Kargil Vijay Diwas 2024 : ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಬುದ್ದಿ ಕಲಿಸಿದ ‘ಅಪರೇಶನ್ ವಿಜಯ್’
ದೇಶದೆಲ್ಲೆಡೆ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುತ್ತೇವೆ. 1999 ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಮಡಿದ ಭಾರತೀಯ ಸೈನಿಕರ ಶೌರ್ಯ ಮತ್ತು ಪರಾಕ್ರಮಕ್ಕೆ ಗೌರವ ಸಲ್ಲಿಸುವ ದಿನವಾಗಿದೆ. ಈ ದಿನವನ್ನು ದೇಶಾದ್ಯಂತ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ, ಮಹತ್ವ ಹಾಗೂ ಆಚರಣೆ ಹೇಗೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾರ್ಗಿಲ್ ವಿಜಯವು ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ತಿರುವು ತಂದುಕೊಟ್ಟ ಕ್ಷಣವಾಗಿದೆ. ಕಾರ್ಗಿಲ್ ಯುದ್ಧವು ನಡೆದು 25 ವರ್ಷಗಳೇ ಕಳೆದರೂ ಎಂದು ಮರೆಯದ ಭಾರತದ ಸಾಧನೆಯಾಗಿದೆ. ಜುಲೈ 26 ಈ ದಿನವು ಭಾರತೀಯ ಯೋಧರ ತ್ಯಾಗ, ದೇಶ ಪ್ರೇಮ, ಸಾಹಸ, ಪರಾಕ್ರಮಕ್ಕೆ ಗೌರವ ಸಲ್ಲಿಸಲಾಗುತ್ತದೆ. 1999 ರಲ್ಲಿ ಈ ದಿನದಂದು, ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತದ ಭೂಪ್ರದೇಶಕ್ಕೆ ನುಗ್ಗಿದ ಈ ಪಾಕಿಸ್ತಾನಿ ನುಸುಳುಕೋರರ ವಿರುದ್ಧ ಭಾರತೀಯ ಸೈನಿಕರು ಹೋರಾಡಿ ಗೆಲುವನ್ನು ಸಾಧಿಸಿದ ದಿನವೇ ಕಾರ್ಗಿಲ್ ವಿಜಯ್ ದಿವಸ್.
ಕಾರ್ಗಿಲ್ ವಿಜಯ ದಿವಸದ ಇತಿಹಾಸ
ಪಾಕ್ ಹಾಗೂ ಭಾರತ ದೇಶಗಳ ಗಡಿಯಲ್ಲಿ ಯಾವುದೇ ಶಸ್ತಾಸ್ತ್ರ ಯುದ್ಧ ನಡೆಯದಂತೆ ಶಿಮ್ಲಾ ಒಪ್ಪಂದಕ್ಕೆ ಎರಡೂ ದೇಶಗಳು ಸಹಿ ಹಾಕಿತ್ತು. ಆದರೆ ಈ ಯುದ್ಧ ನಡೆಯಲು ಮುಖ್ಯ ಕಾರಣ ಭಾರತದ ನಿಯಂತ್ರಣದಲ್ಲಿರುವ ಕಾರ್ಗಿಲ್ ಪ್ರದೇಶಕ್ಕೆ ಪಾಕಿಸ್ತಾನಿ ಸೈನಿಕರು ಮತ್ತು ಕಾಶ್ಮೀರಿ ಉಗ್ರಗಾಮಿಗಳ ಒಳನುಸುಳುವಿಕೆಯಾಗಿತ್ತು. ಈ ವಿಚಾರವು ಗಮನಕ್ಕೆ ಬರುತ್ತಿದ್ದಂತೆ ಭಾರತ ಸರ್ಕಾರವು ಆಪರೇಷನ್ ವಿಜಯ್ ವನ್ನು ಪ್ರಾರಂಭಿಸಿತು.
ಇದಕ್ಕೆ ಪ್ರತ್ಯುತ್ತರ ನೀಡುವ ಸಲುವಾಗಿ 20,000 ಭಾರತೀಯ ಸೈನಿಕರನ್ನು ನಿಯೋಜಿಸಿ, ಪಾಕಿಸ್ತಾನಿ ಸೈನಿಕರನ್ನು ತನ್ನ ಭೂಪ್ರದೇಶದಿಂದ ಹೊರಹಾಕುವಲ್ಲಿ ಕೊನೆಗೂ ಯಶಸ್ವಿಯಾಯಿತು. ಆದರೆ 60 ದಿನಗಳಿಗಿಂತ ಹೆಚ್ಚು ಕಾಲ ನಡೆದ ಈ ಯುದ್ಧದಲ್ಲಿ 527 ಭಾರತೀಯ ಸೈನಿಕರು ದೇಶಕ್ಕಾಗಿ ಪ್ರಾಣ ಅರ್ಪಿಸಿದರು. ಜುಲೈ 26 ರಂದು ಈ ಯುದ್ಧವು ಕೊನೆಗೊಂಡಿತು. ಈ ಮಹತ್ವದ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಕರೆಯಲಾಯಿತು. ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಭಾರತೀಯ ವೀರರನ್ನು ಸ್ಮರಿಸಲು ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸವನ್ನು ದೇಶಾದ್ಯಂತ ಆಚರಿಸಲಾಗುತ್ತದೆ.
ಇದನ್ನೂ ಓದಿ: ನಿಮ್ಮ ಪ್ರೀತಿ ಪಾತ್ರರಿಗೆ ಈ ಸಂದೇಶ ಕಳುಹಿಸಿ ಭಾರತೀಯ ಸೈನ್ಯದ ಗೆಲುವನ್ನು ಸ್ಮರಿಸಿ
ಕಾರ್ಗಿಲ್ ವಿಜಯ್ ದಿವಸದ ಮಹತ್ವ ಹಾಗೂ ಆಚರಣೆ ಹೇಗೆ?
ಕಾರ್ಗಿಲ್ ಯುದ್ದದಲ್ಲಿ ಹೋರಾಡಿ ದೇಶಕ್ಕೆ ಗೆಲುವು ತಂದುಕೊಟ್ಟ ಹಾಗೂ ಯುದ್ಧದಲ್ಲಿ ಮಡಿದ ವೀರ ಸೈನಿಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ದಿನವು ಮಹತ್ವಕಾರಿಯಾಗಿದೆ. ಈ ದಿನದಂದು ಭಾರತದ ಪ್ರಧಾನಿ ಪ್ರತಿ ವರ್ಷ ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸುತ್ತಾರೆ. ಅದಲ್ಲದೇ, ಭಾರತೀಯ ಸಶಸ್ತ್ರ ಪಡೆಗಳ ಕೊಡುಗೆಗಳನ್ನು ಸ್ಮರಿಸಲು ದೇಶದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:28 pm, Wed, 24 July 24