West Bengal Assembly Elections 2021: ಬಂಗಾಳದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಜೆಎನ್​ಯು ವಿದ್ಯಾರ್ಥಿ ಸಂಘಟನೆಯ ನಾಯಕಿ ಆಯಿಷಿ ಘೋಷ್‌

|

Updated on: Mar 11, 2021 | 5:43 PM

Aishe Ghosh: ಜಮುರಿಯಾ ಚುನಾವಣಾ ಕ್ಷೇತ್ರದಿಂದ ಸಿಪಿಐ(ಎಂ) ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಲಿದ್ದೇನೆ ಸಂಯುಕ್ತ್ ಮೋರ್ಚಾ ನನ್ನ ಬೆಂಬಲಿಸಲಿದೆ. ನಿಮ್ಮ ಬೆಂಬಲ ಬೇಕು ಎಂದು ಆಯಿಷಿ ಘೋಷ್ ಗುರುವಾರ ಟ್ವೀಟ್ ಮಾಡಿದ್ದಾರೆ.

West Bengal Assembly Elections 2021: ಬಂಗಾಳದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಜೆಎನ್​ಯು ವಿದ್ಯಾರ್ಥಿ ಸಂಘಟನೆಯ ನಾಯಕಿ ಆಯಿಷಿ ಘೋಷ್‌
ಆಯಿಷಿ ಘೋಷ್
Follow us on

ದೆಹಲಿ: ದೆಹಲಿಯ  ಜವಾಹರ್​ಲಾಲ್ ನೆಹರು ಯುನಿವರ್ಸಿಟಿಯ (JNU) ವಿದ್ಯಾರ್ಥಿಗಳ ಸಂಘಟನೆಯ ನಾಯಕಿ ಆಯಿಷಿ ಘೋಷ್ ಪಶ್ಚಿಮ‌ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸಿಪಿಐ(ಎಂ) ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಜೆಎನ್​ಯುನಲ್ಲಿ ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷೆ ಆಗಿರುವಾಗಲೇ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲ ವ್ಯಕ್ತಿಯಾಗಿದ್ದಾರೆ ಆಯಿಷಿ ಘೋಷ್. ಬಂಗಾಳದ ಜಮುರಿಯಾ ಕ್ಷೇತ್ರದಲ್ಲಿ ಘೋಷ್ ಸ್ಪರ್ಧಿಸಲಿದ್ದು, ಸಂಯುಕ್ತ್ ಮೋರ್ಚಾ ಬೆಂಬಲ ನೀಡಲಿದೆ.

294 ಸೀಟುಗಳಿರುವ ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯಲ್ಲಿದ್ದು ಮಾರ್ಚ್ 27ರಿಂದ ಏಪ್ರಿಸ್ 29ರ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮೇ.2ಕ್ಕೆ ಮತ ಎಣಿಕೆ ನಡೆಯಲಿದೆ. ಬಂಗಾಳದಲ್ಲಿ ಎಡಪಕ್ಷ , ಕಾಂಗ್ರೆಸ್ ಮತ್ತು ಇಂಡಿಯನ್ ಸೆಕ್ಯುವರ್ ಫ್ರಂಟ್( ISF) ಮೈತ್ರಿಕೂಟ ಜತೆಯಾಗಿ ಸ್ಪರ್ಧಿಸಲಿದೆ. ಮೊದಲ ಎರಡು ಹಂತದ ಚುನಾವಣೆಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಹೆಸರನ್ನು ಎಡರಂಗ ಮಾರ್ಚ್ 5ರಂದು ಘೋಷಿಸಿತ್ತು.

ಜಮುರಿಯಾ ಚುನಾವಣಾ ಕ್ಷೇತ್ರದಿಂದ ಸಿಪಿಐ(ಎಂ) ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಲಿದ್ದೇನೆ ಸಂಯುಕ್ತ್ ಮೋರ್ಚಾ ನನ್ನ ಬೆಂಬಲಿಸಲಿದೆ. ನಿಮ್ಮ ಬೆಂಬಲ ಬೇಕು ಎಂದು ಘೋಷ್ ಗುರುವಾರ ಟ್ವೀಟ್ ಮಾಡಿದ್ದಾರೆ.


