ಬೆಂಗಳೂರು: ಉತ್ತರ ಪ್ರದೇಶದಲ್ಲಿ ಕರ್ನಾಟಕದ ರೇಷ್ಮೆ ಮಾರುಕಟ್ಟೆ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿ ವಾರಣಾಸಿಯ ಬನಾರಸ್ ವಿವಿಯಲ್ಲಿ ಉತ್ತರ ಪ್ರದೇಶದ ರೇಷ್ಮೆ ಇಲಾಖೆ, ಟೆಕ್ಸ್‌ಟೈಲ್ ಇಲಾಖೆ ಮತ್ತು ರೀಲರ್ಸ್‌ಗಳ ಜೊತೆ ರೇಷ್ಮೆ ಸಚಿವ ನಾರಾಯಣ ಗೌಡ ಸಭೆ ನಡೆಸಿದ್ದಾರೆ.
ಉತ್ತರ ಪ್ರದೇಶದಲ್ಲಿ ರೇಷ್ಮೆ ಉತ್ಪಾದನೆ ಹೆಚ್ಚಿಸಲು, ರಾಜ್ಯದ ರೇಷ್ಮೆ ಇಲಾಖೆ ಸಿದ್ಧಪಡಿಸಿದ್ದ ವರದಿ ಸಭೆಯಲ್ಲಿ ಸಲ್ಲಿಸಿದ್ದಾರೆ. ಕರ್ನಾಟಕದ ರೇಷ್ಮೆ ಗುಣಮಟ್ಟ, ಪೂರೈಕೆ ಹಾಗೂ ರೇಷ್ಮೆ ಮಾರಾಟಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಕರ್ನಾಟಕದ ರೇಷ್ಮೆ ಮಾರುಕಟ್ಟೆ ವ್ಯವಸ್ಥೆ ಹಾಗೂ ರೇಷ್ಮೆ ಬೆಳೆಗಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಾರುಕಟ್ಟೆ ವಿಸ್ತರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಸಚಿವ ನಾರಾಯಣ ಗೌಡ ವಿವರಿಸಿದ್ದಾರೆ.
ವಾರಣಾಸಿಯಲ್ಲಿ ರೇಷ್ಮೆಗೆ ಹೆಚ್ಚಿನ ಬೇಡಿಕೆ ಇದೆ. ಸದ್ಯ ಚೀನಾದಿಂದ ರೇಷ್ಮೆ ಆಮದು ಸ್ಥಗಿತಗೊಳಿಸಲಾಗಿದೆ. ಕರ್ನಾಟಕವು ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಹೆಚ್ಚಿನ ಸ್ವಯಂ ಚಾಲಿತ ರೀಲಿಂಗ್ ಯಂತ್ರ(ಎಂಆರ್‌ಎಂ)ಗಳನ್ನು ಹೊಂದಿದ್ದು ಅತ್ಯುತ್ತಮ ತಂತ್ರಜ್ಞಾನದೊಂದಿಗೆ ಗುಣಮಟ್ಟದ ಬೈವೊಲ್ಟಿನ್ ದಾರವನ್ನು ಉತ್ಪಾದಿಸುತ್ತಿದೆ. ಇದು ಚೀನಾ ರೇಷ್ಮೆಗಿಂತಲೂ ಉತ್ತಮವಾಗಿದೆ ಎಂದು ಸಚಿವ ನಾರಾಯಣಗೌಡ ತಿಳಿಸಿದರು.
