ಟಾಯ್ಲೆಟ್ನಲ್ಲಿಯೇ ಇರೋ ಗಂಡ…ಬಿಟ್ಟು ಹೋದ ಹೆಂಡ್ತಿ..!
Trending Story: ಕೆಲವರು ಆತ ಬೇರೆ ಯಾರೊಂದಿಗೋ ಚಾಟ್ ಮಾಡುತ್ತಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಗಂಡನನ್ನು ವೈದ್ಯರಿಗೆ ತೋರಿಸಿ ಎಂದು ಸಲಹೆ ನೀಡಿದ್ದಾರೆ. ಮತ್ತೆ ಕೆಲವರು ನಿಮ್ಮ ತಾಳ್ಮೆಗೆ ನೊಬೆಲ್ ಪ್ರಶಸ್ತಿ ಸಿಗಬಹುದು ಎಂದು ಕಿಚಾಯಿಸಿದ್ದಾರೆ.
ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ ಎಂಬ ಮಾತಿದೆ. ಈ ಆಡುಮಾತು ಸತಿ-ಪತಿಯ ಮಧುರ ಬಾಂಧ್ಯವಕ್ಕೆ ಉಪಮೆಯ ಎಂದೇ ಹೇಳಬಹುದು. ಆದರೂ ಗಂಡ-ಹೆಂಡಿರ ನಡುವೆ ಜಗಳ ಏತಕ್ಕಾಯಿತು ಎಂಬುದನ್ನೂ ಕೂಡ ಕೆಲವೊಂದು ಬಾರಿ ಯೋಚಿಸಬೇಕಾಗುತ್ತದೆ. ಆಗ ಸಿಗುವ ಕಾರಣಗಳು ಕೆಲವೊಮ್ಮೆ ವಿಚಿತ್ರವಾಗಿರಬಹುದು ಅಥವಾ ತಮಾಷೆ ಅನಿಸಬಹುದು. ಇಲ್ಲೂ ಕೂಡ ಅಂತಹದ್ದೇ ಜಗಳ ನಡೆದಿದೆ. ಇದು ಇತರರಿಗೆ ತಮಾಷೆ ಎನಿಸಿದರೂ, ಆಕೆಗೆ ಮಾತ್ರ ಅದೊಂದು ವಿಚಿತ್ರ ಅನುಭವ.
ಹೌದು, ವಿದೇಶಿ ಮಹಿಳೆಯೊಬ್ಬಳು ಇತ್ತೀಚೆಗೆ ತನ್ನ ಗಂಡನ ಜೊತೆಗಿನ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಅಂತಿಂಥ ಅನುಭವವಲ್ಲ ಎಂದೇ ಆಕೆಯೇ ತನ್ನ ಕಥೆಯನ್ನು ಶುರು ಮಾಡಿದ್ದಾರೆ. ನನ್ನ ಗಂಡನ ಹೆಸರು ಜಸ್ಟಿನ್. ಆತನಿಗೆ ವಿಚಿತ್ರ ಅಭ್ಯಾಸವೊಂದಿದೆ. ಅದೇನೆಂದರೆ ಟಾಯ್ಲೆಟ್ ಅಥವಾ ವಾಶ್ರೂಮ್ಗೆ ಹೋದರೆ ಬೇಗನೆ ಬರಲ್ಲ. ಅದು ಕೂಡ ಕಡಿಮೆ ಎಂದರೂ 45 ನಿಮಿಷಗಳನ್ನು ಟಾಯ್ಲೆಟ್ನಲ್ಲೇ ಕಳೆಯುತ್ತಾನೆ ಅಂದಿದ್ದಾರೆ.