ಜೆಎನ್​ಯುನಲ್ಲಿ ಆಯಿಷಿ ಘೋಷ್ ಮೇಲೆ ದಾಳಿ ನಡೆದಿತ್ತು

ಕಳೆದ ವರ್ಷ ಜನವರಿ 5ರಂದು ಜೆಎನ್ ಯು ಕ್ಯಾಂಪಸ್ ಒಳಗಡೆ ನುಗ್ಗಿದ ದುಷ್ಕರ್ಮಿಗಳು ಅಲ್ಲಿನ ವಿದ್ಯಾರ್ಥಿ, ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದರು. ಈ ಹಲ್ಲೆಯಲ್ಲಿಆಯಿಷಿ ಘೋಷ್ ಗೆ ಗಂಭೀರ ಗಾಯಗಳಾಗಿದ್ದು, ಹಣೆ ಒಡೆದು ರಕ್ತ ಸುರಿಸುತ್ತಿದ್ದ ಆಯಿಷಿ ಘೋಷ್ ಚಿತ್ರ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಮುಸುಕುಧಾರಿಗಳಾಗಿ ಕೈಯಲ್ಲಿ ಮಾರಕಾಯುಧಗಳನ್ನು ಹಿಡಿದ ಸುಮಾರು 70 ಮಂದಿ ಕ್ಯಾಂಪಸ್ ಗೆ ನುಗ್ಗಿ ವಿದ್ಯಾರ್ಥಿ, ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದರು. ಜೆಎನ್​ಯು ವಿದ್ಯಾರ್ಥಿಗಳ ಮೇಲೆ ನಡೆದ ಈ ದಾಳಿ ದೇಶಿಯ ಮತ್ತು ವಿದೇಶದ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿತ್ತು.

ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ, ಎಡಪಂಥೀಯ ವಿಚಾರಧಾರೆಯ ಆಯಿಷಿ ಘೋಷ್‌ ಅವರ ತಲೆಗೆ ದುಷ್ಕರ್ಮಿಗಳು ಕಬ್ಬಿಣದ ಸರಳಿನಿಂದ ಹೊಡೆದಿದ್ದರು. ‘ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯ ಸದಸ್ಯರು ಮುಸುಕುಧಾರಿ ಗೂಂಡಾಗಳ ಜೊತೆ ಸೇರಿ ಈ ಹಲ್ಲೆ ನಡೆಸಿದ್ದಾರೆ’ ಎಂದು ಆಯಿಷಿ ಘೋಷ್‌ ನೇರ ಆರೋಪ ಮಾಡಿದ್ದರು.

2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಬೇಗುಸರೈ ಕ್ಷೇತ್ರದಿಂದ ಎಡಪಕ್ಷದ ಅಭ್ಯರ್ಥಿಯಾದಿ ಜೆಎನ್ಯು ವಿದ್ಯಾರ್ಥಿ ಸಂಘಟನೆಗಳ ಮಾಜಿ ಅಧ್ಯಕ್ಷ ಕನಯ್ಯಾ ಕುಮಾರ್ ಸ್ಪರ್ಧಿಸಿದ್ದರು. ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ವಿರುದ್ಧ ಕನಯ್ಯಾ ಸ್ಪರ್ಧಿಸಿ, ಪರಾಭವಗೊಂಡಿದ್ದರು.

ಇದನ್ನೂ ಓದಿ: West Bengal Assembly Elections 2021: ಪಶ್ಚಿಮ ಬಂಗಾಳದ ಸಚಿವ ಬಚ್ಚು ಹಾಂಸದಾ, ಶಾಸಕ ಗೌರಿ ಶಂಕರ್ ದತ್ತಾ ಬಿಜೆಪಿಗೆ ಸೇರ್ಪಡೆ

ಜೆಎನ್​ಯು ಒದಗಿಸುತ್ತಿರುವ ಉನ್ನತಮಟ್ಟದ ಶಿಕ್ಷಣವನ್ನು ಕೊಂಡಾಡಿದ ರಾಷ್ಟ್ರಪತಿಗಳು

Published On - 5:41 pm, Thu, 11 March 21