ಪ್ರಧಾನ ಕಾರ್ಯದರ್ಶಿಯಿಂದ ಜೆಡಿಯು ಅಧ್ಯಕ್ಷ ಸ್ಥಾನದವರೆಗೆ; ನಿತೀಶ್ ಆಪ್ತ ಆರ್ಸಿಪಿ ಸಿಂಗ್ ರಾಜಕೀಯ ಪಯಣ
ರಾಮಚಂದ್ರ ಪ್ರಸಾದ್ ಸಿಂಗ್ ಜೆಡಿಯು ಪಕ್ಷದ ರಾಜ್ಯಸಭಾ ಸದಸ್ಯರು. ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ನಿತೀಶ್ ಕುಮಾರ್ ಆರ್ಸಿಪಿ ಸಿಂಗ್ ಅವರಿಂದ ಸಲಹೆ ಪಡೆಯುತ್ತಾರೆ. ನಿತೀಶ್ ಕುಮಾರ್ ಅವರು ಈ ಹಿಂದೆಯೂ ಸಿಂಗ್ ಅವರಿಗೆ ಪಕ್ಷದ ಪ್ರಮುಖ ಜವಾಬ್ದಾರಿಗಳನ್ನು ವಹಿಸಿದ್ದರು.
ಪಟನಾ: ನಿತೀಶ್ ಕುಮಾರ್ ಆಪ್ತ, ರಾಜ್ಯಸಭಾ ಸದಸ್ಯ ಆರ್ಸಿಪಿ ಸಿಂಗ್ ಅವರಿಗೆ ಜೆಡಿಯು ಅಧ್ಯಕ್ಷ ಸ್ಥಾನದ ಹೊಣೆ ನೀಡಲಾಗಿದೆ. ರಾಮಚಂದ್ರ ಪ್ರಸಾದ್ ಸಿಂಗ್ (ಆರ್ಸಿಪಿ ಸಿಂಗ್) ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿಸುವ ನಿರ್ಧಾರವನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಕೊನೆ ದಿನವಾದ ಭಾನುವಾರ ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ಆರ್ಸಿಪಿ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಪ್ರಸ್ತಾವನ್ನು ನಿತೀಶ್ ಕುಮಾರ್ ಮುಂದಿಟ್ಟಿದ್ದು, ಇದಕ್ಕೆ ಸದಸ್ಯರು ಸಮ್ಮತಿ ಸೂಚಿಸಿದ್ದರು. ಏಕಕಾಲದಲ್ಲಿ ಎರಡೆರಡು ಹುದ್ದೆಗಳನ್ನು ಸಂಭಾಳಿಸುವುದು ಕಷ್ಟ ಎಂದು ಹೇಳಿದ ನಿತೀಶ್ ತಮ್ಮ ಆಪ್ತ ಆರ್ಸಿಪಿ ಸಿಂಗ್ ಅವರ ಹೆಸರು ಸೂಚಿಸಿದ್ದರು.
ಸಿಂಗ್ ಅವರ ಸಲಹೆ ಸ್ವೀಕರಿಸುತ್ತಾರೆ ನಿತೀಶ್ ಕುಮಾರ್ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ನಿತೀಶ್ ಕುಮಾರ್ ಆರ್ಸಿಪಿ ಸಿಂಗ್ ಅವರಿಂದ ಸಲಹೆ ಪಡೆಯುತ್ತಾರೆ. ಬಿಹಾರದ ವಿಧಾನಸಭಾ ಚುನಾವಣೆ ವೇಳೆ ಸಿಂಗ್ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿತ್ತು. ಸೀಟು ಹಂಚಿಕೆಯಿಂದ ಹಿಡಿದು ಪಕ್ಷದ ಅಭ್ಯರ್ಥಿಗಳ ಆಯ್ಕೆವರೆಗೆ ಸಿಂಗ್ ಅವರ ಅಭಿಪ್ರಾಯಗಳನ್ನು ನಿತೀಶ್ ಕುಮಾರ್ ಕೇಳುತ್ತಿದ್ದರು. ಬಿಹಾರದ ರಾಜಕಾರಣದ ಬಗ್ಗೆ ತಿಳಿದವರು ಆರ್ಸಿಪಿ ಸಿಂಗ್ ಅವರನ್ನು ನಿತೀಶ್ ಕುಮಾರ್ ಪಾಳಯದ ಅವರ ಚಾಣಕ್ಯ ಎಂದೇ ಹೇಳುತ್ತಾರೆ. ನಿತೀಶ್ ಕುಮಾರ್ ಅವರು ಈ ಹಿಂದೆಯೂ ಸಿಂಗ್ ಅವರಿಗೆ ಪಕ್ಷದ ಪ್ರಮುಖ ಜವಾಬ್ದಾರಿಗಳನ್ನು ವಹಿಸಿದ್ದರು.
ಯಾರು ಆರ್ಸಿಪಿ ಸಿಂಗ್? ರಾಮಚಂದ್ರ ಪ್ರಸಾದ್ ಸಿಂಗ್ ಜೆಡಿಯು ಪಕ್ಷದ ರಾಜ್ಯಸಭಾ ಸದಸ್ಯರು. 65ರ ಹರೆಯದ ಸಿಂಗ್, ನಿತೀಶ್ ಕುಮಾರ ಅವರ ಜಿಲ್ಲೆ ನಲಂದಾದ ಮುಸ್ತಾಫಾಪುರ್ ನಿವಾಸಿ. ಐಪಿಎಸ್ ಅಧಿಕಾರಿ ಲಿಪಿ ಸಿಂಗ್ ಸೇರಿ ಇಬ್ಬರು ಪುತ್ರಿಯರಿದ್ದಾರೆ. ನಿತೀಶ್ ಕುಮಾರ್ ಮತ್ತು ಆರ್ಸಿಪಿ ಸಿಂಗ್ 90ರ ದಶಕದಲ್ಲಿ ಪರಸ್ಪರ ಪರಿಚಿತರಾಗಿದ್ದರು. ಯುಪಿ ಕೇಡರ್ನಲ್ಲಿ ಐಎಎಸ್ ಅಧಿಕಾರಿಯಾಗಿದ್ದ ಸಿಂಗ್ ರಾಜಕಾರಣಕ್ಕೆ ಬಂದು ನಿತೀಶ್ ಕುಮಾರ್ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದರು.