ಕೇರಳ ರಾಜಕಾರಣ: ಎಲ್ಡಿಎಫ್, ಯುಡಿಎಫ್, ತೃತೀಯ ರಂಗ- ಶಕ್ತಿ ದೌರ್ಬಲ್ಯಗಳ ವಿಶ್ಲೇಷಣೆ
Kerala Assembly Elections 2021: ದೇಶದಲ್ಲಿ ಅತಿಹೆಚ್ಚು ಸಾಕ್ಷರರು ಮತ್ತು ಅತಿಹೆಚ್ಚು ರಾಜಕೀಯ ಜಾಗೃತಿಯಿರುವ ರಾಜ್ಯ ಎಂಬ ಶ್ರೇಯಸ್ಸು ಪಡೆದಿರುವ ಕೇರಳದ ಜಿದ್ದಾಜಿದ್ದಿ ರಾಜಕಾರಣದ ಇಣುಕು ನೋಟ ಇಲ್ಲಿದೆ.
‘ದೇವರ ಸ್ವಂತ ನಾಡು’ ಎಂಬ ಹೆಮ್ಮೆಯಿರುವ ಕೇರಳದಲ್ಲಿ ಚುನಾವಣೆ ಕಣ ರಂಗೇರುತ್ತಿದೆ. ಮೊದಲಿನಿಂದಲೂ ಇಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ಮೈತ್ರಿಕೂಟದ ನಡುವೆಯೇ ಚುನಾವಣೆ ರಾಜಕಾರಣದ ಆಟ. ಬಿಜೆಪಿ ಅಂಥ ಪ್ರಬಲ ಜನಬೆಂಬಲ ಹೊಂದಿಲ್ಲ. ಆಡಳಿತಾರೂಢ ಎಲ್ಡಿಎಫ್ (Left Democratic Front – LDF) ಅಧಿಕಾರ ಉಳಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದರೆ, ಈ ಬಾರಿ ಅಧಿಕಾರ ಪಡೆದುಕೊಂಡೇ ತೀರುತ್ತೇವೆ ಎಂಬ ಹೋರಾಟದ ಮನೋಭಾವದಲ್ಲಿ ಯುಡಿಎಫ್ (United Democratic Front – UDF) ಇದೆ. ಪ್ರಬಲ ಕಾರ್ಯಕರ್ತರ ಪಡೆಯೊಂದಿಗೆ ಶಿಸ್ತಿನ ಸಿದ್ಧತೆ ನಡೆಸಿರುವ ಬಿಜೆಪಿ ನೇತೃತ್ವದ ತೃತೀಯ ರಂಗವೂ ಈ ಬಾರಿ ಅಸ್ತಿತ್ವ ಸಾಬೀತುಪಡಿಸುವ ಉತ್ಸಾಹ ತೋರಿಸುತ್ತಿದೆ. ದೇಶದಲ್ಲಿ ಅತಿಹೆಚ್ಚು ಸಾಕ್ಷರರು ಮತ್ತು ಅತಿಹೆಚ್ಚು ರಾಜಕೀಯ ಜಾಗೃತಿಯಿರುವ ರಾಜ್ಯ ಎಂಬ ಶ್ರೇಯಸ್ಸು ಪಡೆದಿರುವ ಕೇರಳದ ಜಿದ್ದಾಜಿದ್ದಿ ರಾಜಕಾರಣದ ಇಣುಕು ನೋಟ ಇಲ್ಲಿದೆ.
ಕೇರಳದಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಕೇರಳ ವಿಧಾನಸಭೆಯ ಒಟ್ಟು ಸದಸ್ಯ ಬಲ 140. ಅಧಿಕಾರ ದಕ್ಕಿಸಿಕೊಳ್ಳಲು ಬೇಕಾದ ಸರಳ ಬಹುಮತ ಸಾಬೀತುಪಡಿಸಲು ಮ್ಯಾಜಿಕ್ ನಂಬರ್ 71. ಸದಾ ಎಡಪಕ್ಷಗಳ ಎಲ್ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ಪ್ರತಿ ಬಾರಿ ಕೇರಳ ಸರ್ಕಾರದ ಅಧಿಕಾರ ಹೊಯ್ದಾಡುತ್ತಿರುತ್ತದೆ. ಈ ಸಲ ಏನಾಗಬಹುದು? ಎಲ್ಡಿಎಫ್ ಅಧಿಕಾರ ಉಳಿಸಿಕೊಳ್ಳಬಹುದೇ? ಯುಡಿಎಫ್ ಅಧಿಕಾರ ಹಿಡಿಯಬಹುದೇ? ಬಿಜೆಪಿ ತನ್ನ ಸ್ಥಿತಿ ಸುಧಾರಿಸಿಕೊಳ್ಳಬಹುದೇ? ಕೇರಳದ ಅಧಿಕಾರ ಹಿಡಿಯಲು ತುದಿಗಾಲಲ್ಲಿ ನಿಂತಿರುವ ವಿವಿಧ ಮೈತ್ರಿಕೂಟಗಳು ಮತ್ತು ಪಕ್ಷಗಳ ಶಕ್ತಿ, ದೌರ್ಬಲ್ಯ, ಅವಕಾಶಗಳು ಮತ್ತು ಆತಂಕಗಳ SWOT (Strengths Weakness Opportunities Threats) ವಿಶ್ಲೇಷಣೆಯ ಪ್ರಯತ್ನ ಇದು.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ
ಶಕ್ತಿ (Strengths) ಮೂವರು ನೇತಾರರು ಒಟ್ಟಾದರು: ಉಮನ್ ಚಾಂಡಿ, ರಮೇಶ್ ಚೆನ್ನಿತ್ತಲ ಮತ್ತು ಮುಲ್ಲಪ್ಪಲ್ಲಿ ರಾಮಚಂದ್ರನ್ ಭಿನ್ನಮತ ಬದಿಗಿಟ್ಟು ಈ ಬಾರಿ ಒಂದಾಗಿದ್ದಾರೆ. ಪಿಣರಾಯಿ ವಿಜಯನ್ ನೇತೃತ್ವ ಎಲ್ಡಿಎಫ್ ಸರ್ಕಾರವನ್ನು ಪದಚ್ಯುತಗೊಳಿಸುವ ವಿಶ್ವಾಸದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.
