ಪ್ರತ್ಯೇಕತಾವಾದಿ ಗಿಲಾನಿ ಅವರ ದೇಹವನ್ನು ಹೂಣಿಡುವ ಮುನ್ನ ಪಾಕಿಸ್ತಾನದ ರಾಷ್ಟ್ರಧ್ವಜದಲ್ಲಿ ಸುತ್ತಲಾಗಿತ್ತು: ಕಾಶ್ಮೀರ ಪೊಲೀಸ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 05, 2021 | 12:32 AM

ಒಂದು ವಿಡಿಯೋನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು, ಪಾಕಿಸ್ತಾನ ಧ್ವಜದಲ್ಲಿ ಸುತ್ತಿದ ಗಿಲಾನಿ ಅವರ ದೇಹದ ಸುತ್ತ ಜಮಾಯಿಸಿದ್ದಾರೆ. ಗಿಲಾನಿ ದೇಹವನ್ನು ಇರಿಸಿದ ಕೋಣೆಯಲ್ಲಿ ಗದ್ದಲ ಮತ್ತು ಘೋಷಣೆ ಕೂಗುವುದು ಕೇಳಿಸುತ್ತಿದೆ.

ಪ್ರತ್ಯೇಕತಾವಾದಿ ಗಿಲಾನಿ ಅವರ ದೇಹವನ್ನು ಹೂಣಿಡುವ ಮುನ್ನ ಪಾಕಿಸ್ತಾನದ ರಾಷ್ಟ್ರಧ್ವಜದಲ್ಲಿ ಸುತ್ತಲಾಗಿತ್ತು: ಕಾಶ್ಮೀರ ಪೊಲೀಸ್
ಸಯ್ಯದ್​ ಗಿಲಾನಿ ಮತ್ತು ಪಾಕಿಸ್ತಾನದ ಧ್ವಜದಲ್ಲಿ ಸುತ್ತಿದ ಅವರ ದೇಹ
Follow us on

ಶ್ರೀನಗರ: ಮೂರು ದಿನ ಮುಂಚೆ ತನ್ನ 92 ನೇ ವಯಸ್ಸಿನಲ್ಲಿ ನಿಧನರಾದ ಕಾಶ್ಮೀರ ಪ್ರತ್ಯೇಕತಾವಾದಿ ಧುರೀಣ ಸಯ್ಯದ್ ಅಲಿ ಶಾ ಗಿಲಾನಿ ಅವರ ಮೃತದೇಹವನ್ನು ಪಾಕಿಸ್ತಾನದ ರಾಷ್ಟ್ರಧ್ವಜದಲ್ಲಿ ಸುತ್ತಿದ್ದು ನಂತರ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಗಿಲಾನಿ ಅವರ ದೇಹವನ್ನು ಗುರುವಾರ ಬೆಳಗಿನ ಸಮಯ ತಮ್ಮ ವಶಕ್ಕೆ ತೆಗೆದುಕೊಂಡು ಸರಳ ರೀತಿಯಲ್ಲಿ ಅಂತಿಮ ಸಂಸ್ಕಾರವನ್ನು ಪೂರೈಸಿದ್ದನ್ನು ತೋರುವ ಅನೇಕ ವಿಡಿಯೋಗಳು ಬೆಳಕಿಗೆ ಬಂದಿವೆ. ಕಟ್ಟುನಿಟ್ಟಿನ ಭಯೋತ್ಪಾದನೆ-ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಗಿಲಾನಿ, ಬುಧವಾರ ಸಾಯಂಕಾಲ ಕೊನೆಯುಸಿರೆಳೆದರು. ಅವರ ನಿಧನದ ಹಿನ್ನೆಲೆಯಲ್ಲಿ, ಕಾಶ್ಮಿರ್ ನಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು ಹಾಗೂ ಪೋನ್ ಮತ್ತು ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಕಾಶ್ಮೀರ್​​​​ನಲ್ಲಿ  ಶುಕ್ರವಾರ ರಾತ್ರಿ ಪೋನ್ ಮತ್ತು ಅಂತರ್ಜಾಲ ಸೇವೆಯನ್ನು ಪುನರ್ ಸ್ಥಾಪಿಸಿದ ನಂತರ ವಿಡಿಯೊಗಳು ಬೆಳಕಿಗೆ ಬಂದಿವೆ, ಮೊಬೈಲ್ ಇಂಟರ್ನೆಟ್ ಸೇವೆ ಇನ್ನೂ ಸ್ಥಗಿತಗೊಂಡ ಸ್ಥಿತಿಯಲ್ಲೇ ಇದೆ. ಜನ ಗುಂಪು ಸೇರುವುದನ್ನು ಪೊಲೀಸರು ನಿಷೇಧಿಸಿದ್ದಾರೆ.

