Jammu Kashmir: ಕಾಶ್ಮೀರದ ಪೊಲೀಸರಿಂದ 10 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿ ಬಿಡುಗಡೆ

| Updated By: ಸುಷ್ಮಾ ಚಕ್ರೆ

Updated on: Aug 03, 2021 | 3:12 PM

10 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯನ್ನು ಜಮ್ಮು ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಹಲವು ವರ್ಷಗಳಿಂದ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ 7 ಉಗ್ರರು ಹಾಗೂ ಮೂವರು ಹೊಸದಾಗಿ ಸೇರ್ಪಡೆಯಾಗಿರುವ ಉಗ್ರರು ಈ ಪಟ್ಟಿಯಲ್ಲಿದ್ದಾರೆ.

Jammu Kashmir: ಕಾಶ್ಮೀರದ ಪೊಲೀಸರಿಂದ 10 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿ ಬಿಡುಗಡೆ
ಸಾಂದರ್ಭಿಕ ಚಿತ್ರ
Follow us on

ಶ್ರೀನಗರ: ಭಾರತದಲ್ಲಿ ಉಗ್ರರ ಹಾವಳಿ ಹೆಚ್ಚಾಗಿದ್ದು, ಗಡಿ ಭಾಗಗಳಲ್ಲಿ ಈಗಾಗಲೇ ಹಲವು ಉಗ್ರರನ್ನು ಎನ್​ಕೌಂಟರ್ ಮಾಡಲಾಗಿದೆ. ಮೊನ್ನೆಯಷ್ಟೇ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಪುಲ್ವಾಮಾ ದಾಳಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಜೈಷ್ -ಎ-ಮೊಹಮ್ಮದ್ ಸಂಘಟನೆಯ ಉಗ್ರ ಅಬು ಸೈಫುಲ್ಲಾ ಅಲಿಯಾಸ್​ ಲಂಬೂನನ್ನು ಎನ್​ಕೌಂಟರ್​ನಲ್ಲಿ ಕೊಲ್ಲಲಾಗಿತ್ತು. ಅದರ ಬೆನ್ನಲ್ಲೇ 10 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯನ್ನು ಜಮ್ಮು ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಕಾಶ್ಮೀರ ಜೋನ್ ಪೊಲೀಸರು ಟ್ವಿಟ್ಟರ್​ನಲ್ಲಿ ನಿನ್ನೆ ರಾತ್ರಿ ಈ ಪಟ್ಟಿಯನ್ನು ಪೋಸ್ಟ್ ಮಾಡಿದ್ದಾರೆ. ಈಗಾಗಲೇ ಹಲವು ವರ್ಷಗಳಿಂದ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ 7 ಉಗ್ರರು ಹಾಗೂ ಮೂವರು ಹೊಸದಾಗಿ ಸೇರ್ಪಡೆಯಾಗಿರುವ ಉಗ್ರರು ಈ ಪಟ್ಟಿಯಲ್ಲಿದ್ದಾರೆ. ಸಲೀಂ ಪರಾಯ್, ಯೂಸುಫ್ ಕಂಟ್ರೂ, ಅಬ್ಬಾಸ್ ಶೇಖ್, ರಿಯಾಜ್ ಶಟರ್​ಗುಂಡ್, ಫರೂಖ್ ನಲಿ, ಜುಬೇರ್ ವಾನಿ, ಅಶ್ರಫ್ ಮೌಲ್ವಿ ಈಗಾಗಲೇ ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿ ಹಲವಾರು ಜನರ ಪ್ರಾಣ ತೆಗೆದ ಉಗ್ರರಾಗಿದ್ದಾರೆ. ಸಾಕಿದ್ ಮಂಜೂರ್, ಉಮರ್ ಮುಸ್ತಖ್ ಖಂಡೆ, ವಕೀಲ್ ಶಾ ಹೊಸದಾಗಿ ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗಿರುವ ಉಗ್ರರಾಗಿದ್ದಾರೆ. ಇವರನ್ನು ಸೆರೆ ಹಿಡಿಯಲು ಕಾಶ್ಮೀರದ ಪೊಲೀಸರು ಹೊಂಚು ಹಾಕುತ್ತಿದ್ದಾರೆ.

ಮೂರು ದಿನಗಳ ಹಿಂದೆ ಜೈಷ್-ಎ-ಮೊಹಮ್ಮದ್ ಸಂಘಟನೆಯ (JeM) ಉಗ್ರ ಅಬು ಸೈಫುಲ್ಲಾನನ್ನು ಭಾರತೀಯ ಸೇನಾಪಡೆ ಪುಲ್ವಾಮಾದಲ್ಲಿ ಹೊಡೆದುರುಳಿಸಿತ್ತು. ಅದ್ನಾನ್, ಇಸ್ಮಾಯಿಲ್, ಲಂಬೂ ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಅಬು ಸೈಫುಲ್ಲಾನನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಲಾಗಿತ್ತು. ಈತ 2017ರಿಂದ ಕಾಶ್ಮೀರದ ಕಣಿವೆಯಲ್ಲಿ ಉಗ್ರವಾದಿ ಕೃತ್ಯಗಳನ್ನು ನಡೆಸುತ್ತಿದ್ದ. ಅಬು ಸೈಫುಲ್ಲಾ ಸರಣಿಯಾಗಿ ನಡೆದ ಉಗ್ರರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. 2019ರ ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿ ಸೇರಿದಂತೆ ಇನ್ನೂ ಹಲವು ದಾಳಿಗಳಲ್ಲಿ ಈತನ ಪಾತ್ರವಿತ್ತು. ಪಾಕಿಸ್ತಾನ ಮೂಲದ ಜೈಷ್ ಎ ಮೊಹಮ್ಮದ್ ಸಂಘಟನೆಯ ನಾಯಕರಾದ ರವೂಫ್ ಅಝಾರ್, ಮೌಲಾನಾ ಮಸೂದ್ ಅಝರ್ ಹಾಗೂ ಅಮ್ಮರ್ ಜೊತೆಗೆ ಅಬು ಅಲಿಯಾಸ್ ಅದ್ನಾನ್​ ನಿಕಟ ಸಂಪರ್ಕ ಹೊಂದಿದ್ದ.

ಜೈಷ್ ಸಂಘಟನೆಯ ಜೊತೆ ಮಾತ್ರವಲ್ಲದೆ ತಾಲಿಬಾನ್​ ಜೊತೆಗೂ ಅದ್ನಾನ್​ ಸಂಪರ್ಕದಲ್ಲಿದ್ದ. ಆವಂತಿಪುರ, ಕಾಕ್​ಪುರ, ಪಂಪೋರ್, ಪುಲ್ವಾಮಾದಲ್ಲಿ ಜೈಷ್ ಸಂಘಟನೆ ಮತ್ತು ತಾಲಿಬಾನ್ ಸಂಘಟನೆಯನ್ನು ಬಲಗೊಳಿಸಲು ಅದ್ನಾನ್ ಸಹಾಯ ಮಾಡುತ್ತಿದ್ದ.

ಇದನ್ನೂ ಓದಿ: Pulwama Encounter: ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಪುಲ್ವಾಮಾ ದಾಳಿಯ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆ

ಜಮ್ಮು-ಕಾಶ್ಮೀರದ ಮೇಲೆ ಕಣ್ಣಿಟ್ಟ ಆಮಿರ್​ ಖಾನ್​; ಗವರ್ನರ್​ ಭೇಟಿ ಬಳಿಕ ಹೊರಬಿತ್ತು ಸುದ್ದಿ

(Jammu and Kashmir Police releases 10 Most wanted Terrorists List)

Published On - 3:00 pm, Tue, 3 August 21