ರಾಹುಲ್ ಪ್ರಭಾವ: ಕೇರಳ ರಾಜ್ಯದ ವಯನಾಡ್ನ ಸಂಸದರೂ ಆಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದಲ್ಲಿ ಚುರುಕಾಗಿ ಪ್ರಚಾರ ನಡೆಸಿದರೆ ಅದು ಸಹಜವಾಗಿಯೇ ಯುಡಿಎಫ್ಗೆ ಅನುಕೂಲ ಮಾಡಿಕೊಡುತ್ತದೆ. ಮತಗಳನ್ನು ತನ್ನ ಪರವಾಗಿ ಸೆಳೆದುಕೊಳ್ಳಲು ಮೈತ್ರಿಕೂಟಕ್ಕೆ ನೆರವಾಗುತ್ತದೆ.
ಮರಳಿದ ಕುಞಾಲಿ ಕುಟ್ಟಿ: ಭಾರತೀಯ ಮುಸ್ಲಿಂ ಲೀಂಗ್ ಒಕ್ಕೂಟದ (Inian Union Muslim League – IUML) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಕುಞಾಲಿಕುಟ್ಟಿ (P K Kunhalikutty) ರಾಜ್ಯ ರಾಜಕಾರಣಕ್ಕೆ ಮತ್ತೆ ಪ್ರವೇಶಿಸಿರುವುದು ಯುಡಿಎಫ್ಗೆ ಹೊಸ ಬಲ ತುಂಬಿದೆ.
ಪ್ರಚಾರ ಸಮಿತಿಗೆ ಚಾಂಡಿ ಬಲ: ಜನಪ್ರಿಯ ನಾಯಕ ಉಮನ್ ಚಾಂಡಿ ಪ್ರಚಾರ ಸಮಿತಿಯ ನೇತೃತ್ವ ವಹಿಸಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರಿಗೆ ಹೊಸ ಬಲ ನೀಡಿದೆ.
ದೌರ್ಬಲ್ಯಗಳು (Weakness) ಬಣ ರಾಜಕೀಯ: ಕಾಂಗ್ರೆಸ್ನಲ್ಲಿ ಪ್ರಬಲವಾಗಿರುವ ಒಳರಾಜಕೀಯ, ಬಣಗಳ ಭಿನ್ನಮತ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯ ಮೇಲೆಯೂ ನೆರಳು ಚಾಚಬಹುದು. ಎ ಮತ್ತು ಐ ಬಣಗಳ ಒಳರಾಜಕೀಯ ಕೇರಳದಲ್ಲಿ ಕಾಂಗ್ರೆಸ್ಗೆ ತಲೆಬೇನೆ ತರಬಹುದು.
ಜೋಸ್ ಮಾಣಿ ಪಕ್ಷಾಂತರ: ಮಧ್ಯ ಕೇರಳದ ಪ್ರಭಾವಿ ನಾಯಕ, ಕೇರಳ ಕಾಂಗ್ರೆಸ್ ಪಕ್ಷದ ಜೋಸ್ ಮಾಣಿ ಎಲ್ಡಿಎಫ್ ಪರ ವಾಲಿದ್ದಾರೆ. ಯುಡಿಎಫ್ನ ಸಾಂಪ್ರದಾಯಿಕ ಮತಬ್ಯಾಂಕ್ ಈ ಬಾರಿ ಎಲ್ಡಿಎಫ್ ಒಲಿಯುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕ್ರಿಶ್ಚಿಯನ್-ಮುಸ್ಲಿಂ ಸಮುದಾಯಗಳ ಅಪನಂಬಿಕೆ: ಯುಡಿಎಫ್ನ ಪ್ರಮುಖ ಮತಬ್ಯಾಂಕ್ ಎನಿಸಿರುವ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಅಪನಂಬಿಕೆ ಹೊಗೆಯಾಡುತ್ತಿದೆ. ಮುಂದುವರಿದ ಜಾತಿಗಳಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರ ಮೀಸಲಾತಿ ನೀಡುವುದಕ್ಕೆ ಐಯುಎಂಎಲ್ ವಿರೋಧ ವ್ಯಕ್ತಪಡಿಸಿತ್ತು. ಈ ಬೆಳವಣಿಗೆಯ ನಂತರ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಅಪನಂಬಿಕೆ ಹೆಚ್ಚಾಗಿದೆ.
ಮುಸ್ಲಿಂ ಪ್ರಾಬಲ್ಯದ ಬಗ್ಗೆ ಚರ್ಚ್ಗೆ ಭೀತಿ: ಈ ಬಾರಿ ಯುಡಿಎಫ್ ಅಧಿಕಾರಕ್ಕೆ ಬಂದರೆ ಐಯುಎಂಎಲ್ ಮೂಲಕ ಮುಸ್ಲಿಮ್ ನಾಯಕರು ಆಯಕಟ್ಟಿನ ಸ್ಥಾನಕ್ಕೆ ಬರಬಹುದು. ಶಿಕ್ಷಣ ಕ್ಷೇತ್ರದಲ್ಲಿ ಹಲವು ಹಿತಾಸಕ್ತಿಗಳನ್ನು ಹೊಂದಿರುವ ