KGF 2 ಹಾಡಿನ ದುರ್ಬಳಕೆ ಆರೋಪ: ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ನೀಡಿದ ಕರ್ನಾಟಕ ಹೈಕೋರ್ಟ್
ಕೆಜಿಎಫ್ 2 ಹಾಡಿನ ದುರ್ಬಳಕೆ ಆರೋಪ ಪಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸೇರಿದಂತೆ ಇತರೆ ಇಬ್ಬರು ಕಾಂಗ್ರೆಸ್ ನಾಯಕರಿಗೆ ಕರ್ನಾಟಕ ಹೈಕೊರ್ಟ್ ಬಿಗ್ ರಿಲೀಫ್ ನೀಡಿದೆ.
ಬೆಂಗಳೂರು: ಕೆಜಿಎಫ್-2 ಚಿತ್ರದ ಹಾಡನ್ನು (KGF -2 Film Song) ಅಕ್ರಮವಾಗಿ ಬಳಸಿಕೊಂಡು ಎಂಆರ್‌ಟಿ ಮ್ಯೂಸಿಕ್ ಕಂಪನಿಯ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿದ ಆರೋಪ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhii) ಕರ್ನಾಟಕ ಹೈಕೋರ್ಟ್ (Karnataka High Court) ಬಿಗ್ ರಿಲೀಫ್ ನೀಡಿದೆ. ರಾಹುಲ್ ಗಾಂಧಿ, ಜೈರಾಮ್ ರಮೇಶ್, ಸುಪ್ರಿಯಾ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಕರ್ನಾಟಕ ಹೈಕೋರ್ಟ್ ನೊಟೀಸ್: ಕೆಜಿಎಫ್ 2 ಹಾಡಿನ ದುರ್ಬಳಕೆ ಆರೋಪ
ದೂರಿನಲ್ಲಿ ಕ್ರಿಮಿನಲ್ ಪ್ರಕರಣದ ಯಾವುದೇ ಅಂಶಗಳಿಲ್ಲ. ಕಾಂಗ್ರೆಸ್ ನಾಯಕರಿಗೂ ಕಾಪಿರೈಟ್ ಉಲ್ಲಂಘನೆಗೂ ಸಂಬಂಧವಿಲ್ಲ ಎಂದು ರಾಹುಲ್ ಗಾಂಧಿ ಪರ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ವಾದ ಮಂಡಿಸಿದರು. ಈ ವಾದ-ಪ್ರತಿವಾದ ಆಲಿಸಿದ ನ್ಯಾ.ಸುನೀಲ್ ದತ್ ಯಾದವ್, ಕ್ರಿಮಿನಲ್ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದರು. ಇದರಿಂದ ರಾಹುಲ್ ಗಾಂಧಿ, ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ಮ ಹಾಗೂ ಸುಪ್ರಿಯಾgಎ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಪ್ರಕರಣದ ಹಿನ್ನೆಲೆ
ಕೆಜಿಎಫ್-2 ಚಿತ್ರದ ಹಾಡನ್ನು ಅಕ್ರಮವಾಗಿ ಬಳಸಿಕೊಂಡು ಎಂಆರ್‌ಟಿ ಮ್ಯೂಸಿಕ್ ಕಂಪನಿಯ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿದ ಆರೋಪದ ಮೇಲೆ ಕಾಂಗ್ರೆಸ್ ಪಕ್ಷದ ಮತ್ತು ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಬೆಂಗಳೂರಿನ ವಾಣಿಜ್ಯ ನ್ಯಾಯಾಲಯವು ಟ್ವಿಟರ್‌ಗೆ ನಿರ್ದೇಶನ ನೀಡಿತ್ತು. ಈ ನಿರ್ದೇಶನವನ್ನು ಕಾಂಗ್ರೆಸ್ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಾಹುಲ್ ಗಾಂಧಿ ಕಾಲ್ನಡಿಗೆಯಲ್ಲಿ ಸಾಗುವ ವಿಡಿಯೋಗೆ ‘ಕೆಜಿಎಫ್ 2’ ಚಿತ್ರದ ಹಿಂದಿ ಗೀತೆ ‘ಸುಲ್ತಾನ್..’ ಹಾಡನ್ನು ಬಳಕೆ ಮಾಡಲಾಗಿತ್ತು. ಈ ಕಾರಣಕ್ಕೆ ರಾಹುಲ್ ಗಾಂಧಿ ವಿರುದ್ಧ ಈ ಹಾಡಿನ ಹಿಂದಿ ಹಕ್ಕನ್ನು ಹೊಂದಿರುವ ಎಂಆರ್‌ಟಿ ಮ್ಯೂಸಿಕ್ನವರು ಫೋರ್ಜರಿ ಪ್ರಕರಣ ದಾಖಲು ಮಾಡಿದ್ದರು. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ರಾಹುಲ್ ಗಾಂಧಿ ಮಾತ್ರವಲ್ಲದೆ, ಜೈರಾಮ್ ರಮೇಶ್, ಸುಪ್ರಿಯಾ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಪಕ್ಷವು, ’ಟ್ವಿಟರ್ ಖಾತೆಗಳನ್ನು ನಿರ್ಭಂದಿಸುವಂತೆ ಬೆಂಗಳೂರು ನ್ಯಾಯಾಲಯ ಆದೇಶ ಹೊರಡಿಸಿದ್ದನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿದೇವು. ನಾವು ಯಾವುದೇ ವಿಚಾರಣೆಗೆ ಹಾಜರಾಗಲಿಲ್ಲ. ಮತ್ತು ಆದೇಶದ ಪ್ರತಿ ನಮಗೆ ಲಭ್ಯವಾಗಿಲ್ಲ. ಈ ಕುರಿತು ನಾವು ಕಾನೂನಾತ್ಮಕವಾಗಿ ಏನು ಪರಿಹಾರ ಕಂಡುಕೊಳ್ಳಬಹುದೆಂದು ಯೋಚಿಸುವತ್ತೇವೆ’ ಎಂದು ಟ್ವೀಟ್ ಮಾಡಿತ್ತು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 4:48 pm, Fri, 16 December 22