Jharkhand Crisis: ಸಿಎಂ ಹೇಮಂತ್ ಸೊರೇನ್ಗೆ ಅನರ್ಹತೆ ಭೀತಿ; ಜಾರ್ಖಂಡ್ ಶಾಸಕರು ರೆಸಾರ್ಟ್ಗೆ ಶಿಫ್ಟ್?
ಹೇಮಂತ್ ಸೊರೇನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಆದೇಶವನ್ನು ರಾಜ್ಯಪಾಲ ರಮೇಶ್ ಬೈಸ್ ಇಂದು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಕಳುಹಿಸುವ ಸಾಧ್ಯತೆಯಿದೆ.
ರಾಂಚಿ: ಜಾರ್ಖಂಡ್ (Jharkhand) ಸಿಎಂ ಹೇಮಂತ್ ಸೊರೇನ್ (Hemant Soren) ಅವರನ್ನು ಚುನಾವಣಾ ಆಯೋಗ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಶಿಫಾರಸು ಮಾಡಿತ್ತು. ಇದರಿಂದ ಹೇಮಂತ್ ಸೊರೇನ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆಯಿದೆ. ವಿಧಾನಸಭೆಯಿಂದ ಅನರ್ಹಗೊಳ್ಳುವ ಭೀತಿಯನ್ನು ಎದುರಿಸುತ್ತಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಂಡ ಮತ್ತು ಅವರ ಮಿತ್ರಪಕ್ಷವಾದ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ಗಳಿಗೆ ಸ್ಥಳಾಂತರಿಸಲು ಯೋಚಿಸುತ್ತಿದೆ. ಬಿಜೆಪಿಯವರು ತಮ್ಮ ಶಾಸಕರನ್ನು ತಮ್ಮ ತೆಕ್ಕೆಗೆ ಎಳೆದುಕೊಂಡು, ಸರ್ಕಾರವನ್ನು ಉರುಳಿಸುವ ಪ್ರಯತ್ನ ಮಾಡಬಹುದು ಎಂಬ ಉದ್ದೇಶದಿಂದ ಈ ರೆಸಾರ್ಟ್ ರಾಜಕೀಯದ ಬಗ್ಗೆ ಚಿಂತನೆ ನಡೆಸಲಾಗಿದೆ.
- ಶುಕ್ರವಾರ ಯುಪಿಎ ಮೈತ್ರಿಕೂಟದ 40ಕ್ಕೂ ಹೆಚ್ಚು ಶಾಸಕರು ಹೇಮಂತ್ ಸೊರೇನ್ ನಿವಾಸದಲ್ಲಿ ಸೇರಿ ಚರ್ಚೆ ನಡೆಸಿದ್ದಾರೆ. ಹೀಗಾಗಿ, ರೆಸಾರ್ಟ್ ಪಾಲಿಟಿಕ್ಸ್ ನಡೆಸಲು ಜಾರ್ಖಂಡ್ನಲ್ಲಿ ಸಿದ್ಧತೆ ನಡೆದಿದೆ.
- ಬಿಜೆಪಿಯ ಆಪರೇಷನ್ ಕಮಲದ ಯತ್ನಗಳನ್ನು ತಡೆಯಲು ತಮ್ಮ ಸರ್ಕಾರದ ಶಾಸಕರನ್ನು ಪಶ್ಚಿಮ ಬಂಗಾಳ ಅಥವಾ ಛತ್ತೀಸ್‌ಗಢ ರಾಜ್ಯಗಳ ರೆಸಾರ್ಟ್ಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
- ಬಿಜೆಪಿಯೇತರ ಸರ್ಕಾರಗಳು ಆಡಳಿತದಲ್ಲಿರುವ ಛತ್ತೀಸ್‌ಗಢ ಅಥವಾ ಪಶ್ಚಿಮ ಬಂಗಾಳದಲ್ಲಿ ನಮ್ಮ ಸಮ್ಮಿಶ್ರ ಸರ್ಕಾರದ ಶಾಸಕರಿಗೆ ಉಳಿದುಕೊಳ್ಳಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಶಾಸಕರು ಮತ್ತು ಭದ್ರತಾ ಸಿಬ್ಬಂದಿಯನ್ನು ರಸ್ತೆ ಮೂಲಕ ಸಾಗಿಸಲು ಮೂರು ಐಷಾರಾಮಿ ಬಸ್‌ಗಳು ರಾಂಚಿ ತಲುಪಿವೆ. ಕೆಲವು ಬೆಂಗಾವಲು ವಾಹನಗಳೂ ಅವರ ಜೊತೆ ಇರುತ್ತವೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
- “ಅಗತ್ಯವಿದ್ದಲ್ಲಿ ಎಲ್ಲಾ ಆಡಳಿತಾರೂಢ ಶಾಸಕರನ್ನು ಒಂದೇ ಸ್ಥಳಕ್ಕೆ ಕಳುಹಿಸಲಾಗುವುದು. ಎಲ್ಲಾ ಶಾಸಕರು ತಮ್ಮ ಲಗೇಜ್‌ಗಳೊಂದಿಗೆ ಮುಖ್ಯಮಂತ್ರಿಯವರ ಮನೆಗೆ ಬಂದಿರುವ ನಿರ್ಣಾಯಕ ಸಭೆಯಲ್ಲಿ ಭಾಗವಹಿಸಲು ಬಂದಿದ್ದಾರೆ” ಎಂದು ಮತ್ತೊಂದು ಮೂಲ ತಿಳಿಸಿದೆ.
