ದೆಹಲಿ: ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ಮತ್ತು ಗುಜರಾತ್ ದಲಿತ ನಾಯಕ ಜಿಗ್ನೇಶ್ ಮೆವಾನಿ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಇವರನ್ನು ಪಕ್ಷದ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ಗೆ ಸ್ವಾಗತಿಸಿದರು.
2019ರ ಮಹಾ ಚುನಾವಣೆಗೂ ಮುನ್ನ ಕನ್ಹಯ್ಯ ಕುಮಾರ್ ಭಾರತೀಯ ಕಮ್ಯುನಿಸ್ಟ್ ಪಾರ್ಟಿಯಲ್ಲಿ (ಸಿಪಿಐ) ಇದ್ದರು. ಬಿಜೆಪಿಯ ಗಿರಿರಾಜ್ ಸಿಂಗ್ ವಿರುದ್ಧ ತಮ್ಮ ಹುಟ್ಟೂರು ಬೇಗುಸರಾಯ್ನಿಂದ ಸ್ಪರ್ಧಿಸಿದ್ದರಾದರೂ ಗೆಲ್ಲಲು ಸಾಧ್ಯವಾಗಲಿಲ್ಲ.
ಸಂಸತ್ ಭವನದ ಮೇಲಿನ ದಾಳಿಯ ರೂವಾರಿ ಅಫ್ಜಲ್ ಗುರು ಸಾವಿನ ದಿನದಂದು ಮಾಡಿದ ಭಾಷಣದ ಕಾರಣಕ್ಕೆ 2016ರಲ್ಲಿ ಕನ್ಹಯ್ಯ ಅವರನ್ನು ಜೈಲಿಗೆ ಹಾಕಲಾಗಿತ್ತು. ಆಗ ಕನ್ಹಯ್ಯ ದೆಹಲಿಯ ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕರಾಗಿದ್ದರು.
ಗುಜರಾತ್ನ ವಡ್ಗಮ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಜಿಗ್ನೇಶ್ ಮೆವಾನಿ ಬಿಜೆಪಿಗೆ ಪ್ರತಿಷ್ಠೆಯ ರಾಜ್ಯ ಎನಿಸಿರುವ ಗುಜರಾತ್ನಲ್ಲಿ ಜನಪ್ರಿಯ ನಾಯಕರು. ಮುಂದಿನ ವರ್ಷ ನಡೆಯಲಿರುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಸುಧಾರಿಸಬೇಕು ಎಂಬ ಪ್ರಯತ್ನದ ಭಾಗವಾಗಿ ಇವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ರಾಹುಲ್ ಒಲವು ತೋರಿದರು ಎನ್ನಲಾಗಿದೆ.
ಬುಡಕಟ್ಟು ಜನರ ಒಲವು ಗಳಿಸಲು ಕಾಂಗ್ರೆಸ್ ಯತ್ನಿಸುತ್ತಿರುವ ಹೊತ್ತಿನಲ್ಲಿ ಸ್ವತಃ ವಕೀಲರು ಮತ್ತು ಮಾಜಿ ಪತ್ರಕರ್ತರಾಗಿರುವ ಜಿಗ್ನೇಶ್ ಮೆವಾನಿ ಅವರ ಸೇರ್ಪಡೆಯು ಪಕ್ಷಕ್ಕೆ ಬಲ ತುಂಬಲಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಸ್ಥಾನಕ್ಕೆ ದಲಿತ ಸಿಖ್ ಪಂಥಕ್ಕೆ ಸೇರಿದ ಚರನ್ಜಿತ್ ಸಿಂಗ್ ಚನ್ನಿ ಅವರನ್ನು ಕಾಂಗ್ರೆಸ್ ನೇಮಿಸಿದ್ದನ್ನು ಇಲ್ಲಿ ಗಮನಿಸಬಹುದು.
ಕನ್ಹಯ್ಯ ಕುಮಾರ್ ಮತ್ತು ಜಿಗ್ನೇಶ್ ಮೆವಾನಿ ಅವರನ್ನು ಕಾಂಗ್ರೆಸ್ಗೆ ಸ್ವಾಗತಿಸುವ ಪೋಸ್ಟರ್ಗಳು ಪಕ್ಷದ ಕಚೇರಿ ಸುತ್ತಮುತ್ತ ರಾರಾಜಿಸುತ್ತಿದ್ದವು.
(Kanhaiya Kumar Jignesh Mevani Join Congress Party infront of Rahul Gandhi)
ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು ರಾಜೀನಾಮೆಗೆ ಕಾರಣವೇನು?: ಪಂಜಾಬ್ ರಾಜಕೀಯದಲ್ಲಿನ ಪ್ರಮುಖ ಬೆಳವಣಿಗೆಗಳು ಇಲ್ಲಿವೆ
ಇದನ್ನೂ ಓದಿ: ಕಾಂಗ್ರೆಸ್ ಸೇರಲಿದ್ದಾರೆ ಕನ್ಹಯ್ಯಾ ಕುಮಾರ್, ಜಿಗ್ನೇಶ್ ಮೇವಾನಿ; ದೆಹಲಿ ಕಾಂಗ್ರೆಸ್ ಕಚೇರಿ ಮುಂದೆ ಸ್ವಾಗತ ಫಲಕ