ಹೀಗೆ ದಿನಕ್ಕೆ ಜಸ್ಟಿನ್ 4-5 ಬಾರಿ ಟಾಯ್ಲೆಟ್ಗೆ ಹೋಗುತ್ತಾನೆ. ನೀವೇ ಯೋಚಿಸಿ ನೋಡಿ, ನಾಲ್ಕೈದು ಬಾರಿ ಹೋದರೆ ದಿನದಲ್ಲಿ ಎರಡೂವರೆ ಗಂಟೆ ಆತ ಟಾಯ್ಲೆಟ್ನಲ್ಲೇ ಕಳೆಯುತ್ತಿದ್ದಾನೆ. ಇತ್ತ ಪ್ರತಿದಿನ ನಾನು ಆತನಿಗಾಗಿ ಕಾಯೋದೇ ಬಂತು. ಹೀಗೆ ನಾನು ಆತನನ್ನು ಸಹಿಕೊಳ್ಳೋದೇ ಆಗೋಯ್ತು ಎಂದು ನೋವು ತೋಡಿಕೊಂಡಿದ್ದಾರೆ ಜಸ್ಟಿನ್ ಪತ್ನಿ.
ಅಷ್ಟೇ ಅಲ್ಲದೆ ಇತ್ತೀಚೆಗೆ ನಾವಿಬ್ಬರು ರೆಸ್ಟೊರೆಂಟ್ಗೆ ಹೋಗಿದ್ವಿ. ಆತ ವಾಶ್ರೂಮ್ಗೆ ಹೋಗಿ ಬರ್ತೀನಿ ಅಂದಾಗಲೇ ನಾ ಹೇಳಿದ್ದೆ, ನೋಡಿ ನಾವಿಬ್ಬರು ಇಲ್ಲಿ ಫುಡ್ ಸೇವಿಸಲು ಬಂದಿದ್ದೀವಿ. ಆದಷ್ಟು ಬೇಗ ಬರಬೇಕು ಎಂದು. ಅವನು ಕೂಡ ಓಕೆ, ಕೆಲ ನಿಮಿಷಗಳಲ್ಲೇ ಬರ್ತೀನಿ ಅಂತ ಹೋಗಿದ್ದ. ಎಂದಿನಂತೆ ನಾನು ಮಾತ್ರ ಕಾಯುತ್ತಾ ಕೂರಬೇಕಾಯಿತು.
ನಾವು ಆರ್ಡರ್ ಮಾಡಿದ ಆಹಾರಗಳು ಟೇಬಲ್ ಮೇಲೆ ಬಂದವು. ಆದರೆ ಜಸ್ಟಿನ್ ಮಾತ್ರ ಬಂದಿರಲಿಲ್ಲ. ಸುಮಾರು ಇಪ್ಪತ್ತು ನಿಮಿಷಗಳ ನಂತರ ನಾನು ಅವನಿಗೆ ಕರೆ ಮಾಡಿದೆ. ಫುಡ್ ಬಂದಿದೆ ಎಂದು ಸಂದೇಶ ಕಳುಹಿಸಿದೆ. ತುಂಬಾ ಹೊತ್ತಾಗಿದ್ದರಿಂದ ಏನೋ ಎಡವಟ್ಟಾಗಿರಬಹುದು ಎಂದು ನಾನೇ ಟಾಯ್ಲೆಟ್ ಬಳಿ ಹೋಗಿ ಕೂಗಿ ನೋಡಿದೆ. ಆಗ ಜಸ್ಟ್ ಒಂದೆರಡು ನಿಮಿಷದಲ್ಲಿ ಬರ್ತೀನಿ ಅಂದ್ರು.
