿ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಿದವು ಎಂದು ಹಲವು ನಾಗರಿಕರು ತಾವು ಎದುರಿಸಬೇಕಾದ ಸಂಕಷ್ಟ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ. ‘ನನ್ನ ಸೋದರ ಕಟ್ಟಡದಲ್ಲಿ ಸಿಲುಕಿಕೊಂಡಿದ್ದಾನೆ. ಅವನ ಫೋನ್ ಆಫ್ ಆಗಿದೆ ಎಂದು ಹೈದರ್​ಪೊರಾದ ನಿವಾಸಿಯೊಬ್ಬರು ಹೇಳಿದರು. ಹೈದರ್​ಪೊರಾ ಬೈಪಾಸ್​ ಸುತ್ತಮುತ್ತಲ ಕಟ್ಟಡಗಳಿಂದ ಜನರು ಹೊರಬರುವುದನ್ನು ನಿರ್ಬಂಧಿಸಲಾಗಿದೆ ಎಂದು ಭದ್ರತಾ ಪಡೆಗಳು ದೃಢಪಡಿಸಿವೆ. ಟ್ರಕ್​ಗಳು ಸೇರಿದಂತೆ ವಾಹನಗಳ ಬೃಹತ್ ಸಾಲು ರಸ್ತೆಯಲ್ಲಿ ನಿಂತಿದೆ.

ಕಳೆದ ಕೆಲ ತಿಂಗಳುಗಳಿಂದ ಶ್ರೀನಗರದಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಾಗಿದೆ. ನಿನ್ನೆಯಷ್ಟೇ (ನ.14) ಶ್ರೀನಗರದ ಹೃದಯಭಾಗದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಗುಂಡಿನ ದಾಳಿ ನಡೆದಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದರು.

ವಲಸೆ ಕಾರ್ಮಿಕರು ಮತ್ತು ಹಿಂದುಗಳ ಮೇಲೆ ಕಾಶ್ಮೀರದಲ್ಲಿ ದಾಳಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ವಾರ ಬೆಮಿನಾ ಸಮೀಪ ಭಯೋತ್ಪಾದಕನೊಬ್ಬ ಪೊಲೀಸರ ಗುಂಡಿಗೆ ಬಲಿಯಾಗಿದ್ದ. ನಗರದಲ್ಲಿ ಆತ್ಮಾಹುತಿ ದಾಳಿ ನಡೆಸುವಲ್ಲಿ ಈತ ಸಕ್ರಿಯ ಪಾತ್ರ ನಿರ್ವಹಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Terrorists Encounter: ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಯಿಂದ ಮೂವರು ಉಗ್ರರ ಎನ್​ಕೌಂಟರ್
ಇದನ್ನೂ ಓದಿ: National Defence: ಅರಬ್ಬಿ ಸಮುದ್ರ ಮತ್ತು ಪಾಕಿಸ್ತಾನದ ಸುಳ್ಳು: ಕರಾಚಿ ಸಮೀಪ ಭಾರತದ ಜಲಾಂತರ್ಗಾಮಿ ಸಂಚರಿಸಿದ್ದು ನಿಜವೇ?