Tamil Nadu Assembly Elections 2021: ತಮಿಳುನಾಡು ಚುನಾವಣೆಯಲ್ಲಿ 154 ಸೀಟುಗಳಲ್ಲಿ ಸ್ಪರ್ಧಿಸಲಿದೆ ಮಕ್ಕಳ್ ನೀಧಿ ಮಯ್ಯಂ

|

Updated on: Mar 09, 2021 | 11:54 AM

Tamil Nadu Elections: ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಈ ಪೈಕಿ 154 ಸೀಟುಗಳಲ್ಲಿ ಎಂಎನ್ಎಂ ಸ್ಪರ್ಧಿಸಲಿದೆ. ಅದೇ ವೇಳೆ ಎಐಎಸ್ ಎಂಕೆ ಮತ್ತು ಐಜೆಕೆ 40 ಸೀಟುಗಳಲ್ಲಿ ಕಣಕ್ಕಿಳಿಯಲಿದೆ.

Tamil Nadu Assembly Elections 2021: ತಮಿಳುನಾಡು ಚುನಾವಣೆಯಲ್ಲಿ 154 ಸೀಟುಗಳಲ್ಲಿ ಸ್ಪರ್ಧಿಸಲಿದೆ ಮಕ್ಕಳ್ ನೀಧಿ ಮಯ್ಯಂ
ಕಮಲ್ ಹಾಸನ್
Follow us on

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ( MNM), ಆಲ್ ಇಂಡಿಯಾ ಸಮತ್ವ ಮಕ್ಕಳ್ ಕಟ್ಚಿ (AISMK) ಮತ್ತು ಇಂದಿಯಾ ಜನನಾಯಕ ಕಟ್ಚಿ(IJK) ಸೀಟು ಹಂಚಿಕೆ ಬಗ್ಗೆ ನಿರ್ಧಾರ ಕೈಗೊಂಡಿವೆ. ತಮಿಳುನಾಡಿನಲ್ಲಿ ಅಭಿವೃದ್ಧಿ ಮತ್ತು ಬದಲಾವಣೆ ತರುತ್ತೇವೆ ಎಂದು ಈ ಪಕ್ಷಗಳು ಜನರಿಗೆ ಭರವಸೆ ನೀಡಿವೆ. ಒಟ್ಟು 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಈ ಪೈಕಿ 154 ಸೀಟುಗಳಲ್ಲಿ ಎಂಎನ್ಎಂ ಸ್ಪರ್ಧಿಸಲಿದೆ. ಅದೇ ವೇಳೆ ಎಐಎಸ್ ಎಂಕೆ ಮತ್ತು ಐಜೆಕೆ 40 ಸೀಟುಗಳಲ್ಲಿ ಕಣಕ್ಕಿಳಿಯಲಿದೆ.

ತಮಿಳುನಾಡಿನ ಜನರ ಬಹುಕಾಲದ ಆಗ್ರಹವನ್ನು ಪೂರೈಸಲು ನಮ್ಮ ಪಕ್ಷ ಬದ್ಧವಾಗಿದೆ. ತಮಿಳುನಾಡಿನ ಪ್ರತಿಷ್ಠೆ ಮತ್ತು ಕೀರ್ತಿಯನ್ನು ಪುನಸ್ಥಾಪಿಸುವ ಉದ್ದೇಶದಿಂದ ನಮ್ಮ ಸುದೀರ್ಘ ಪಯಣ ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ಎಂಎನ್ಎಂ ಪಕ್ಷ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.  2019 ಲೋಕಸಭಾ ಚುನಾವಣೆಯಲ್ಲಿ ಎಂಎನ್ಎಂ ಶೇಕಡಾ 4ರಷ್ಟು ಮತಗಳಿಸಿತ್ತು.