ಕರ್ನಾಟಕದಲ್ಲಿ ಮೈಸೂರು ಸಿಲ್ಕ್ ನಂತೆಯೇ ಉತ್ತರ ಪ್ರದೇಶದ ಬನರಾಸ್ ಸೀರೆ ಪ್ರಸಿದ್ಧಿಯಾಗಿದೆ. ವಾರಣಾಸಿಯ ಬನಾರಸ್ ಗೂ ಕರ್ನಾಟಕಕ್ಕೂ ಅವಿನಾವಭಾವ ಸಂಬಂಧವಿದೆ. 1997ರಲ್ಲೇ ಕೆಎಸ್‌ಎಂಬಿ ವತಿಯಿಂದ ವಾರಣಾಸಿಗೆ ಕರ್ನಾಟಕದ ರೇಷ್ಮೆ ಪೂರೈಸಲಾಗುತ್ತಿತ್ತು. ಆದರೆ, ಕಾರಣಾಂತರಗಳಿಂದ 2003ರಿಂದ ವಾರಣಾಸಿಗೆ ರೇಷ್ಮೆ ಸರಬರಾಜು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಮತ್ತೆ ವಾರಣಾಸಿಯಲ್ಲಿ ರೇಷ್ಮೆ ಮಾರುಕಟ್ಟೆ ಆರಂಭಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಬನಾರಸ್ ನೇಕಾರರಿಗೆ ಅಗತ್ಯ ಇರುವ ಗುಣಮಟ್ಟದ ರೇಷ್ಮೆಯನ್ನು ಪೂರೈಸಲು ನಮ್ಮ ಸರ್ಕಾರ ಸಿದ್ಧವಾಗಿದೆ. ವಾರಣಾಸಿಯಲ್ಲಿ ನಮ್ಮ ಮಾರುಕಟ್ಟೆ/ ರೇಷ್ಮೆ ಬ್ಯಾಂಕ್ ಸ್ಥಾಪಿಸಲು ವ್ಯವಸ್ಥೆ ಕಲ್ಪಿಸಿ, ಕರ್ನಾಟಕ ಮತ್ತು ವಾರಣಾಸಿ ನಡುವಿನ ಹಳೇ ಸಂಬಂಧ ಮತ್ತೆ ವೃದ್ದಿಸಲು ಸಹಕರಿಸುವಂತೆ ಡಾ.ನಾರಾಯಣಗೌಡ ಅವರು ಮನವಿ ಮಾಡಿದರು.
ಅಗತ್ಯವಿರುವ ಗುಣಮಟ್ಟದ ರೇಷ್ಮೆ ನೀಡಿದರೆ ಎನ್ಡಿಹೆಚ್ಸಿ ಮುಖಾಂತರ ಕೆಎಸ್‌ಎಂಬಿಯಿಂದಲೇ ಖರೀದಿಸಲು ಕ್ರಮ ವಹಿಸುವುದಾಗಿ ಉತ್ತರ ಪ್ರದೇಶದ ರೇಷ್ಮೆ ಇಲಾಖೆ ಅಧಿಕಾರಿಗಳಿಂದ ಭರವಸೆ ಸಿಕ್ಕಿದೆ. ವಾರಣಾಸಿಯಲ್ಲಿ ಕೆಎಸ್‌ಎಂಬಿ ಬ್ರಾಂಚ್ ಆರಂಭಿಸಲು ಹಾಗೂ ಗೋದಾಮಿಗೆ ಅಗತ್ಯವಿರುವ ಜಾಗವನ್ನು ಒದಗಿಸುವುದಾಗಿ ಉತ್ತರ ಪ್ರದೇಶ ರೇಷ್ಮೆ ಇಲಾಖೆ ಕಾರ್ಯದರ್ಶಿ ನರೇಂದ್ರ ಸಿಂಗ್ ಪಟೇಲ್ ಭರವಸೆ ನೀಡಿದ್ದಾರೆ.
ಇನ್ನು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ (ಕೆಎಸ್‌ಎಂಬಿ) ಬ್ರಾಂಚ್ ತೆರೆಯಲು ಯುಪಿ ಸರ್ಕಾರ ಜಾಗ ಗುರುತು ಮಾಡಿದೆ. ಸಾರಂಗ್ ತಲಾಬ್ ಪ್ರದೇಶದಲ್ಲಿ ಶಾಖೆ ತೆರೆಯಲು ಒಪ್ಪಿಗೆ ನೀಡಿದ್ದು ಕಟ್ಟಡದ ಜಾಗಕ್ಕೆ ನಾರಾಯಣ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Air Pollution: ವಾಯು ಮಾಲಿನ್ಯದಿಂದ ಕುಸಿಯುತ್ತಿದೆ ಮನುಷ್ಯರ ಆಯುಷ್ಯ; ಮಾಲಿನ್ಯದಿಂದ ಚೀನಾ ಬಚಾವಾಗಿದ್ದು ಹೇಗೆ?
Published On - 8:28 pm, Thu, 18 November 21