ನವದೆಹಲಿ: ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ಪೂರೈಸಲು ಭಾರತೀಯ ಆಹಾರ ನಿಗಮ (FCI) ನಿರಾಕರಿಸಿರುವ ವಿಚಾರ ರಾಜಕೀಯ ಆಯಾಮ ಪಡೆದಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಆ ಕುರಿತು ಸ್ಪಷ್ಟನೆ ನೀಡಿದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳೂ ಸೇರಿದಂತೆ ಹೆಚ್ಚುವರಿ ಅಕ್ಕಿಗೆ ಇತರ ರಾಜ್ಯಗಳು ಮಾಡಿರುವ ಬೇಡಿಕೆಯನ್ನು ತಿರಸ್ಕರಿಸಲಾಗಿದೆ. ಮುಕ್ತ ಮಾರುಕಟ್ಟೆಯಿಂದ ಅಕ್ಕಿ ಖರೀದಿಸಲು ಕರ್ನಾಟಕ ಮುಕ್ತವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಆಹಾರ ಸಚಿವ ಪಿಯೂಷ್ ಗೋಯಲ್ (Piyush Goyal) ಮಂಗಳವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರವನ್ನು ಟೀಕಿಸುವ ಬದಲು ಮುಕ್ತ ಮಾರುಕಟ್ಟೆಯಿಂದ ಅಕ್ಕಿ ಖರೀದಿಸಲು ಮತ್ತು ವಿತರಿಸಲು ಕರ್ನಾಟಕ ಮುಕ್ತವಾಗಿದೆ ಎಂದು ಗೋಯಲ್ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಕ್ತ ಮಾರುಕಟ್ಟೆಯಲ್ಲಿ ಧಾನ್ಯದ ಬೆಲೆ ಹೆಚ್ಚಾಗದಂತೆ ನೋಡಿಕೊಳ್ಳಲು ಮತ್ತು ಜನರು ಅದನ್ನು ಕೈಗೆಟುಕುವ ದರದಲ್ಲಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಆಹಾರ ನಿಗಮ ತನ್ನ ದಾಸ್ತಾನುಗಳಿಂದ ಹಲವಾರು ರಾಜ್ಯಗಳಿಗೆ ಅಕ್ಕಿ ನೀಡಲು ನಿರಾಕರಿಸಿದೆ ಎಂದು ತಿಳಿಸಿದ್ದಾರೆ.
ಜೂನ್ 8 ರಂದು ನಡೆದ ಕಾರ್ಯದರ್ಶಿಗಳ ಸಮಿತಿಯ ಸಭೆಯಲ್ಲಿ ದೇಶದ 140 ಕೋಟಿ ಜನರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಕೇಂದ್ರ ಮೀಸಲಿನ ಭಾಗವಾಗಿ ಅಕ್ಕಿ ದಾಸ್ತಾನು ಇರಿಸಿಕೊಳ್ಳಲು ನಿರ್ಧರಿಸಲಾಗಿತ್ತು. ರಾಜ್ಯಗಳು ಅಗತ್ಯಬಿದ್ದರೆ ಮುಕ್ತ ಮಾರುಕಟ್ಟೆಯಿಂದ ಅಕ್ಕಿಯನ್ನು ಖರೀದಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳೂ ಹೆಚ್ಚುವರಿ ಅಕ್ಕಿಗೆ ಬೇಡಿಕೆಗಳನ್ನು ಸಲ್ಲಿಸಿವೆ. ವಿವಿಧ ರಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿಗೆ ಬೇಡಿಕೆ ಇಡುತ್ತವೆ. ಆದರೆ ನಾವು ಎಲ್ಲರಿಗೂ ಅಕ್ಕಿ ನೀಡಲು ನಿರಾಕರಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಕ್ಕಿ ಫೈಟ್ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಲಿರುವ ಸಿಎಂ ಸಿದ್ದರಾಮಯ್ಯ
ನಮಗೆ ಕೇಂದ್ರ ಸರ್ಕಾರದ ಬಳಿ ಇರುವ ಅಕ್ಕಿ ದಾಸ್ತಾನು ಬೇಕು. ಇದರಿಂದ ದೇಶದಲ್ಲಿ (ಅಕ್ಕಿ) ಬೆಲೆಯಲ್ಲಿ ಯಾವುದೇ ಏರಿಕೆಯಾಗುವುದಿಲ್ಲ. ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಮೂಲೆ ಮೂಲೆಯಲ್ಲಿ ಅಗ್ಗದ ದರದಲ್ಲಿ ಮಾರಾಟ ಮಾಡಲಾಗುತ್ತದೆ. ದೇಶದ 140 ಕೋಟಿ ಜನರಿಗೂ ಅಕ್ಕಿ ಲಭ್ಯವಾಗುವಂತೆ ನೋಡಿಕೊಳ್ಳಬೇಕಿದೆ ಎಂದು ಸಚಿವರು ಹೇಳಿದ್ದಾರೆ.
ಗೋಧಿ ಮತ್ತು ಅಕ್ಕಿಯ ಪೂರೈಕೆಯನ್ನು ಹೆಚ್ಚಿಸಲು ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿಯಲ್ಲಿ ಎಫ್ಸಿಐ ತನ್ನ ದಾಸ್ತಾನಿನಿಂದ ಹೆಚ್ಚುವರಿ ಧಾನ್ಯಗಳನ್ನು ಬಿಡುಗಡೆ ಮಾಡುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