ಮಕ್ಕಳ್ ನೀಧಿ ಮಯ್ಯಂ, ಆಲ್ ಇಂಡಿಯಾ ಸಮತ್ವ ಮಕ್ಕಳ್ ಕಟ್ಚಿ ಮತ್ತು ಇಂದಿಯಾ ಜನನಾಯಕ ಕಟ್ಚಿ ಮೈತ್ರಿ ಮಾಡಿಕೊಂಡಿದ್ದು, ಕಮಲ್ ಹಾಸನ್ ಅವರೇ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಆಗಿದ್ದಾರೆ ಎಂದು ಎಐಎಸ್ಎಂಕೆ ಸಂಸ್ಥಾಪಕ ಶರತ್ ಕುಮಾರ್ ಹೇಳಿದ್ದಾರೆ.

ಅಸಾದುದ್ದೀನ್ ಓವೈಸಿ ಅವರ ಮಜಲಿಸ್- ಇ-ಇತ್ತೆಹಾದ್- ಉಲ್- ಮುಸ್ಲಿಮೀನ್ (AIMIM) ಪಕ್ಷವು ಟಿಟಿವಿ ದಿನಕರನ್ ಅವರ ಪಕ್ಷವಾದ ಅಮ್ಮ ಮಕ್ಕಳ್ ಮುನ್ನೇಟ್ರ ಕಳಗಂ (AMMK) ಜತೆ ಭಾನುವಾರ ಮೈತ್ರಿ ಮಾಡಿಕೊಂಡಿದೆ. ವನಿಯಂಬಾಡಿ, ಕೃಷ್ಣಗರಿ ಮತ್ತು ಸಂಕರಾಪುರಂನಲ್ಲಿ ಎಐಎಂಐಎ ಸ್ಪರ್ಧಿಸಲಿದೆ. ವಿ.ಕೆ.ಶಶಿಕಲಾ ಇತ್ತೀಚೆಗಷ್ಟೇ ತಮ್ಮ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ಹಾಗಾಗಿ, ಸದ್ಯ ಒಬ್ಬಂಟಿಯಾಗಿದ್ದ ಟಿಟಿವಿ ದಿನಕರನ್​ಗೆ ಓವೈಸಿ ಬಲ ಜತೆಯಾಗಿದೆ. ಟಿಟಿವಿ ದಿನಕರನ್​ರ AMMK ಪಕ್ಷವನ್ನು ಜತೆ ಸೇರಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿತ್ತು.

ಭಾನುವಾರ ಡಿಎಂಕೆ ಪಕ್ಷವು ಮಿತ್ರ ಪಕ್ಷವಾದ ಕಾಂಗ್ರೆಸ್ ಗೆ 25 ವಿಧಾನಸಭಾ ಸೀಟು ಮತ್ತು ಕನ್ಯಾಕುಮಾರಿ ಲೋಕಸಭಾ ಸೀಟಿನಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. ಡಿಎಂಕೆ ಮೈತ್ರಿಕೂಟದಲ್ಲಿ ಈವರೆಗೆ 48 ಸೀಟುಗಳನ್ನು ಮೈತ್ರಿ ಪಕ್ಷಗಳಿಗೆ ನೀಡಲಾಗಿದೆ. ಆದಾಗ್ಯೂ, ಕಾಂಗ್ರೆಸ್ 25, ಎಡಿಎಂಕೆ, ವಿದುತಲೈ ಚಿರುತೈಗಲ್ ಕಟ್ಚಿ ಮತ್ತು ಸಿಪಿಐ ಪಕ್ಷಕ್ಕೆ ತಲಾ 6 ಸೀಟುಗಳಲ್ಲಿ ಕಣಕ್ಕಿಳಿಯಲಿದೆ. ಐಯುಎಂಎಲ್- 3 ಮತ್ತು ಮನಿಥನೇಯ ಮಕ್ಕಳ್ ಕಟ್ಚಿ ಎರಡು ಸೀಟುಗಳಲ್ಲಿ ಸ್ಪರ್ಧಿಸಲಿದೆ.


