
ಜಪಾನ್‌ನಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವ ಭಾರತೀಯ ಪದವೀಧರರಿಗೆ ಜಪಾನ್ ಸರ್ಕಾರದ Japan Exchange and Teaching (JET) ಕಾರ್ಯಕ್ರಮ ಉತ್ತಮ ಅವಕಾಶವನ್ನು ಒದಗಿಸುತ್ತಿದೆ. 1987ರಿಂದ ಜಾರಿಯಲ್ಲಿರುವ ಈ ಪ್ರತಿಷ್ಠಿತ ಕಾರ್ಯಕ್ರಮದ ಮೂಲಕ ಆಯ್ಕೆಯಾದ ಅಭ್ಯರ್ಥಿಗಳು ಜಪಾನ್‌ನ ಶಾಲೆಗಳಲ್ಲಿ ಸಹಾಯಕ ಭಾಷಾ ಶಿಕ್ಷಕರಾಗಿ (ALT) ಆಗಿ ಅಥವಾ ಸ್ಥಳೀಯ ಸರ್ಕಾರಿ ಕಚೇರಿಗಳಲ್ಲಿ Coordinator for International Relations (CIR) ಆಗಿ ಕೆಲಸ ಮಾಡುವ ಅವಕಾಶ ಪಡೆಯುತ್ತಾರೆ. ಈ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಯಿದೆ.
JET ಕಾರ್ಯಕ್ರಮ ಜಪಾನ್ ಸರ್ಕಾರದ ಅಧಿಕೃತ ಕಾರ್ಯಕ್ರಮವಾಗಿದ್ದು, ಜಪಾನ್‌ನಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಉತ್ತೇಜಿಸುವುದು ಹಾಗೂ ವಿವಿಧ ದೇಶಗಳೊಂದಿಗೆ ಸಾಂಸ್ಕೃತಿಕ ವಿನಿಮಯವನ್ನು ಬಲಪಡಿಸುವ ಉದ್ದೇಶದಿಂದ ಆರಂಭಿಸಲಾಗಿದೆ. ಈ ಯೋಜನೆಯಡಿ ಆಯ್ಕೆಯಾಗುವವರು ಜಪಾನ್‌ನಲ್ಲಿ ವಾಸಿಸಿ, ಕೆಲಸ ಮಾಡುವುದರ ಜೊತೆಗೆ ಜಪಾನಿನ ಸಮಾಜದೊಂದಿಗೆ ನಿಕಟವಾಗಿ ಬೆರೆಯುವ ಅವಕಾಶ ಪಡೆಯುತ್ತಾರೆ.
ಪ್ರಸ್ತುತ ಜಪಾನ್‌ನ 46 ಪ್ರಿಫೆಕ್ಚರ್‌ಗಳು ಮತ್ತು 18 ನಗರಗಳಲ್ಲಿನ 1,000ಕ್ಕೂ ಹೆಚ್ಚು ಸ್ಥಳೀಯ ಸಾರ್ವಜನಿಕ ಸಂಸ್ಥೆಗಳು JET Programme ಅಡಿಯಲ್ಲಿ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುತ್ತಿವೆ. ಇತ್ತೀಚೆಗೆ ಭಾರತದಲ್ಲಿನ ಜಪಾನ್ ರಾಯಭಾರ ಕಚೇರಿ 22 ಸಹಾಯಕ ಭಾಷಾ ಶಿಕ್ಷಕರು ಮತ್ತು 4 ಅಂತರರಾಷ್ಟ್ರೀಯ ಸಂಬಂಧಗಳ ಸಂಯೋಜಕರನ್ನು ಜಪಾನ್‌ಗೆ ಕಳುಹಿಸಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಸಾಮಾನ್ಯವಾಗಿ ಸರ್ಕಾರಿ ಶಾಲೆಗಳು, ಸ್ಥಳೀಯ ಆಡಳಿತ ಕಚೇರಿಗಳು ಅಥವಾ ಅಗತ್ಯವಿದ್ದರೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನಿಯೋಜಿಸಲಾಗುತ್ತದೆ.
ಸಹಾಯಕ ಭಾಷಾ ಶಿಕ್ಷಕರು ಹುದ್ದೆಗೆ ಅರ್ಜಿ ಸಲ್ಲಿಸಲು ಜಪಾನೀಸ್ ಭಾಷೆಯ ಜ್ಞಾನ ಕಡ್ಡಾಯವಲ್ಲ. ಇಂಗ್ಲಿಷ್‌ನಲ್ಲಿ ಉತ್ತಮ ಪ್ರಾವೀಣ್ಯತೆ ಸಾಕು. ಆದರೆ Coordinator for International Relations (CIR) ಹುದ್ದೆಗೆ ಮಾತ್ರ ಜಪಾನೀಸ್ ಭಾಷೆಯಲ್ಲಿ ಉತ್ತಮ ಪ್ರಾವೀಣ್ಯತೆ ಅಗತ್ಯ.
ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!
ALT ಆಗಿ ಆಯ್ಕೆಯಾದವರು ಜಪಾನ್‌ನ ಪ್ರಾಥಮಿಕ, ಕಿರಿಯ ಹಾಗೂ ಹಿರಿಯ ಪ್ರೌಢಶಾಲೆಗಳಲ್ಲಿ ಜಪಾನೀಸ್ ಶಿಕ್ಷಕರೊಂದಿಗೆ ಕಾರ್ಯನಿರ್ವಹಿಸುತ್ತಾರೆ. ವಿದ್ಯಾರ್ಥಿಗಳ ಇಂಗ್ಲಿಷ್ ಮಾತನಾಡುವ ಕೌಶಲ್ಯವನ್ನು ಬೆಳೆಸುವುದರ ಜೊತೆಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಜೀವನಶೈಲಿಯನ್ನು ಪರಿಚಯಿಸುವ ಜವಾಬ್ದಾರಿಯೂ ಇರುತ್ತದೆ.
JET Programme ಕುರಿತು ಅರ್ಹತೆ, ಅರ್ಜಿ ಪ್ರಕ್ರಿಯೆ ಹಾಗೂ ಇತರ ವಿವರಗಳನ್ನು ಭಾರತದಲ್ಲಿನ ಜಪಾನ್ ರಾಯಭಾರ ಕಚೇರಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪಡೆಯಬಹುದು.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Wed, 29 July 26