- ಹೇಮಂತ್ ಸೊರೇನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಆದೇಶವನ್ನು ರಾಜ್ಯಪಾಲ ರಮೇಶ್ ಬೈಸ್ ಇಂದು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಕಳುಹಿಸುವ ಸಾಧ್ಯತೆಯಿದೆ ಎಂದು ಅವರ ಕಚೇರಿಯ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
- ಗಣಿಗಾರಿಕೆ ಗುತ್ತಿಗೆಯನ್ನು ತಮಗೆ ವಿಸ್ತರಿಸುವ ಮೂಲಕ ಚುನಾವಣಾ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಿಎಂ ಹೇಮಂತ್ ಸೋರೆನ್ ಅವರನ್ನು ಶಾಸಕರಾಗಿ ಅನರ್ಹಗೊಳಿಸಬೇಕೆಂದು ಕೋರಿ ಸಲ್ಲಿಸಿದ ಮನವಿಯ ಕುರಿತು ಚುನಾವಣಾ ಆಯೋಗವು ಗುರುವಾರ ರಾಜ್ಯಪಾಲ ಬೈಸ್ ಅವರಿಗೆ ತನ್ನ ಅಭಿಪ್ರಾಯವನ್ನು ಕಳುಹಿಸಿದೆ. ಈ ಪ್ರಕರಣದ ಅರ್ಜಿದಾರರಾದ ಬಿಜೆಪಿ ಹೇಮಂತ್ ಸೋರೆನ್ ಅವರನ್ನು ಅನರ್ಹಗೊಳಿಸುವಂತೆ ಕೋರಿತ್ತು.
- 81 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಮೈತ್ರಿಕೂಟ 49 ಶಾಸಕರನ್ನು ಹೊಂದಿದೆ. ಅತಿದೊಡ್ಡ ಪಕ್ಷವಾದ ಜೆಎಂಎಂ 30 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ 18 ಶಾಸಕರನ್ನು ಮತ್ತು ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಒಬ್ಬರನ್ನು ಹೊಂದಿದೆ. ಪ್ರಮುಖ ಪ್ರತಿಪಕ್ಷ ಬಿಜೆಪಿ 26 ಶಾಸಕರನ್ನು ಹೊಂದಿದೆ.
- ಸರ್ಕಾರಕ್ಕೆ ಯಾವುದೇ ಬೆದರಿಕೆ ಇಲ್ಲ. 2024ರವರೆಗೆ ಪೂರ್ಣಾವಧಿಗೆ ಹೇಮಂತ್ ಸೋರೆನ್ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಎಂದು ಜೆಎಂಎಂ ನಿನ್ನೆ ವಿಶ್ವಾಸ ವ್ಯಕ್ತಪಡಿಸಿತ್ತು.
- ಅನರ್ಹತೆಯನ್ನು ಎದುರಿಸುತ್ತಿರುವ ಹೇಮಂತ್ ಸೊರೆನ್ ಅವರು ತಮ್ಮ ರಕ್ತದ ಕೊನೆಯ ಹನಿಯವರೆಗೂ ಹೋರಾಡುವುದಾಗಿ ಸವಾಲು ಹಾಕಿದ್ದಾರೆ.
- ರಾಜಕೀಯವಾಗಿ ನಮ್ಮೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಮ್ಮ ವಿರೋಧಿಗಳು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಇಡಿ, ಸಿಬಿಐ, ಲೋಕಪಾಲ್ ಮತ್ತು ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ನಾವು ಅದರ ಬಗ್ಗೆ ಚಿಂತಿಸುವುದಿಲ್ಲ ಎಂದು ಹೇಮಂತ್ ಸೊರೆನ್ ಹೇಳಿದ್ದಾರೆ.