35 ವರ್ಷಗಳ ಹಿಂದಿನ ಕಾಶ್ಮೀರಿ ಪಂಡಿತ್ ನರ್ಸ್ ಸರಳಾ​ ಕೊಲೆ ಪ್ರಕರಣ, ಉಗ್ರ ಯಾಸಿನ್ ಮಲಿಕ್ ಮನೆ ಮೇಲೆ ಎಸ್​ಐಎ ದಾಳಿ

ಮೂರು ದಶಕಗಳ ಹಿಂದೆ 27 ವರ್ಷದ ಕಾಶ್ಮೀರಿ ಪಂಡಿತ್ ನರ್ಸ್‌ನ ಕ್ರೂರ ಹತ್ಯೆ ಪ್ರಕರಣವನ್ನು ಮತ್ತೆ ತೆರೆಯುವ ಮೂಲಕ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಿಶೇಷ ತನಿಖಾ ಸಂಸ್ಥೆ (SIA) ಸಾಕ್ಷ್ಯಗಳನ್ನು ಸಂಗ್ರಹಿಸಲು ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿತು. ಏಪ್ರಿಲ್ 18, 1990 ರಂದು ಸೌರಾದ ಶೇರ್-ಇ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (SKIMS) ಹಬ್ಬಾ ಖಾತೂನ್ ಹಾಸ್ಟೆಲ್‌ನಿಂದ ಅಪಹರಿಸಲ್ಪಟ್ಟ ಸರಳಾ ಭಟ್ ಅವರ ಹತ್ಯೆಗೆ ಸಂಬಂಧಿಸಿದಂತೆ ಶ್ರೀನಗರ ಜಿಲ್ಲೆಯಾದ್ಯಂತ ಎಂಟು ಸ್ಥಳಗಳಲ್ಲಿ ಎಸ್​ಐಎ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮರುದಿನ ಬೆಳಗ್ಗೆ ಮಲ್ಲಾಬಾಗ್‌ನ ಉಮರ್ ಕಾಲೋನಿಯಲ್ಲಿ ಗುಂಡೇಟಿನ ಗಾಯಗಳೊಂದಿಗೆ ಭಟ್ ದೇಹವು ಪತ್ತೆಯಾಗಿತ್ತು.

35 ವರ್ಷಗಳ ಹಿಂದಿನ ಕಾಶ್ಮೀರಿ ಪಂಡಿತ್ ನರ್ಸ್ ಸರಳಾ​ ಕೊಲೆ ಪ್ರಕರಣ, ಉಗ್ರ ಯಾಸಿನ್ ಮಲಿಕ್ ಮನೆ ಮೇಲೆ ಎಸ್​ಐಎ ದಾಳಿ
ನರ್ಸ್​
Image Credit source: Aaj Tak

Updated on: Aug 12, 2025 | 10:40 AM

ಜಮ್ಮು ಮತ್ತು ಕಾಶ್ಮೀರ, ಆಗಸ್ಟ್​ 12: ಮೂವತ್ತೈದು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತ್(Kashmiri Pandit) ನರ್ಸ್​ ಸರಳಾ ಭಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಯಾಸಿನ್ ಮಲಿಕ್ ಮನೆ ಮೇಲೆ ವಿಶೇಷ ತನಿಖಾ ಸಂಸ್ಥೆ ಎಸ್​ಐಎ ದಾಳಿ ನಡೆದಿದೆ. 1990 ರಲ್ಲಿ ನಡೆದ ಕಾಶ್ಮೀರಿ ಪಂಡಿತ್ ನರ್ಸ್ ಸರಳಾ ಭಟ್ ಅವರ ಹತ್ಯೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ಸಂಸ್ಥೆ (SIA) ಶ್ರೀನಗರದ 8 ಸ್ಥಳಗಳ ಮೇಲೆ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಉಗ್ರ ಯಾಸಿನ್ ಮಲಿಕ್ ಮನೆ ಹಾಗೂ ಮಾಜಿ ಕಮಾಂಡರ್​ಗಳ ಅಡಗುತಾಣಗಳ ಮೇಲೂ ದಾಳಿ ನಡೆಸಲಾಯಿತು.

