ತಿರುವನಂತಪುರಂ: ಕೋವಿಡ್-19 ಸಾಂಕ್ರಾಮಿಕದ ನಡುವೆಯೇ ಕೇರಳದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿಯೂ ಕೊವಿಡ್ ನಿಬಂಧನೆ ಪಾಲಿಸಬೇಕು ಎಂದು ಕೇರಳ ಸರ್ಕಾರ ಹೇಳಿದ್ದರೂ ಇದ್ಯಾವುದಕ್ಕೂ ರಾಜಕಾರಣಿಗಳು ಕಿವಿಗೊಡುತ್ತಿಲ್ಲ. ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಚುನಾವಣಾ ಪ್ರಚಾರಗಳ ಕಾವು ಏರತೊಡಗಿದೆ. ವಿಭಿನ್ನ ರೀತಿಯ ಘೋಷವಾಕ್ಯಗಳೊಂದಿಗೆ ಆಡಳಿತಾರೂಢ ಎಲ್ಡಿಎಫ್, ವಿಪಕ್ಷ ಯುಡಿಎಫ್ ಮತ್ತು ಎನ್ಡಿಎ ಮೈತ್ರಿಕೂಟಗಳು ಮತದಾರರನ್ನು ಸಮೀಪಿಸುತ್ತಿವೆ.
ಕೇರಳದ ಚುನಾವಣೆ ಎಂದಾಕ್ಷಣ ಸ್ಲೋಗನ್ ವಾರ್ ಇದ್ದೇ ಇರುತ್ತದೆ. ಘೋಷವಾಕ್ಯ ಬಿಡುಗಡೆಯೇ ಚುನಾವಣಾ ಪ್ರಚಾರದ ಮೊದಲ ಹೆಜ್ಜೆ. ಈ ಬಾರಿ ಎಡಪಕ್ಷ ( LDF) ‘ಉರಪ್ಪಾಣ್ ಎಲ್ಡಿಎಫ್ ‘ ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಕಣಕ್ಕಿಳಿದಿದೆ. ‘ಉರಪ್ಪಾಣ್ ಎಲ್ಡಿಎಫ್ ಎಂಬ ಪದದ ಅರ್ಥ ‘ಹೌದು ನಿಸ್ಸಂದೇಹವಾಗಿ ಎಲ್ಡಿಎಫ್ ‘ ಎಂಬುದಾಗಿದೆ. ‘ಉರಪ್ಪ್’ ಎಂಬ ಮಲಯಾಳಂ ಪದಕ್ಕೆ ಹಲವಾರು ಅರ್ಥಗಳಿವೆ. ಉರಪ್ಪ್ ಎಂದರೆ- ಸದೃಢ, ವಾಗ್ದಾನ, ಭರವಸೆ, ಖಾತ್ರಿ, ಶಕ್ತಿಶಾಲಿ. ಎರಡನೇ ಬಾರಿಯೂ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಸರ್ಕಾರ ಅಧಿಕಾರಕ್ಕೇರಲಿದೆ ಎಂಬ ವಿಶ್ವಾಸವನ್ನು ಈ ಪದ ಧ್ವನಿಸುತ್ತದೆ. ಅದೇ ವೇಳೆ 2016ರಲ್ಲಿ ನೀಡಿದ ಭರವಸೆಗಳನ್ನು ಪಿಣರಾಯಿ ಸರ್ಕಾರ ಪೂರೈಸಿದೆ ಎಂಬುದನ್ನೂ ಇದು ಹೇಳುತ್ತದೆ. ‘ಉರಪ್ಪಾಣ್ ಎಲ್ಡಿಎಫ್ ‘ ಎಂಬ ಘೋಷವಾಕ್ಯವು ಎಲ್ಡಿಎಫ್ ಎಲ್ಲ ಭರವಸೆಗಳನ್ನು ಪೂರೈಸಿದ್ದೇವೆ ಎಂಬುದನ್ನು ಹೇಳುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ‘ಎಲ್ಡಿಎಫ್ ವರುಂ ಎಲ್ಲ ಶೆರಿಯಾವುಂ’ ಎಂಬುದು ಎಲ್ಡಿಎಫ್ ಘೋಷಣೆಯಾಗಿತ್ತು. ಅಂದರೆ ಎಲ್ಡಿಎಫ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ , ಎಲ್ಲವೂ ಸರಿ ಹೋಗುತ್ತದೆ. ಈ ಘೋಷಣೆ ಜನಪ್ರಿಯವಾಗಿತ್ತು.
ಈ ಹಿಂದೆ ಕೇರಳದಲ್ಲಿ ಅಧಿಕಾರದಲ್ಲಿದ್ದ ಯುಡಿಎಫ್ ಸರ್ಕಾರದ ಭ್ರಷ್ಟಾಚಾರ, ಲಂಚ, ಕಾಂಗ್ರೆಸ್ ನಾಯಕರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳು, ಸೋಲಾರ್ ಹಗರಣ ಮೊದಲಾದ ಪ್ರಕರಣಗಳನ್ನೇ ಯುಡಿಎಫ್ ವಿರುದ್ಧದ ಅಸ್ತ್ರವಾಗಿ ಎಲ್ ಡಿಎಫ್ ಬಳಸಿಕೊಂಡಿತ್ತು.