ಇದಾಗ್ಯೂ ಆತನ ಪತ್ತೆಯೇ ಇರಲಿಲ್ಲ. ಇತ್ತ ನಾನು ಆರ್ಡರ್ ಮಾಡಿದ್ದ ಆಹಾರವನ್ನು ತಿಂದು ಮುಗಿಸಿದೆ. ಕೊನೆಯ ಬಾರಿ ಫೋನ್ ಮಾಡಿದರೂ ರಿಸೀವ್ ಮಾಡಿರಲಿಲ್ಲ. ನಂಗೂ ಕೋಪ ನೆತ್ತಿಗೇರಿತ್ತು. ನನ್ನ ತಾಳ್ಮೆಗೂ ಒಂದು ಮಿತಿ ಇರುತ್ತಲ್ವಾ, ಹೀಗಾಗಿ ನಾನು ವೈಟರ್ನ್ನು ಕರೆದು ಬಿಲ್ ಅನ್ನು ಬೇರೆ ಬೇರೆಯಾಗಿ ನೀಡುವಂತೆ ತಿಳಿಸಿದೆ. ಅದರಂತೆ ನಾನು ಸೇವಿಸಿದ ಆಹಾರದ ಬಿಲ್ ಪಾವತಿಸಿ ಕ್ಯಾಬ್ನಲ್ಲಿ ಮನೆಗೆ ವಾಪಾಸ್ ಬಂದೆ.
ಇದಾಗಿ ಸುಮಾರು 20 ನಿಮಿಷಗಳ ಬಳಿಕ ಗಂಡ ಮನೆಗೆ ಮರಳಿದ್ದ. ಬಂದೊಡನೆ ನನ್ನನ್ನೇ ಸ್ವಾರ್ಥಿ ಎಂದು ಬೈಯಲು ಆರಂಭಿಸಿದ್ದ. ನನ್ನ ಮೊಬೈಲ್ ಬ್ಯಾಟರಿ ಮುಗಿದಿದ್ದರಿಂದ ನಾನು ಕಾಲ್ ಸ್ವೀಕರಿಸಿಲ್ಲ ಎಂದು ಸಮರ್ಥಿಸಿಕೊಂಡ. ತನ್ನದೆಯಾದ ವಾದಗಳನ್ನು ನನ್ನ ಮುಂದಿಡುತ್ತಿದ್ದ. ನನಗೆ ಇದು ವಿಚಿತ್ರ ಅನಿಸಲಾರಂಭಿಸಿದೆ. ಒಬ್ಬರು ಪ್ರತಿ ದಿನ 4-5 ಬಾರಿ 45 ನಿಮಿಷಗಳ ಕಾಲ ಟಾಯ್ಲೆಟ್ನಲ್ಲಿ ಕಳೆದರೆ ಪತ್ನಿ ಪರಿಸ್ಥಿತಿ ಹೇಗಿರಬೇಡ ಹೇಳಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಪ್ರಶ್ನಿಸಿದ್ದಾರೆ.
ಈ ಪೋಸ್ಟ್ ಈಗ ಅಮೆರಿಕಾ ಸೇರಿದಂತೆ ವಿಶ್ವದಾದ್ಯಂತ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ. ಕೆಲವರು ತಮ್ಮ ಗಂಡನಿಗೆ ಮೊಬೈಲ್ ಹುಚ್ಚು ಇರಬಹುದು ಎಂದರೆ, ಇನ್ನು ಕೆಲವರು ಆತ ಬೇರೆ ಯಾರೊಂದಿಗೋ ಚಾಟ್ ಮಾಡುತ್ತಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಗಂಡನನ್ನು ವೈದ್ಯರಿಗೆ ತೋರಿಸಿ ಎಂದು ಸಲಹೆ ನೀಡಿದ್ದಾರೆ. ಮತ್ತೆ ಕೆಲವರು ನಿಮ್ಮ ತಾಳ್ಮೆಗೆ ನೊಬೆಲ್ ಪ್ರಶಸ್ತಿ ಸಿಗಬಹುದು ಎಂದು ಕಿಚಾಯಿಸಿದ್ದಾರೆ.
ಇದನ್ನೂ ಓದಿ: ಕಡಿಮೆ ಬೆಲೆಯ ಪವರ್ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್ಟಾಪ್ನ್ನು ಚಾರ್ಜ್ ಮಾಡಬಹುದು
ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ
ಇದನ್ನೂ ಓದಿ: LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ
(Viral Story: Man Spends 45 Mins in Washroom, Wife Leaves Him Behind)