Jawaharlal Nehru Death Anniversary 2021: ಜವಾಹರ ಲಾಲ್ ನೆಹರೂ ಕುರಿತಾದ 10 ಆಸಕ್ತಿಕರ ಸಂಗತಿಗಳು

|

Updated on: May 27, 2021 | 10:41 AM

Jawaharlal Nehru: ನೆಹರೂ ಅವರ ಸುತ್ತ ಹಿರಿಮೆಯಷ್ಟೇ ವಿವಾದಗಳೂ ಇವೆ. ಅದೇ ಕಾರಣಕ್ಕಾಗಿ ಇಂದಿಗೂ ಅವರ ಪರ-ವಿರೋಧದ ಅಭಿಪ್ರಾಯಗಳು ಅಲ್ಲಲ್ಲಿ ಕೇಳಿ ಬರುತ್ತಿರುತ್ತವೆ. ಇದರ ಹೊರತಾಗಿಯೂ ನೆಹರೂ ಅವರ ಬಗ್ಗೆ ಅಷ್ಟಾಗಿ ಬೆಳಕಿಗೆ ಬರದ ಅಥವಾ ಕಡಿಮೆ ಎಂಬಷ್ಟು ಪ್ರಚುರಗೊಂಡಿರುವ ಅನೇಕ ಸಂಗತಿಗಳಿವೆ.

Jawaharlal Nehru Death Anniversary 2021: ಜವಾಹರ ಲಾಲ್ ನೆಹರೂ ಕುರಿತಾದ 10 ಆಸಕ್ತಿಕರ ಸಂಗತಿಗಳು
ಜವಾಹರ ಲಾಲ್ ನೆಹರೂ
Follow us on

ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರ ಲಾಲ್ ನೆಹರೂ ಕಾಲವಾಗಿ ಸುಮಾರು ಐದೂವರೆ ದಶಕ ಕಳೆದಿದೆ. 14 ನವೆಂಬರ್, 1889ರಂದು ಜನಿಸಿದ ಜವಾಹರ ಲಾಲ್ ನೆಹರೂ 1964ರ ಮೇ 27ರಂದು ವಿಧಿವಶರಾದರು. ವಕೀಲರ ಪುತ್ರನಾಗಿ ಜನಿಸಿದ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಓರ್ವ ನಾಯಕ, ರಾಜಕಾರಣಿ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಕ್ಕಳ ಪ್ರೀತಿಯ ಚಾಚಾ ನೆಹರೂ ಎಂದು ಗುರುತಿಸಿಕೊಂಡ ಅವರು ವಿದೇಶದಲ್ಲಿ ವ್ಯಾಸಂಗ ಮಾಡಿ 1912ರಲ್ಲಿ ಭಾರತಕ್ಕೆ ಮರಳಿದರು.

ಮಹಾತ್ಮ ಗಾಂಧೀಜಿಯವರ ಸಂಪರ್ಕಕ್ಕೆ ಬಂದ ನೆಹರೂ 1912ರಲ್ಲಿ ಅಸಹಕಾರ ಚಳವಳಿಯ ಭಾಗವೂ ಆಗಿದ್ದರು. ನಂತರ ಅದಕ್ಕಾಗಿ ಜೈಲು ವಾಸವನ್ನೂ ಅನುಭವಿಸಿದರಾದರೂ ಬ್ರಿಟೀಷರ ಬೆದರಿಕೆ ನೆಹರೂ ಅವರನ್ನು ಭಾರತಕ್ಕೆ ಸ್ವಾತಂತ್ರ್ಯ ಬೇಕೆನ್ನುವ ಆಲೋಚನೆಯಿಂದ ವಿಮುಖರನ್ನಾಗಿಸಲು ಸಾಧ್ಯವಾಗಲಿಲ್ಲ. ನಮ್ಮ ಗುರಿ ಸ್ವಾತಂತ್ರ್ಯದತ್ತ ಎಂದು ಹೆಜ್ಜೆ ಹಾಕಿದ ಅವರನ್ನು ಇಂದಿಗೂ ಸ್ಮರಿಸಲಾಗುತ್ತದೆ. 15 ಆಗಸ್ಟ್ 1947ರಲ್ಲಿ ಸ್ವಾತಂತ್ರ್ಯ ಸಿಕ್ಕ ನಂತರ ಭಾರತದ ಪ್ರಧಾನ ಮಂತ್ರಿ ಪಟ್ಟಕ್ಕೇರಿದ ಜವಾಹರ ಲಾಲ್ ನೆಹರೂ ದೇಶದ ಅಭಿವೃದ್ಧಿಗಾಗಿ ಅವಿರತ ಶ್ರಮಿಸಿದರು.