ಒಂದು ವಿಡಿಯೋನಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು, ಪಾಕಿಸ್ತಾನ ಧ್ವಜದಲ್ಲಿ ಸುತ್ತಿದ ಗಿಲಾನಿ ಅವರ ದೇಹದ ಸುತ್ತ ಜಮಾಯಿಸಿದ್ದಾರೆ. ಗಿಲಾನಿ ದೇಹವನ್ನು ಇರಿಸಿದ ಕೋಣೆಯಲ್ಲಿ ಗದ್ದಲ ಮತ್ತು ಘೋಷಣೆ ಕೂಗುವುದು ಕೇಳಿಸುತ್ತಿದೆ. ಕೋಣೆಯ ಬಾಗಿಲನ್ನು ತೆರೆಯದಂತೆ ಮಹಿಳೆಯರು ತಡೆಯುತ್ತಿದ್ದಾರೆ. ಧಾರ್ಮಿಕ ವಾಕ್ಯಗಳನ್ನು ಬರೆದಿರುವ ಕೋಣೆಯಲ್ಲಿ ಒಬ್ಬ ಶಸ್ತ್ರಧಾರಿ ಪೊಲೀಸ್ ಸಹ ನಿಂತಿರುವುದು ವಿಡಿಯೋನಲ್ಲಿ ಕಾಣುತ್ತಿದೆ.

ಪ್ರತ್ಯೇಕತಾವಾದವನ್ನು ಉಗ್ರವಾಗಿ ಪ್ರತಿಪಾದಿಸುತ್ತಿದ್ದ ಗಿಲಾನಿ ಅವರ ಅಂತ್ಯ ಸಂಸ್ಕಾರವನ್ನು ಸರಳವಾಗಿ ನೆರವೇರಿಸಲಾಯಿತು. ಗಿಲಾನಿ ದೇಹವನ್ನು ಪೊಲೀಸರು ಬಲವಂತದಿಂದ ತೆಗೆದುಕೊಂಡು ಹೋದರು ಮತ್ತು ದೇಹ ಹೂಣಿಡುವ ವಿಧಿಯಲ್ಲಿ ಪಾಲ್ಗೊಳ್ಳಲು ತಮಗೆ ಅವಕಾಶ ನೀಡಲಿಲ್ಲ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.

ಅಂದು ಜರುಗಿದ ಎಲ್ಲ ರಾಷ್ಟ್ರ ವಿರೋಧಿ ಚಟುವಟಿಕೆಗಳ ವಿರುದ್ಧ ಎಫ್ ಈ ಆರ್ ದಾಖಲಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

ಗಿಲಾನಿ ಅವರ ಮನೆ ಹತ್ತಿರ ನೆರೆದಿದ್ದ ಜನರು ಒಬ್ಬ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದರೆಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದರು. ಆ ಜನ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರು ಮತ್ತು ಸಾಮಾಜಿಕ ಜಾಲತಾಣ ಮತ್ತು ಫೋನ್ ಕರೆಗಳ ಮೂಲಕ ಜನರನ್ನು ಕೆರಳಿಸಲು ಪ್ರಯತ್ನಿಸುತ್ತಿದ್ದರು, ಎಂದು ಸಿಂಗ್ ಹೇಳಿದರು.

