Fact Check: ರಾಂಪುರದ ರೈಲ್ವೆ ಹಳಿ ಮೇಲೆ ಕಂಬ ಇಟ್ಟಿದ್ದು ನಿಜಕ್ಕೂ ಮುಸ್ಲಿಮರಲ್ಲ: ನಿಜಾಂಶ ಇಲ್ಲಿದೆ ನೋಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 25, 2024 | 5:28 PM

ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬ ಹಾಕಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ವೈರಲ್ ಆಗುತ್ತಿದೆ. ರೈಲು ಹಳಿತಪ್ಪಿಸಲು ಮುಸ್ಲಿಮರು ಈರೀತಿ ಮಾಡಿದ್ದಾರೆ ಎಂದು ಅನೇಕರು ಬರೆದುಕೊಂಡಿದ್ದಾರೆ. ಈ ಸುದ್ದಿಯ ಸತ್ಯಾಸತ್ಯತೆಯನ್ನು ನಾವು ಕಂಡುಹಿಡಿದಿದ್ದು, ಇಲ್ಲಿದೆ ನೋಡಿ.

Fact Check: ರಾಂಪುರದ ರೈಲ್ವೆ ಹಳಿ ಮೇಲೆ ಕಂಬ ಇಟ್ಟಿದ್ದು ನಿಜಕ್ಕೂ ಮುಸ್ಲಿಮರಲ್ಲ: ನಿಜಾಂಶ ಇಲ್ಲಿದೆ ನೋಡಿ
ರಾಂಪುರದ ರೈಲ್ವೆ ಹಳಿ ಮೇಲೆ ಕಂಬ ಇಟ್ಟಿವರ ಬಂಧನ
Follow us on

ಕೆಲವು ದಿನಗಳಿಂದ ರೈಲು ಅಪಘಾತಗಳ ಸಂಚಿಗೆ ಸಂಬಂಧಿಸಿದ ಸುದ್ದಿಗಳು ನಿರಂತರವಾಗಿ ಮುನ್ನೆಲೆಗೆ ಬರುತ್ತಿವೆ. ಈ ಮಧ್ಯೆ ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬ ಹಾಕಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ರೈಲನ್ನು ಹಳಿತಪ್ಪಿಸಿ ಅಪಘಾತ ಮಾಡುವ ಸಂಚಿನಲ್ಲಿ ಮುಸ್ಲಿಂ ಸಮುದಾಯದ ಜನರು ಈ ಕಬ್ಬಿಣದ ಕಂಬವನ್ನು ಹಾಕಿದ್ದಾರೆ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಎಕ್ಸ್(ಹಿಂದೆ ಟ್ವಿಟ್ಟರ್) ಮತ್ತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಜೊತೆಗೆ ಈ ಪ್ರಕರಣವು ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.

ಶ್ರೇಯ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ‘‘ಉತ್ತರ ಪ್ರದೇಶದ ರಾಂಪುರದಲ್ಲಿ ರೈಲ್ವೇ ಪಲ್ಟಿ ಮಾಡಬೇಕು ಅಂತ ಜೀಹಾದಿಗಳು ರೈಲ್ವೆ ಹಳಿ ಮೇಲೆ ಸುಮಾರು 8 ರಿಂದ 9 ಮೀಟರ್ ಉದ್ದದ ಕಬ್ಬಿಣದ ಕಂಬವನ್ನು ಇಟ್ಟಿದ್ದಾರೆ. ಆದರೆ,ಡೆಹ್ರಾಡೂನ್ ಎಕ್ಸ್‌ಪ್ರೆಸ್ ರೈಲಿನ ಲೋಕೋ ಪೈಲಟ್‌ನ ಜಾಣತನದಿಂದ ಅನಾಹುತ ತಪ್ಪಿದೆ. ಕಬ್ಬಿಣದ ಕಂಬವನ್ನು ನೋಡಿದ ತಕ್ಷಣ ತುರ್ತು ಬ್ರೇಕ್ ಹಾಕುವ ಮೂಲಕ ರೈಲನ್ನು ನಿಲ್ಲಿಸಿದರು’’ ಎಂದು ಬರೆದುಕೊಂಡಿದ್ದಾರೆ.

ಇದೇ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್ ಅನ್ನು ನೀವು ಇಲ್ಲಿ ನೋಡಬಹುದು.

