ಜಮ್ಮು ಮತ್ತು ಕಾಶ್ಮೀರದ ರಜೌರಿಯ ರಾಮ ಮಂದಿರ ಬಳಿ ಶಂಕಿತ ಉಗ್ರರ ದಾಳಿ; 2 ಸಾವು, 4 ಮಂದಿಗೆ ಗಾಯ

Terror attack in Rajouri ವರದಿಗಳ ಪ್ರಕಾರ, ರಾಜೌರಿಯ ಧಂಗ್ರಿ ಗ್ರಾಮದ ರಾಮ ಮಂದಿರದ ಬಳಿ ಶಂಕಿತ ಭಯೋತ್ಪಾದಕ ದಾಳಿ ನಡೆದಿದೆ. ಬಂದೂಕು ಹಿಡಿದ ಕೆಲವರು ಕಾರಿನಲ್ಲಿ ಬಂದು ಆ ಪ್ರದೇಶದಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಜೌರಿಯ ರಾಮ ಮಂದಿರ ಬಳಿ ಶಂಕಿತ ಉಗ್ರರ ದಾಳಿ; 2 ಸಾವು, 4 ಮಂದಿಗೆ ಗಾಯ
ಪ್ರಾತಿನಿಧಿಕ ಚಿತ್ರ
Edited By:

Updated on: Jan 01, 2023 | 8:59 PM

ರಜೌರಿ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಜೌರಿಯಲ್ಲಿ (Rajouri) ನಡೆದ ಭಯೋತ್ಪಾದಕ ದಾಳಿಯಲ್ಲಿ (Terror attack) ಇಬ್ಬರು ಸಾವಿಗೀಡಾಗಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ರಾಜೌರಿಯ ಧಂಗ್ರಿ ಗ್ರಾಮದ ರಾಮ ಮಂದಿರದ ಬಳಿ ಶಂಕಿತ ಭಯೋತ್ಪಾದಕ ದಾಳಿ ನಡೆದಿದೆ. ಬಂದೂಕು ಹಿಡಿದ ಕೆಲವರು ಕಾರಿನಲ್ಲಿ ಬಂದು ಆ ಪ್ರದೇಶದಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶೂಟೌಟ್ ನಂತರ, ಅವರು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಧಂಗ್ರಿ ಗ್ರಾಮಕ್ಕೆ ಭದ್ರತಾ  ಪಡೆ ಮತ್ತು ಪೊಲೀಸರು ದೌಡಾಯಿಸಿದ್ದು  ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು  ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್  ವರದಿ ಮಾಡಿದೆ. ರಾಜೌರಿಯ ಮೇಲಿನ ಧಂಗ್ರಿ ಗ್ರಾಮದಲ್ಲಿ  ಸುಮಾರು 50 ಮೀಟರ್ ದೂರದಲ್ಲಿ 3 ಮನೆಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವಿಗೀಡಾಗಿದ್ದು ನಾಲ್ವರು ಗಾಯಗೊಂಡಿದ್ದಾರೆ. ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಜಮ್ಮುವಿನ ಎಡಿಜಿಪಿ  ಮುಖೇಶ್ ಸಿಂಗ್ ಹೇಳಿದ್ದಾರೆ.


ಭದ್ರತಾ ಪಡೆಗಳು ಶನಿವಾರ ಜಮ್ಮು ಮತ್ತು ಕಾಶ್ಮೀರದ ಗಡಿ ಪಟ್ಟಣವಾದ ರಾಜೌರಿಯ ಕೆಲವು ಭಾಗಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ತಿಂಗಳ ಆರಂಭದಲ್ಲಿ ಸೇನಾ ಶಿಬಿರದ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇನೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜಂಟಿ ತಂಡಗಳು ಫಲ್ಯಾನ ಮತ್ತು ಪ್ರವಾಸೋದ್ಯಮ ಸ್ವಾಗತ ಕೇಂದ್ರ ಮತ್ತು ಮೀನು ಕೊಳ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಿವೆ.

ಕಾರ್ಯಾಚರಣೆಯ ಸಮಯದಲ್ಲಿ ಸ್ನಿಫರ್ ಡಾಗ್‌ಗಳನ್ನು ಕೂಡಾ ಬಳಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ 16 ರಂದು ಸೇನಾ ಶಿಬಿರದ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಫಲ್ಯಾನ ಗ್ರಾಮದ ಇಬ್ಬರು ಸ್ಥಳೀಯರು ಸಾವನ್ನಪ್ಪಿದ್ದರು ಮತ್ತು ಒಬ್ಬರು ಗಾಯಗೊಂಡಿದ್ದರು.

ಇದನ್ನೂ ಓದಿ:ತ್ರಿಪುರಾ ಸಚಿವ ನರೇಂದ್ರ ಚಂದ್ರ ದೆಬ್ಬರ್ಮಾ ವಿಧಿವಶ

ಗುಂಡಿನ ದಾಳಿಗೆ ಅಪರಿಚಿತ ಭಯೋತ್ಪಾದಕರು ಕಾರಣ ಎಂದು ಸೇನೆ ಆರೋಪಿಸಿದರೆ, ಸ್ಥಳೀಯರು ಪಡೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ತನಿಖೆಗೆ ಒತ್ತಾಯಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 8:43 pm, Sun, 1 January 23