ಇದೆಲ್ಲದರ ಜತೆಗೆ ನೆಹರೂ ಅವರ ಸುತ್ತ ಹಿರಿಮೆಯಷ್ಟೇ ವಿವಾದಗಳೂ ಇವೆ. ಅದೇ ಕಾರಣಕ್ಕಾಗಿ ಇಂದಿಗೂ ಅವರ ಪರ-ವಿರೋಧದ ಅಭಿಪ್ರಾಯಗಳು ಅಲ್ಲಲ್ಲಿ ಕೇಳಿ ಬರುತ್ತಿರುತ್ತವೆ. ಇದರ ಹೊರತಾಗಿಯೂ ನೆಹರೂ ಅವರ ಬಗ್ಗೆ ಅಷ್ಟಾಗಿ ಬೆಳಕಿಗೆ ಬರದ ಅಥವಾ ಕಡಿಮೆ ಎಂಬಷ್ಟು ಪ್ರಚುರಗೊಂಡಿರುವ ಅನೇಕ ಸಂಗತಿಗಳಿವೆ. ಇದೀಗ ಜವಾಹರ ಲಾಲ್ ನೆಹರೂ ಅವರ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಅಂತಹ ಅಪರೂಪದ ಸಂಗತಿಗಳಿಂದ ಸುಮಾರು 10 ಅಂಶಗಳನ್ನು ನಿಮಗಾಗಿ ಹೆಕ್ಕಿ ತಂದಿದ್ದೇವೆ.

1. ಜವಾಹರ ಲಾಲ್ ನೆಹರೂ ವಿದೇಶದಲ್ಲಿ ವ್ಯಾಸಂಗ ಮಾಡಿರುವರಾದರೂ ಅವರ ಬಾಲ್ಯಾವಸ್ಥೆಯಲ್ಲಿ ಮನೆಯಲ್ಲೇ ಶಿಕ್ಷಣ ಪಡೆದಿದ್ದರು. 15 ವರ್ಷವಾಗುವ ತನಕ ನೆಹರೂ ಅವರ ಪಾಲಿಗೆ ಮನೆಯೇ ಪಾಠಶಾಲೆಯಾಗಿತ್ತು.

2. ಭಾರತದ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ನೆಹರೂ ಅವರನ್ನು 9ಬಾರಿ ಜೈಲಿಗಟ್ಟಲಾಗಿತ್ತು. ತಮ್ಮ ಜೀವಿತಾವಧಿಯ 3,259 ದಿನಗಳನ್ನು ನೆಹರೂ ಜೈಲಿನಲ್ಲಿ ಕಳೆದಿದ್ದಾರೆ.

3. 1934ರಿಂದ 1935ರ ತನಕ ನೆಹರೂ ಅವರಿಗೆ ಸೆರೆಮನೆ ವಾಸ ವಿಧಿಸಿದಾಗ ಅವರು ಅಲ್ಲಿಯೇ ಕುಳಿತು ತಮ್ಮ ಆತ್ಮಚರಿತ್ರೆ ಸ್ವಾತಂತ್ರ್ಯದೆಡೆಗೆ (Toward Freedom) ಕೃತಿಯನ್ನು ರಚಿಸಿದರು. ನಂತರ 1936ರಲ್ಲಿ ಅದು ಪ್ರಕಟಗೊಂಡಿತು.

4. ನೆಹರೂ ಅವರ ಜೀವಕ್ಕೆ 4 ಬಾರಿ ಅಪಾಯ ಬಂದೆರಗಿತ್ತು. ಅವರನ್ನು ಮುಗಿಸಲೆಂದೇ ಹೊಂಚು ಹಾಕಿದ್ದವರು ಭಾರತದ ವಿಭಜನೆ ಸಂದರ್ಭದಲ್ಲಿ ಮೊದಲ ಪ್ರಯತ್ನ ಮಾಡಿದ್ದರು. ನಂತರ 1955, 1956 ಹಾಗೂ 1961ರಲ್ಲಿಯೂ ಅವರ ಜೀವ ತೆಗೆಯುವ ಯತ್ನಗಳಾಗಿದ್ದವು.