‘ಗಿಲಾನಿ ಸಾಹಬ್ ಮತ್ತು ಅವರ ಕುಟುಂಬದ ಜೊತೆ ಪೊಲೀಸರು ನಿರಂತರವಾಗಿ ಸಂಪರ್ಕದಲ್ಲಿದ್ದರೂ ಅವರ ಕುಟುಂಬ ಮತ್ತು ಬೇರೆ ಜನ ನಮ್ಮೊಂದಿಗೆ ಹಾಗೆ ಕೆಟ್ಟದಾಗಿ ವರ್ತಿಸುತ್ತಾರೆ ಅಂತ ನಾವಂದುಕೊಂಡಿರಲಿಲ್ಲ. ಯಾರಿಗೂ ಗೊತ್ತಿರದ ಸಂಗತಿಯೇನೆಂದರೆಮ ನಮ್ಮ ಅಧಿಕಾರಿಯೊಬ್ಬರು ಕಳೆದ ವಾರ ಗಿಲಾನಿ ಸಾಹಬ್ ಮನೆಗೆ ಭೇಟಿ ನೀಡಿದ್ದಾಗ ಪುಸ್ತಕವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದರು,’ ಎಂದು ಸಿಂಗ್ ಹೇಳಿದರು.

ಗಿಲಾನಿ ಅವರ ದೇಹವನ್ನಿಟ್ಟಿದ್ದ ಕೋಣೆಯ ಬಾಗಿಲನ್ನು ಮುರಿದು ಒಳಹೊಕ್ಕ ಪೊಲೀಸರು ಬಲ ಪ್ರದರ್ಶಿಸಿ ಮತ್ತು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿ ದೇಹವನ್ನು ತೆಗೆದುಕೊಂಡು ಹೋದರು ಎಂದು ಗಿಲಾನಿ ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

‘ಶವ ಸಂಸ್ಕಾರ ವಿಧಿಯನ್ನು ನಾವು ಬೆಳಗ್ಗೆ ಮಾಡಬೇಕೆಂದು ಕೊಂಡಿದ್ದೆವು. ಆದರೆ ಪೊಲೀಸರು ನಮ್ಮ ಮನವಿಯನ್ನು ತಿರಸ್ಕರಿಸಿದರು. ಬಾಗಿಲು ಮುರಿದು ಒಳನುಗ್ಗಿದ ಅವರರು ಹೆಣ್ಣು ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿದರು. ಪೊಲೀಸರು ದೇಹವನ್ನು ಬಲವಂತದಿಂದ ತೆಗೆದುಕೊಂಡ ಕಾರಣ ಅಂತಿಮ ಸಂಸ್ಕಾರದಲ್ಲಿ ನಮಗೆ ಪಾಲ್ಗೊಳ್ಳವುದು ಸಾಧ್ಯವಾಗಲಿಲ್ಲ,’ ಎಂದು ಗಿಲಾನಿ ಅವರ ಮಗ ನಸೀಮ್ ಗಿಲಾನಿ ಹೇಳಿದರು.

ಆದರೆ, ಅಂತಿಮ ಸಂಸ್ಕಾರದ ಪ್ರಾರ್ಥನೆಯಲ್ಲಿ ಕುಟುಂಬದ ಕೆಲ ಸದಸ್ಯರು ಭಾಗವಹಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಗಿಲಾನಿ ಅವರ ದೇಹವನ್ನು ಶ್ರೀನಗರ ವಿಮಾನ ನಿಲ್ದಾಣ ರಸ್ತೆಯಲ್ಲಿರಿರುವ ಅವರ ಮನೆಗೆ ಹತ್ತಿರದ ಹೈದರ್ಪುರ್ ಸ್ಮಶಾನದಲ್ಲಿ ಹೂಣಿಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಕಳೆದ ಮೂರು ದಿನಗಳಿಂದ ಕಾಶ್ಮೀರ್ ನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.

ಇದನ್ನೂ ಓದಿ: ಕಾಶ್ಮೀರ ಪ್ರತ್ಯೇಕತಾವಾದಿ ಸಯ್ಯದ್ ಅಲಿ ಶಾ ಗೀಲಾನಿ ಇನ್ನಿಲ್ಲ, ಅವರಿಗೆ 92 ವರ್ಷ ವಯಸ್ಸಾಗಿತ್ತು