ರಾಜ್ಯದ ಒಳಿತಿಗಾಗಿ ಯುಡಿಎಫ್
ಉರಪ್ಪಾಣ್ ಎಲ್ಡಿಎಫ್ ಎಂಬ ಘೋಷಣೆಯೊಂದಿಗೆ ಎಲ್ಡಿಎಫ್ ಚುನಾವಣೆ ಪ್ರಚಾರ ನಡೆಸುತ್ತಿರುವಾಗ ‘ನಾಡ್ ನನ್ನಾಕ್ಕಾನ್ ಯುಡಿಎಫ್’ ಎಂಬ ಘೋಷಣೆಯನ್ನು ಯುಡಿಎಫ್ ಬಿಡುಗಡೆ ಮಾಡಿದೆ. ‘ನಾಡ್ ನನ್ನಾಕ್ಕಾನ್ ಯುಡಿಎಫ್’ ಎಂದರೆ ರಾಜ್ಯದ ಒಳಿತಿಗಾಗಿ ಯುಡಿಎಫ್ ಎಂದು ಅರ್ಥ. ಚಿನ್ನ ಕಳ್ಳಸಾಗಾಣಿಕೆ ಪ್ರಕರಣ, ಲೈಫ್ ಮಿಷನ್ ಹಗರಣ ಮೊದಲಾದವುಗಳನ್ನು ಅಸ್ತ್ರವಾಗಿರಿಸಿಕೊಂಡು ಎಲ್ಡಿಎಫ್ ವಿರುದ್ಧ ಯುಡಿಎಫ್ ಪ್ರಚಾರ ನಡೆಸುತ್ತಿದೆ. ಎಲ್ಡಿಎಫ್ ಅಧಿಕಾರದಿಂದ ರೋಸಿ ಹೋದ ಜನರಿಗೆ ನಾವು ಅಧಿಕಾರಕ್ಕೇರುವ ಮೂಲಕ ಬದಲಾವಣೆ ತರುತ್ತೇವೆ ಎಂದು ಯುಡಿಎಫ್ ಹೇಳುತ್ತಿದೆ. 2016ರಲ್ಲಿ ‘ವಳರಣಂ ಈ ನಾಡ್, ತುಡರಣಂ ಈ ಭರಣಂ’ (ಈ ರಾಜ್ಯ ಪ್ರಗತಿ ಹೊಂದಬೇಕು, ಅಧಿಕಾರ ಮುಂದುವರಿಯಬೇಕು) ಎಂಬುದಾಗಿತ್ತು ಯುಡಿಎಫ್ ನ ಘೋಷವಾಕ್ಯ.
ಮೋದಿ ಜತೆ ಹೊಸ ಕೇರಳ
ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ( NDA) ಕಳೆದ ಭಾನುವಾರ ಸ್ಲೋಗನ್ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿರುವನಂತಪುರಂನಲ್ಲಿ ನಡೆದ ಕೇರಳ ಬಿಜೆಪಿಯ ವಿಜಯ್ ಯಾತ್ರಾ ಸಮಾರೋಪ ಸಮಾರಂಭದಲ್ಲಿ ಎನ್ಡಿಎ ಘೋಷವಾಕ್ಯ ಬಿಡುಗಡೆ ಮಾಡಿದ್ದಾರೆ. ಕೇರಳದ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಪ್ರಧಾನಿ ನರೇಂದ್ರ ಮೋದಿಯವರನ್ನೇ ಹೈಲೈಟ್ ಮಾಡಿದೆ. ‘ಪುದಿಯ ಕೇರಳಂ ಮೋದಿಕ್ಕೊಪ್ಪಂ’ (ಮೋದಿ ಜತೆ ನವ ಕೇರಳ) ಎಂಬ ಘೋಷವಾಕ್ಯವನ್ನು ಬಿಡುಗಡೆ ಮಾಡಿದ ಅಮಿತ್ ಶಾ, ಪಿಣರಾಯಿ ವಿಜಯನ್ ವಿರುದ್ಧ ಹರಿಹಾಯ್ದಿದ್ದರು. ಕಳೆದ ವರ್ಷ ‘ಎನ್ ಡಿಎ ವಝಿ ಮುಟ್ಟಿಯ ಕೇರಳಂ, ವಝಿ ಕಾಟ್ಟಾನ್ ಬಿಜೆಪಿ’ (ದಾರಿ ಕಾಣದ ಕೇರಳ, ದಾರಿ ತೋರಿಸಲು ಬಿಜೆಪಿ) ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಕಣಕ್ಕಿಳಿದಿತ್ತು.
ಇದನ್ನೂ ಓದಿ: Kerala Elections 2021: ಕೇರಳದ ಜನತೆ ಬದಲಾವಣೆ ಬಯಸಿದ್ದಾರೆ; ಅಮಿತ್ ಶಾ
Assembly Elections 2021: ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು? ಸಮೀಕ್ಷೆ ಏನು ಹೇಳುತ್ತಿದೆ?