ಕ್ಯಾಬ್ ಚಾಲಕನ ಕೆನ್ನೆಗೆ ಹೊಡೆದ ಲಕ್ನೋ ಯುವತಿ ವಿರುದ್ಧ ಕೇಸ್ ದಾಖಲು; ಟ್ವಿಟ್ಟರ್​ನಲ್ಲಿ ಹೊಸ ಅಭಿಯಾನ ಶುರು

ಕ್ಯಾಬ್ ಚಾಲಕನ ಕೆನ್ನೆಗೆ ಹೊಡೆದ ಲಕ್ನೋ ಯುವತಿ ವಿರುದ್ಧ ಕೇಸ್ ದಾಖಲು; ಟ್ವಿಟ್ಟರ್​ನಲ್ಲಿ ಹೊಸ ಅಭಿಯಾನ ಶುರು
ಕ್ಯಾಬ್​ ಚಾಲಕನಿಗೆ ಥಳಿಸುತ್ತಿರುವ ಲಕ್ನೋದ ಯುವತಿ

Lucknow Girl Thrashing Cab Driver: ಕ್ಯಾಬ್ ಚಾಲಕನಿಗೆ ನ್ಯಾಯ ಸಿಗಬೇಕೆಂದು ಟ್ವಿಟ್ಟರ್​​ನಲ್ಲಿ ಅಭಿಯಾನ ಶುರುವಾಗಿದ್ದು, ಲಕ್ನೋದ ಯುವತಿಯ ಜಾಗದಲ್ಲಿ ಪುರುಷ ಇದ್ದಿದ್ದರೆ ಇಷ್ಟರೊಳಗೆ ಇದು ಇಡೀ ದೇಶಾದ್ಯಂತ ಸುದ್ದಿಯಾಗುತ್ತಿತ್ತು. ಇಲ್ಲೂ ಮಹಿಳಾವಾದವನ್ನು ಹೇರುತ್ತಿರುವುದು ಎಷ್ಟು ಸರಿ? ಎಂದು ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

TV9kannada Web Team

| Edited By: Sushma Chakre

Aug 03, 2021 | 3:47 PM

ಲಕ್ನೋ: ಟ್ರಾಫಿಕ್ ಸಿಗ್ನಲ್​ನಲ್ಲಿ ರಸ್ತೆ ದಾಟುವಾಗ ಕ್ಯಾಬ್ ಚಾಲಕ ತನ್ನ ಕಾಲಿಗೆ ಗುದ್ದಿದ ಎಂದು ಯುವತಿಯೊಬ್ಬಳು ನಡುರಸ್ತೆಯಲ್ಲಿ ಆತನಿಗೆ ಮನಬಂದಂತೆ ಥಳಿಸಿರುವ ವಿಡಿಯೋ ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್​ನಲ್ಲಿ ನಿನ್ನೆ #ArrestLucknowGirl ಎಂಬ ಅಭಿಯಾನ ಶುರುವಾಗಿತ್ತು. ಅದರ ಬೆನ್ನಲ್ಲೇ ಇಂದು #JusticeForCabDriver ಎಂಬ ಅಭಿಯಾನ ಶುರುವಾಗಿದೆ.

ಉತ್ತರ ಪ್ರದೇಶದ ಲಕ್ನೋದ ಅವಾಧ್​ನಲ್ಲಿ ಯುವತಿ ರಸ್ತೆ ದಾಟುವಾಗ ಈ ಘಟನೆ ನಡೆದಿತ್ತು. ಸಿಗ್ನಲ್ ಬಿದ್ದಿದ್ದರೂ ಈ ಕ್ಯಾಬ್​ನವನು ನಾನು ರಸ್ತೆ ದಾಟುವಾಗ ನನ್ನ ಕಾಲಿಗೆ ಕಾರಿನಿಂದ ಗುದ್ದಿದ್ದಾನೆ ಎಂದು ಯುವತಿ ಜಗಳವಾಡಿದ್ದಾಳೆ. ಆ ಚಾಲಕ ಮಾತ್ರ ನಾನೇನೂ ಮಾಡಿಲ್ಲ ಎಂದು ಹೇಳಿದ್ದ. ಸಿಸಿಟಿವಿ ದೃಶ್ಯದಲ್ಲಿ ಕೂಡ ಇಡೀ ಘಟನೆ ರೆಕಾರ್ಡ್ ಆಗಿದ್ದು, ಆಕೆಯಿಂದ ತುಸು ದೂರದಲ್ಲೇ ಬ್ರೇಕ್ ಹಾಕಿ ಕ್ಯಾಬ್ ಚಾಲಕ ಕಾರನ್ನು ನಿಲ್ಲಿಸಿದ್ದ. ಅಷ್ಟರಲ್ಲೇ ಕಿಟಿಕಿ ಬಳಿ ಬಂದ ಆಕೆ ಆತನನ್ನು ಕೆಳಗಿಳಿಯುವಂತೆ ಗದರಿಸಿ ಎಲ್ಲರೆದುರು ಕೆನ್ನೆಗೆ ಬಾರಿಸಿದ್ದಳು. ಹೀಗಾಗಿ, ಟ್ವಿಟ್ಟಿಗರು ಆಕೆಯನ್ನು ಅರೆಸ್ಟ್ ಮಾಡಿ ಎಂದು ಅಭಿಯಾನ ನಡೆಸಿದ್ದರು. ಈ ಪ್ರಕರಣದ ಸುತ್ತಲೂ ಮಹಿಳಾವಾದ, ಜಾತೀಯತೆ ಕೂಡ ಸುತ್ತುವರೆದಿದೆ. ಆಕೆ ಒಬ್ಬಳು ಯುವತಿ ಎಂಬ ಕಾರಣಕ್ಕೆ ಆಕೆಯನ್ನು ಅಮಾಯಕಳು ಎಂದು ಬಿಂಬಿಸಬೇಡಿ. ಇದೇ ರೀತಿ ಪುರುಷನೊಬ್ಬ ಮಹಿಳೆಯ ಮೇಲೆ ಕೈ ಮಾಡಿದ್ದರೆ ಅದರ ಕತೆಯೇ ಬೇರೆ ಆಗಿರುತ್ತಿತ್ತು. ಆದರೆ, ಆಕೆಯನ್ನು ಇನ್ನೂ ಬಂಧಿಸಿಲ್ಲವೇಕೆ? ಎಂದು ಹಲವರು ಟ್ವಿಟ್ಟರ್​​ನಲ್ಲಿ ಪ್ರಶ್ನಿಸಿದ್ದಾರೆ.

ಅಲ್ಲದೆ, ಆ ಕ್ಯಾಬ್ ಚಾಲಕ ಮುಸ್ಲಿಂ ಆಗಿರುವುದು ಕೂಡ ಈಗ ಚರ್ಚೆಯಾಗುತ್ತಿದೆ. ಈ ಪ್ರಕರಣದಲ್ಲಿ ಧರ್ಮವನ್ನೂ ಎಳೆದುತಂದು ಸಂತ್ರಸ್ತ ಮುಸ್ಲಿಂ ಧರ್ಮದವನಾಗಿರುವುದರಿಂದ ಆತನಿಗೆ ನ್ಯಾಯ ಸಿಕ್ಕಿಲ್ಲ ಎಂದು ಕೂಡ ಟೀಕಿಸಲಾಗಿದೆ. ಈಗಾಗಲೇ ಆ ಕ್ಯಾಬ್ ಚಾಲಕನದ್ದೇನೂ ತಪ್ಪಿಲ್ಲ ಎಂಬುದು ಸಿಸಿಟಿವಿ ದೃಶ್ಯಾವಳಿಯಿಂದ ಖಚಿತವಾಗಿರುವುದರಿಂದ ಆ ಯುವತಿಯ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.

ಕಾರು ನಿಲ್ಲುತ್ತಿದ್ದಂತೆ ಆತನ ಬಳಿ ಬಂದಿರುವ ಯುವತಿ ಆತನನ್ನು ಕೆಳಗಿಳಿಸಿ, ಹೊಡೆದಿದ್ದಲ್ಲದೆ ಕಾರಿನ ಗಾಜನ್ನು ಕೂಡ ಒಡೆದುಹಾಕಿದ್ದಾಳೆ. ಈ ಹಿನ್ನೆಲೆಯಲ್ಲಿ ನಿನ್ನೆಯೇ ಕ್ಯಾಬ್ ಚಾಲಕ ಆಕೆಯ ವಿರುದ್ಧ ದೂರು ದಾಖಲಿಸಿದ್ದರು. ಅದರಂತೆ ಆಕೆಯ ಮೇಲೆ ಕೇಸ್ ದಾಖಲಿಸಲಾಗಿದೆ.

ಟ್ರಾಫಿಕ್​ನ ಸಿಗ್ನಲ್​ನಲ್ಲಿ ಈ ಘಟನೆ ನಡೆದಿದ್ದು, ನಡುರಸ್ತೆಯಲ್ಲಿ ಕ್ಯಾಬ್ ಅನ್ನು ನಿಲ್ಲಿಸಿ ಯುವತಿ ಜಗಳವಾಡಿದ್ದರಿಂದ ಸುಮಾರು 20 ನಿಮಿಷಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆ ಕ್ಯಾಬ್ ಚಾಲಕನ ಹಿಂದೆ ಹೋಗಿ ಮತ್ತೆ ಮತ್ತೆ ಹೊಡೆದಿರುವ ಯುವತಿಗೆ ಬುದ್ಧಿ ಹೇಳಲು ಬಂದ ಬೇರೆ ಕಾರಿನ ಚಾಲಕನಿಗೂ ಆಕೆ ಥಳಿಸಿದ್ದಳು. ಇದೆಲ್ಲ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದರೂ ಪೊಲೀಸರು ಆಕೆಯನ್ನು ಇನ್ನೂ ಯಾಕೆ ಬಂಧಿಸಿಲ್ಲ? ಎಂದು ಟ್ವಿಟ್ಟಿಗರು ಪ್ರಶ್ನಿಸಿದ್ದಾರೆ.

ಜೀನ್ಸ್- ಟಿ ಶರ್ಟ್ ತೊಟ್ಟಿದ್ದ ಯುವತಿ ಕ್ಯಾಬ್ ಚಾಲಕನಿಗೆ ಹೊಡೆಯುವಾಗ ಟ್ರಾಫಿಕ್ ಪೊಲೀಸ್ ಬಂದು ಏನಾಯಿತೆಂದು ಕೇಳಿದ್ದಾರೆ. ಆಗ ಅವರ ಮೇಲೂ ರೇಗಾಡಿದ ಯುವತಿ ಕ್ಯಾಬ್ ಡ್ರೈವರ್​ಗೆ ಹೊಡೆಯಲಾರಂಭಿಸಿದ್ದಾಳೆ. ಈ ವಿಡಿಯೋವನ್ನು ಅಲ್ಲಿದ್ದವರಾರೋ ರೆಕಾರ್ಡ್ ಮಾಡಿದ್ದು, ಸಿಸಿಟಿವಿಯಲ್ಲೂ ಈ ದೃಶ್ಯಾವಳಿ ರೆಕಾರ್ಡ್ ಆಗಿದೆ. ಕಾಲರ್ ಹಿಡಿದು ಕ್ಯಾಬ್ ಚಾಲಕನಿಗೆ ಹೊಡೆಯುತ್ತಿದ್ದರೂ ಬೇರೆಯವರೆಲ್ಲ ಸುಮ್ಮನೆ ನೋಡುತ್ತ ನಿಂತಿದ್ದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Lucknow Girl Video: ಪೊಲೀಸ್ ಎದುರಲ್ಲೇ ಟ್ರಾಫಿಕ್​ ಮಧ್ಯೆ ಕ್ಯಾಬ್​ ಚಾಲಕನಿಗೆ ಥಳಿಸಿದ ಯುವತಿ; ಶಾಕಿಂಗ್ ವಿಡಿಯೋ ವೈರಲ್

Viral Video: ಯುವತಿಯರೂ ನಾಚುವಂತೆ ಡ್ಯಾನ್ಸ್ ಮಾಡುವ 78ರ ಅಜ್ಜಿಯ ವಿಡಿಯೋ ವೈರಲ್; ಈಕೆ ಈಗ ಟಿಕ್ ಟಾಕ್ ಸ್ಟಾರ್!

(Justice For Cab Driver: FIR Registered against Lucknow Girl Thrashes Cab driver in Shocking Video)

Follow us on

Related Stories

Most Read Stories

Click on your DTH Provider to Add TV9 Kannada