5. ಜವಾಹರ ಲಾಲ್ ನೆಹರೂ ತಮ್ಮ ಮುದ್ದಿನ ಮಗಳಾದ ಇಂದಿರಾ ಗಾಂಧಿ 10 ವರ್ಷದ ಹುಡುಗಿಯಾಗಿರುವಾಗಲೇ ಸುಮಾರು 30 ಪತ್ರಗಳನ್ನು ಬರೆದಿದ್ದರು. ನಂತರದ ದಿನಗಳಲ್ಲಿ ತಂದೆಯಿಂದ ಮಗಳಿಗೆ ಪತ್ರ (ಲೆಟರ್ಸ್ ಫ್ರಮ್ ಎ ಫಾದರ್ ಟು ಹಿಸ್ ಡಾಟರ್) ಎಂಬ ಹೆಸರಿನಡಿಯಲ್ಲಿ ಅದನ್ನು ಪ್ರಕಟಿಸಲಾಯಿತು.

6. 1950ರಿಂದ 1955ರ ಅವಧಿಯಲ್ಲಿ ನೋಬೆಲ್ ಶಾಂತಿ ಪುರಸ್ಕಾರಗಾಗಿ ನೆಹರೂ 11 ಬಾರಿ ನಾಮನಿರ್ದೇಶಿತಗೊಂಡಿದ್ದರು. ಭಾರತದಲ್ಲಿ ಶಾಂತಿ ಸ್ಥಾಪಿಸಲು ಯತ್ನಿಸಿದ ಹೆಗ್ಗಳಿಕೆ ಮೇಲೆ ಅವರಿಗೆ ಈ ಗೌರವ ಲಭಿಸಿದೆ.

7. ನೆಹರೂ ಪ್ರೌಢಾವಸ್ಥೆಯ ನಂತರದಲ್ಲಿ ಪಾಶ್ಚಿಮಾತ್ಯ ದೇಶದಿಂದ ಶಿಕ್ಷಣ ಪಡೆದುಕೊಂಡರಾದರೂ ಶೇರ್ವಾನಿ, ಕುರ್ತಾ ಸೇರಿದಂತೆ ಭಾರತೀಯ ಶೈಲಿಯ ಧಿರಿಸುಗಳನ್ನು ತೊಡುವುದನ್ನು ನಿಲ್ಲಿಸಲಿಲ್ಲ.

8. ನೆಹರೂ ಅವರು ತೊಡುತ್ತಿದ್ದ ಬಟ್ಟೆಗಳು ಜನಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಅದರ ಪರಿಣಾಮವಾಗಿಯೇ ನೆಹರೂ ಟೋಪಿ, ನೆಹರೂ ಜಾಕೆಟ್ ಪ್ರಚಲಿತಕ್ಕೆ ಬಂತು.

9. ಮಹಾತ್ಮಾ ಗಾಂಧೀಜಿ ನಿಧನರಾದಾಗ ಭಾವುಕರಾದ ನೆಹರೂ ದೀಪ ಆರಿಹೋಯಿತು ಎಂದು ಸಂಸತ್ತಿನಲ್ಲಿ ಹೇಳಿದ್ದರು.

10. ನೆಹರೂ ಅವರು ನಿಧನರಾದ ಸುದ್ದಿ ಕೇಳಿದಾಗ ಇಡೀ ದೇಶವೇ ಕಂಬನಿ ಮಿಡಿದಿತ್ತು. ದೇಶದೆಲ್ಲೆಡೆಯಿಂದ 15 ಲಕ್ಷಕ್ಕೂ ಹೆಚ್ಚು ಜನ ನೆಹರೂ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ:
Jawaharlal Nehru Death Anniversary 2021: ಪಂಡಿತ್ ಜವಹರ ​ಲಾಲ್​ ನೆಹರು ಅವರ ಬಾಲ್ಯ, ಶಿಕ್ಷಣ ಮತ್ತು ಬರೆದ ಪುಸ್ತಕಗಳು