Fact Check:

ವೈರಲ್ ಫೋಟೋದಲ್ಲಿ ಕಂಡುಬರುವ ಕಂಬವನ್ನು ಯಾವುದೇ ಪಿತೂರಿಯ ಭಾಗವಾಗಿ ರೈಲ್ವೆ ಹಳಿ ಮೇಲೆ ಇರಿಸಲಾಗಿಲ್ಲ ಅಥವಾ ಈ ಪ್ರಕರಣದ ಆರೋಪಿಗಳು ಮುಸ್ಲಿಮರಲ್ಲ ಎಂದು ಟಿವಿ9 ಕನ್ನಡ ನಡೆಸಿದ ಫ್ಯಾಕ್ಟ್ ಚೆಕ್ನಿಂದ ಕಂಡು ಬಂದಿದೆ. ಪಾನಮತ್ತರಾಗಿದ್ದ ಸಂದೀಪ್ ಮತ್ತು ವಿಜೇಂದ್ರ ಎಂಬವರು ಹಣಕ್ಕೋಸ್ಕರ ಕಂಬವನ್ನು ಕಳ್ಳತನ ಮಾಡಿ ತರುತ್ತಿದ್ದರು. ಆಗ ರೈಲು ಬರುವುದನ್ನು ಕಂಡು ಕಂಬವನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ.

ನಿಜಾಂಶವನ್ನು ತಿಳಿಯಲು ನಾವು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಈ ಘಟನೆಗೆ ಸಂಬಂಧಿಸಿದ ಮಾಧ್ಯಮ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ABPLive ಮತ್ತು Navbharat Times ವರದಿಗಳ ಪ್ರಕಾರ, ಸೆಪ್ಟೆಂಬರ್ 18 ರಂದು ಉತ್ತರ ಪ್ರದೇಶದ ರಾಮ್‌ಪುರ ಜಿಲ್ಲೆಯ ಬಿಲಾಸ್‌ಪುರ ಪ್ರದೇಶದ ಟ್ರ್ಯಾಕ್‌ನಲ್ಲಿ ಈ ಕಂಬ ಪತ್ತೆಯಾಗಿದೆ. ಇದನ್ನು ಕಂಡ ರುದ್ರಾಪುರ ಕಡೆಗೆ ಹೋಗುತ್ತಿದ್ದ ನೈನಿ ಜನಶತಾಬ್ದಿ ಚಾಲಕ ರೈಲನ್ನು ನಿಲ್ಲಿಸಿದ್ದರಿಂದ ಅನಾಹುತ ತಪ್ಪಿದೆ. ಈ ಪ್ರಕರಣದಲ್ಲಿ ಪೊಲೀಸರು ಸಂದೀಪ್ ಮತ್ತು ವಿಜೇಂದ್ರ ಎಂಬ ಇಬ್ಬರು ಯುವಕರನ್ನು ಸೆ.22 ರಂದು ಬಂಧಿಸಿದ್ದಾರೆ. ಇವರಿಬ್ಬರೂ ಹಿಂದೂಗಳು ಎಂಬುದು ಹೆಸರುಗಳಿಂದ ಸ್ಪಷ್ಟವಾಗುತ್ತದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದ ಮತಗಟ್ಟೆಗಳಿಗೆ ಭೇಟಿಕೊಟ್ಟ 15 ದೇಶಗಳ ಹಿರಿಯ ರಾಜತಾಂತ್ರಿಕರು

ಈ ವಿಷಯಕ್ಕೆ ಸಂಬಂಧಿಸಿದಂತೆ ರಾಂಪುರದ ಜಿಆರ್‌ಪಿಯ ವಿವರವಾದ ಹೇಳಿಕೆ ನಮಗೆ ಸಿಕ್ಕಿದ್ದು, ಕೆಳಗೆ ಓದಬಹುದು.

ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಸಂದೀಪ್ ಮತ್ತು ವಿಜೇಂದ್ರ ಇಬ್ಬರ ಮೇಲೂ ಈಗಾಗಲೇ ಅನೇಕ ಪ್ರಕರಣಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ರಾಂಪುರದ ರೈಲ್ವೆ ಹಳಿ ಮೇಲೆ ಕಂಬ ಇಟ್ಟಿದ್ದು ಮುಸ್ಲಿಮರು ಎಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳಾಗಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Wed, 25 September 24