1990 ರ ಏಪ್ರಿಲ್‌ನಲ್ಲಿ ನಡೆದ ಈ ಕೊಲೆಯ ತನಿಖೆಗಾಗಿ SIA ದಾಳಿ ನಡೆಸಿದ್ದು ಇದೇ ಮೊದಲು. 1990 ರ ದಶಕದ ಆರಂಭದಲ್ಲಿ ನಡೆದ ಕಾಶ್ಮೀರಿ ಪಂಡಿತರ ಅನೇಕ ಕೊಲೆಗಳ ಪ್ರಕರಣಗಳನ್ನು ಮತ್ತೆ ತೆರೆಯಲು ಲೆಫ್ಟಿನೆಂಟ್ ಗವರ್ನರ್ ಈ ಹಿಂದೆ ನಿರ್ಧರಿಸಿದ್ದರು.

ಶ್ರೀನಗರದ ಮೈಸುಮಾ ಪ್ರದೇಶದಲ್ಲಿರುವ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ನ ಮಾಜಿ ಮುಖ್ಯಸ್ಥ ಯಾಸಿನ್ ಮಲಿಕ್ ನಿವಾಸದ ಮೇಲೂ ದಾಳಿ ನಡೆದಿದೆ. 1990 ರ ದಶಕದ ಆರಂಭದಲ್ಲಿ ನರ್ಸ್ ಸರಳಾ ಭಟ್ ಅವರನ್ನು ಅಪಹರಿಸಲಾಗಿತ್ತು ಮತ್ತು ಮರುದಿನ ಶ್ರೀನಗರದ ಸೌರಾ ಪ್ರದೇಶದಿಂದ ಗುಂಡೇಟಿನಿಂದ ಛಿದ್ರಗೊಂಡ ಅವರ ದೇಹವು ಪತ್ತೆಯಾಗಿತ್ತು.

ಶೇರ್-ಎ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು, ಅಲ್ಲಿಂದ ಅವರನ್ನು ಅಪಹರಿಸಲಾಗಿತ್ತು. ಆರಂಭದಲ್ಲಿ ಈ ಪ್ರಕರಣವನ್ನು ನಿಜೀನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ನಂತರ ಪ್ರಕರಣವನ್ನು ಎಸ್‌ಐಎಗೆ ವರ್ಗಾಯಿಸಲಾಯಿತು. ಜೆಕೆಎಲ್‌ಎಫ್‌ನ ಮಾಜಿ ನಾಯಕ ಪೀರ್ ನೂರುಲ್ ಹಕ್ ಶಾ ಅಲಿಯಾಸ್ ಏರ್ ಮಾರ್ಷಲ್ ಕೂಡ ಬಂಧಿತರಲ್ಲಿ ಸೇರಿದ್ದಾರೆ.

ಮತ್ತಷ್ಟು ಓದಿ: ಕಾಶ್ಮೀರಿ ಪಂಡಿತರನ್ನು ಹತ್ಯೆಗೈದ ಉಗ್ರನನ್ನು ಸದೆಬಡಿದ ಭದ್ರತಾ ಪಡೆ

ಏಜೆನ್ಸಿ ಅಧಿಕಾರಿಗಳು ಶೋಧಿಸಿದ ಎಂಟು ಸ್ಥಳಗಳಲ್ಲಿ ಆತನ ಮನೆಯೂ ಒಂದು. ಜೆಕೆ ಪೊಲೀಸರ ಮೂಲಗಳ ಪ್ರಕಾರ, ಭಟ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್ಎಫ್) ಗೆ ಸೇರಿದ ಭಯೋತ್ಪಾದಕರು ಅಪಹರಿಸಿ ಕೊಂದಿದ್ದಾರೆ.

ಸರ್ಕಾರಿ ಉದ್ಯೋಗಗಳನ್ನು ತ್ಯಜಿಸಿ ಕಣಿವೆಯನ್ನು ತೊರೆಯುವಂತೆ ಪಂಡಿತರಿಗೆ ನೀಡಲಾಗಿದ್ದ ಉಗ್ರಗಾಮಿ ಆದೇಶಗಳನ್ನು ಭಟ್ ಧಿಕ್ಕರಿಸಿದ್ದರು. ಜೆಕೆಎಲ್‌ಎಫ್‌ನ ಅಧಿಕಾರವನ್ನು ಬಹಿರಂಗವಾಗಿ ಪ್ರಶ್ನಿಸಿದ್ದರು, ಇದು ಅವರ ಹತ್ಯೆಗೆ ಕಾರಣವಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರ ಮರಣದ ನಂತರವೂ ಅವರ ಕುಟುಂಬಕ್ಕೆ ಬೆದರಿಕೆಗಳು ಎದುರಾಗಿದ್ದವು ಮತ್ತು ಸ್ಥಳೀಯರು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸದಂತೆ ಎಚ್ಚರಿಸಿದ್ದರು ಎಂದು ಅವರು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