Kedarnath Yatra: ಭಾರೀ ಮಳೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೇದಾರನಾಥ ಯಾತ್ರೆ ಸ್ಥಗಿತ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 10, 2022 | 8:16 AM

ಸೋನ್‌ಪ್ರಯಾಗದಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಹಿತಕರ ಘಟನೆಗಳ ಭೀತಿಯ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

Kedarnath Yatra: ಭಾರೀ ಮಳೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೇದಾರನಾಥ ಯಾತ್ರೆ ಸ್ಥಗಿತ
ಕೇದಾರನಾಥ ಯಾತ್ರಾರ್ಥಿಗಳು
Image Credit source: Rameshwar Gaur
Follow us on

ಕೇದಾರನಾಥ: ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಅಮರನಾಥ ಯಾತ್ರೆ (Amarnath Yatra) ವೇಳೆ ಮೇಘಸ್ಫೋಟದಿಂದ ಭಾರೀ ಸಾವು-ನೋವುಗಳು ಸಂಭವಿಸಿರುವ ಬೆನ್ನಲ್ಲೇ ಕೇದಾರನಾಥ ಯಾತ್ರೆಯನ್ನು (Kedarnath Yatra) ಕೂಡ ನಿಲ್ಲಿಸಲಾಗಿದೆ. ಅಹಿತಕರ ಘಟನೆಗಳ ಭೀತಿಯ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾಡಳಿತ ತಿಳಿಸಿದೆ.

ಅಮರನಾಥ ಬಳಿಯ ನೂರಾರು ಟೆಂಟ್‌ಗಳು ಹಠಾತ್ ಪ್ರವಾಹಕ್ಕೆ ಸಿಲುಕಿ 16 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮರನಾಥ ದೇವಾಲಯದ ಬಳಿ ಸುಮಾರು 10,000 ಜನರು ಬೀಡುಬಿಟ್ಟಿದ್ದರು. ಹಿಮಾಲಯ ಪರ್ವತದ ಗುಹೆಯಲ್ಲಿ ನೆಲೆಸಿದ್ದರು. ದಿಢೀರನೆ ಮೇಘಸ್ಫೋಟ ಉಂಟಾಗಿದ್ದರಿಂದ ಪ್ರವಾಹ ಉಂಟಾಗಿದೆ. ಹೆಲಿಕಾಪ್ಟರ್ ಮೂಲಕ ಸತ್ತವರನ್ನು ಮತ್ತು ಗಾಯಗೊಂಡ ಯಾತ್ರಾರ್ಥಿಗಳನ್ನು ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ.

“ಅಮರನಾಥದ ಸುತ್ತಮುತ್ತ ಇಲ್ಲಿಯವರೆಗೆ 16 ಶವಗಳನ್ನು ಪತ್ತೆಹಚ್ಚಲಾಗಿದೆ. ಇದುವರೆಗೆ 40 ಮಂದಿ ಕಾಣೆಯಾಗಿದ್ದಾರೆ” ಎಂದು ರಾಜ್ಯ ವಿಪತ್ತು ಪ್ರತಿಕ್ರಿಯೆ ಸಂಸ್ಥೆಯ ಅಧಿಕಾರಿಯೊಬ್ಬರು AFPಗೆ ತಿಳಿಸಿದ್ದಾರೆ.

ಇದನ್ನೂ ಓದಿ: Amarnath Cloudburst: ಅಮರನಾಥ ಮೇಘಸ್ಫೋಟದಲ್ಲಿ 16 ಜನ ಸಾವು; ಜಮ್ಮು ಕಾಶ್ಮೀರ ಆಡಳಿತದಿಂದ ಸಹಾಯವಾಣಿ ಆರಂಭ

ಸೋನ್‌ಪ್ರಯಾಗದಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಹಿತಕರ ಘಟನೆಗಳ ಭೀತಿಯ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ರುದ್ರಪ್ರಯಾದ್ ಜಿಲ್ಲಾಡಳಿತ ಮಾಹಿತಿ ನೀಡಿದೆ. ಈಗಾಗಲೇ ಭಾರತೀಯ ಸೇನೆಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಕಳೆದ ವಾರ ಪೌರಿಯ ಸಿರೋಬಗಡ ಬಳಿ ಭಾರೀ ಮಳೆಯಿಂದಾಗಿ ಭಾರೀ ಭೂಕುಸಿತ ಉಂಟಾಗಿ ಸಂಚಾರ ತಡೆ ಉಂಟಾಗಿ ಬದರಿನಾಥ್ ಮತ್ತು ಕೇದಾರನಾಥ ಯಾತ್ರೆಗೆ ಅಡ್ಡಿಯಾಗಿತ್ತು. ಸಂಚಾರ ದಟ್ಟಣೆಯಿಂದ ಭಕ್ತರಿಗೆ ತೀವ್ರ ತೊಂದರೆಯಾಗಿತ್ತು.

Published On - 3:51 pm, Sat, 9 July 22