ದೆಹಲಿ: ದೇಶದ ಸುಪ್ರೀಂಕೋರ್ಟ್ ಸೋಮವಾರ ಅಪರೂಪದ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಯಿತು. ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ತಮ್ಮ ಕಕ್ಷೀದಾರರ ಪರ ವರ್ಚುವಲ್ ವಾದ ಮಂಡಿಸಿದರು. ವಾದ ಆಲಿಸುವ ಸಂದರ್ಭ ರೊಹಟಗಿ ಕಚೇರಿಯ ಗೋಡೆಯ ಮೇಲಿದ್ದ ಚಿತ್ರಪಟದತ್ತ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಗಮನ ಹೋಯಿತು. ನ್ಯಾಯಮೂರ್ತಿಗಳು ಚಿತ್ರಪಟದ ಐತಿಹಾಸಿಕ ಸಂದರ್ಭವನ್ನು ನೆನಪಿಸಿಕೊಳ್ಳುವುದರ ಜೊತೆಗೆ ಆ ಚಿತ್ರಪಟದ ಪ್ರಮುಖ ಆಕರ್ಷಣೆಯಾಗಿದ್ದ ಬಾಲಗಂಗಾಧರ ತಿಲಕರ ಕೊನೆಯ ಮಾತುಗಳನ್ನು ಗೌರವದಿಂದ ನೆನಪಿಸಿಕೊಂಡರು. ರಿಯಲ್ ಎಸ್ಟೇಟ್ ಕಂಪನಿ ಸೂಪರ್ಟೆಕ್ ಕಂಪನಿಯ ಪರವಾಗಿ ಮುಕುಲ್ ರೋಹಟಗಿ ವರ್ಚುವಲ್ ವಾದ ಮಂಡಿಸಿದರು.
‘ಬಾಲಗಂಗಾಧರ ತಿಲಕರ ವಿಚಾರಣೆ ನಡೆದ ಬಾಂಬೆ ಹೈಕೋರ್ಟ್ನ ಸೆಂಟ್ರಲ್ ಹಾಲ್ನ ಚಿತ್ರ ಇದು’ ಎಂದು ನ್ಯಾಯಮೂರ್ತಿ ಚಂದ್ರಚೂಡ್ ನೆನಪಿಸಿಕೊಂಡರು. ನ್ಯಾಯಮೂರ್ತಿಗಳ ಮೆಚ್ಚುಗೆ ಮಾತಿಗೆ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಧನ್ಯವಾದ ಹೇಳಿದರು. ಬಾಂಬೆ ಹೈಕೋರ್ಟ್ನಲ್ಲಿ 1908ರಲ್ಲಿ ಬಾಲ ಗಂಗಾಧರ ತಿಲಕರ ವಿಚಾರಣೆ ನಡೆದಿತ್ತು. ಈ ಸಂದರ್ಭ ತಿಲಕರು ಆಡಿದ್ದ ಕೊನೆಯ ನುಡಿಗಳು ಐತಿಹಾಸಿಕ ಮಹತ್ವ ಪಡೆದಿವೆ.
‘ನ್ಯಾಯಾಧೀಶರು ತಮ್ಮ ತೀರ್ಪು ಕೊಟ್ಟಿರಬಹುದು. ಆದರೂ ನಾನು ಮುಗ್ಧ ಎಂದೇ ವಾದಿಸುತ್ತೇನೆ. ಮನುಷ್ಯ ಮತ್ತು ದೇಶದ ಹಣೆಬರಹವನ್ನು ನಿರ್ಧರಿಸುವ ದೊಡ್ಡ ಶಕ್ತಿಗಳೇನೋ ಇವೆ. ಆದರೆ ನಾನು ಯಾವುದನ್ನು ಪ್ರತಿಪಾದಿಸುತ್ತಿದ್ದೇನೆಯೋ ಅದು, ನಾನು ಸ್ವತಂತ್ರವಾಗಿ ಇರುವುದಕ್ಕಿಂತಲೂ ನಾನು ಅನುಭವಿಸುವ ಕಷ್ಟಗಳಿಂದಲೇ ಪ್ರವರ್ಧಮಾನಕ್ಕೆ ಬರುತ್ತದೆ’ ಎಂಬ ತಿಲಕರ ಮಾತುಗಳನ್ನು ನ್ಯಾಯಮೂರ್ತಿಗಳು ನೆನಪಿಸಿಕೊಂಡರು.
ನ್ಯಾಯಮೂರ್ತಿ ಚಂದ್ರಚೂಡ್ ಅವರು ಬಾಂಬೆ ಹೈಕೋರ್ಟ್ನಲ್ಲಿ ಹಲವಾರು ವರ್ಷ ವಕೀಲರಾಗಿ ದುಡಿದಿದ್ದರು. ನಂತರದ ದಿನಗಳಲ್ಲಿ ಬಾಂಬೆ ಹೈಕೋರ್ಟ್ನಲ್ಲಿಯೇ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಬಾಲಗಂಗಾಧರ ತಿಲಕರ ಐತಿಹಾಸಿಕ ವಿಚಾರಣೆಯ ಚಿತ್ರಪಟವೊಂದನ್ನು ಬಾಂಬೆ ಹೈಕೋರ್ಟ್ನ 2ನೇ ಮಹಡಿಯಲ್ಲಿ ಅಳವಡಿಸಲಾಗಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕರ ವಿಚಾರಣೆ ಸೆಂಟ್ರಲ್ ಕೋರ್ಟ್ನ ಹೊರಗೆ ನಡೆದಿತ್ತು.
ತಾವು ಬಾಂಬೆ ಹೈಕೋರ್ಟ್ನಲ್ಲಿ ವಕೀಲರಾಗಿದ್ದಾಗ ಪ್ರತಿದಿನವೂ ತಿಲಕರ ಮಾತನ್ನು ಓದಿಕೊಳ್ಳುತ್ತಿದ್ದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ನೆನಪಿಸಿಕೊಂಡರು. ವಿಶಿಷ್ಟ ವಾಸ್ತುಶಿಲ್ಪಕ್ಕೆ ಬಾಂಬೆ ಹೈಕೋರ್ಟ್ ಹೆಸರುವಾಸಿ. ಪರಂಪರೆ ಸಂರಕ್ಷಣಾ ಯೋಜನೆಯಡಿ ಕಟ್ಟಡವನ್ನು ಜೀರ್ಣೋದ್ಧಾರ ಮಾಡಿ ಸಂರಕ್ಷಿಸಲಾಯಿತು. ಖ್ಯಾತ ವಾಸ್ತುಶಿಲ್ಪಿ ಅದಾ ಲಂಬಾ ಕಟ್ಟಡದ ಜೀರ್ಣೋದ್ಧಾರ ಚಟುವಟಿಕೆಯನ್ನು ಯೋಜಿಸಿ, 2012ರಲ್ಲಿ ಕಾರ್ಯರೂಪಕ್ಕೆ ತಂದಿದ್ದರು. ಮಹಾತ್ಮ ಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಪರೂಪದ ಚಿತ್ರಪಟಗಳೂ ಇವೆ.
(Justice Chandrachud Supreme Court Judge Remembers Words of Bal Gangadhar Tilak in a Virtual trial)
ಇದನ್ನೂ ಓದಿ: ನನಗಾಗಿ ಸುಪ್ರೀಂಕೋರ್ಟ್ ಬದಲಾಯ್ತು: ನ್ಯಾಯಮೂರ್ತಿ ಚಂದ್ರಚೂಡ್ ಸಹಾಯಕ ರಾಹುಲ್ ಬಜಾಜ್ ಬರಹ
ಇದನ್ನೂ ಓದಿ: ಯಾರ ವಿರುದ್ಧ ನಿಮ್ಮ ಪ್ರತಿಭಟನೆ: ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆಯ ಔಚಿತ್ಯವನ್ನೇ ಪ್ರಶ್ನಿಸಿದ ಸುಪ್ರೀಂಕೋರ್ಟ್
Published On - 10:14 pm, Mon, 4 October 21