ದೆಹಲಿ: ಕೊರೊನಾ ಸಾಂಕ್ರಾಮಿಕ ಕಾರಣದಿಂದ JEE (Joint Entrance Examination) ಹಾಗೂ NEET (National Eligibility cum Entrance Test) ಪರೀಕ್ಷೆಯನ್ನು ಬರೆಯಲು ಸಾಧ್ಯವಾಗದವರಿಗೆ ಮತ್ತೊಂದು ಹೆಚ್ಚುವರಿ ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. UPSC (Union Public Service Commission) ಪರೀಕ್ಷೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ನಡೆಸಿದೆ. ಇದೀಗ, JEE ಮತ್ತು NEET ಪರೀಕ್ಷೆ ವಿಚಾರವಾಗಿ ತೀರ್ಪಿಗೆ ಕಾದಿರಿ ಎಂದು ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿ ಎ.ಎಮ್. ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ವಿಚಾರಣೆಯನ್ನು ಆಲಿಸಿ, ಕೊರೊನಾ ಕಾರಣದಿಂದ ಪರೀಕ್ಷೆ ಬರೆಯಲಾಗದ ಅಭ್ಯರ್ಥಿಗಳು ಮತ್ತೊಮ್ಮೆ ಅವಕಾಶ ಕೇಳಿ ಸಲ್ಲಿಸಿದ್ದ ಅರ್ಜಿ ತೀರ್ಪನ್ನು ಮುಂದೂಡಿದ್ದು, ಅರ್ಜಿದಾರರು ತೀರ್ಪಿಗಾಗಿ ಕಾದಿರುವಂತೆ ತಿಳಿಸಿದೆ.
ಅಕ್ಟೋಬರ್ 2020ರಲ್ಲಿ ಎಲ್ಲಾ ಅವಕಾಶ ಮುಗಿಸಿರುವ ವಿದ್ಯಾರ್ಥಿಗಳಿಗೆ ಕೋವಿಡ್-19 ಕಾರಣದಿಂದಾಗಿ ಮತ್ತೊಮ್ಮೆ ಪರೀಕ್ಷೆ ಎದುರಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇಂದು ನಡೆದ ವಿಚಾರಣೆಯಲ್ಲಿ ನ್ಯಾಯವಾದಿ ಮ್ಯಾಥ್ಯೂ ಜೆ. ನೆಡುಂಪಾರ ಕೋವಿಡ್ನಿಂದಾಗಿ ಪರೀಕ್ಷೆ ವಂಚಿತರಾಗಿರುವ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: UPSC Civil Service Exam: ವಯೋಮಿತಿ ಮೀರಿದವರಿಗೆ UPSC ಪರೀಕ್ಷೆ ಬರೆಯಲು ಹೆಚ್ಚುವರಿ ಅವಕಾಶವಿಲ್ಲ: ಕೇಂದ್ರ ಸರ್ಕಾರ
UPSC ಪರೀಕ್ಷೆ ವಿಚಾರದಲ್ಲಿ ಏನು ನಿರ್ಧಾರ ಕೈಗೊಳ್ಳಲಾಗಿತ್ತೋ, ಅದೇ ನೀತಿ ಇಲ್ಲಿಯೂ ಅಳವಡಿಕೆಯಾಗುತ್ತದೆ ಎಂದು ಕೋರ್ಟ್ ಪ್ರತಿಕ್ರಿಯೆ ನೀಡಿದೆ.
ನಿಗದಿತ ವಯೋಮಾನ ಮೀರಿದ, ಯುಪಿಎಸ್ಸಿ ನಾಗರಿಕ ಸೇವಾ (UPSC Civil Service Examination) ಅಭ್ಯರ್ಥಿಗಳಿಗೆ ಪರೀಕ್ಷೆ ಎದುರಿಸಲು ಹೆಚ್ಚುವರಿ ಅವಕಾಶ ನೀಡುವ ವಿಚಾರವನ್ನು ಕೇಂದ್ರ ಸರ್ಕಾರ ವಿರೋಧಿಸುತ್ತದೆ ಎಂದು ಸುಪ್ರೀಂ ಕೋರ್ಟ್ಗೆ ಮಂಗಳವಾರ (ಫೆ. 9) ಹೇಳಿಕೆ ನೀಡಿತ್ತು. 2020ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ ಕೊನೆಯ ಬಾರಿ ಪರೀಕ್ಷೆ ಎದುರಿಸಲು ವಿಫಲರಾದವರು ಕೂಡ ವಯಸ್ಸು ಮೀರಿದ್ದರೆ ಪರೀಕ್ಷೆಗೆ ಹಾಜರಾಗುವ ಅವಕಾಶ ನೀಡಲು ಬಯಸುವುದಿಲ್ಲ ಎಂದು ಸರ್ಕಾರ ಕೋರ್ಟ್ಗೆ ತಿಳಿಸಿತ್ತು.
ಇದನ್ನೂ ಓದಿ: UPSC CSE ನಾಗರಿಕ ಸೇವಾ ಪರೀಕ್ಷೆ; ಇನ್ನೊಂದು ಅವಕಾಶ ನೀಡಲು ಕೇಂದ್ರ ಸಮ್ಮತಿ
ಕೊರೊನಾ ಕಾರಣದಿಂದ ಕೊನೆಯ ಬಾರಿ ಪರೀಕ್ಷೆ ಬರೆಯಲು ಅವಕಾಶ ವಂಚಿತರಾದವರು, ನಿಗದಿತ ವಯೋಮಾನ ಮೀರಿಲ್ಲವಾದರೆ, ಮತ್ತೊಂದು ಬಾರಿ ಪರೀಕ್ಷೆ ಎದುರಿಸಬಹುದು ಎಂದು ಕೋರ್ಟ್ ತಿಳಿಸಿತ್ತು.
Published On - 12:10 pm, Mon, 15 February 21