ಇತ್ತ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ (AIADMK) ಫೆಬ್ರವರಿ ಕೊನೆ ಯ ವಾರದಲ್ಲಿ ಪಾಟ್ಟಾಳಿ ಮಕ್ಕಳ್ ಕಟ್ಚಿ (PMK) ಜತೆ ಮೈತ್ರಿ ಮಾಡಿಕೊಂಡಿತ್ತು. ಕ್ಯಾಪ್ಟನ್ ವಿಜಯಕಾಂತ್ ಅವರ ದೇಶೀಯ ಮುರ್​ಪೋಕು ದ್ರಾವಿಡ ಕಳಗಂ (DMDK) ಜತೆ ಎಐಎಡಿಎಂಕೆ ಇನ್ನೂ ಮಾತುಕತೆ ನಡೆಸಿಲ್ಲ .

ತಮಿಳುನಾಡಿನ 16ನೇ ವಿಧಾನಸಭೆಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು ಮೇ.2ರಂದು ಫಲಿತಾಂಶ ಪ್ರಕಟವಾಗಲಿದೆ.

ರೇಷನ್ ಕಾರ್ಡ್ ಹೊಂದಿದ ಗೃಹಿಣಿಯರಿಗೆ ಮಾಸಿಕ 1,000 ರೂ. ವಿತರಣೆ
ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇಟ್ರ ಕಳಗಂ (DMK) ಪಕ್ಷ ಅಧಿಕಾರಕ್ಕೆ ಬಂದರೆ, ರೇಷನ್ ಕಾರ್ಡ್ ಹೊಂದಿದ ಗೃಹಿಣಿಯರಿಗೆ ಪ್ರತಿ ತಿಂಗಳು 1,000 ರೂಪಾಯಿ ನೀಡುವುದಾಗಿ DMK ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಘೋಷಣೆ ಮಾಡಿದ್ದಾರೆ. ಇದರಿಂದ ಎಲ್ಲಾ ಮಹಿಳೆಯರು ಆಹಾರ, ಅಗತ್ಯ ಸಾಮಾಗ್ರಿಗಳನ್ನು ಪಡೆಯುವಂತಾಗಲಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.

ಸಿ- ವೋಟರ್ ಸಮೀಕ್ಷೆ
ಟೈಮ್ಸ್ ನೌ- ಸಿ ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಡಿಎಂಕೆ-ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ 154ರಿಂದ 162 ಸೀಟುಗಳನ್ನು ಗೆಲ್ಲಲಿದೆ. ಅದೇ ವೇಳೆ ಯುಪಿಎ ಮೈತ್ರಿಕೂಟ 158 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇದೆ. 2016ರ ಚುನಾವಣೆಯಲ್ಲಿ ಲಭಿಸಿದ ಸೀಟುಗಳಿಗಿಂತ 60 ಸೀಟುಗಳು ಯುಪಿಎಗೆ ಹೆಚ್ಚಾಗಲಿದೆ ಎಂದು ಸಮೀಕ್ಷೆ ಹೇಳಿದೆ.

 ಇದನ್ನೂ ಓದಿ: Tamil Nadu Assembly Elections 2021: ತಮಿಳುನಾಡು ಚುನಾವಣೆಯಲ್ಲಿ ಎಐಎಡಿಎಂಕೆ, ಬಿಜೆಪಿ, ಪಿಎಂಕೆ ಮೈತ್ರಿ ಕೂಟಕ್ಕೆ ಗೆಲುವು ನಿಶ್ಚಿತ: ಅಮಿತ್ ಶಾ

Tamil Nadu Assembly Elections 2021: ಸಿಪಿಎಂ-ಡಿಎಂಕೆ ಮೈತ್ರಿ ಘೋಷಣೆ; 6 ಕ್ಷೇತ್ರಗಳಲ್ಲಿ ಸಿಪಿಎಂ ಸ್ಪರ್ಧೆ

Published On - 11:48 am, Tue, 9 March 21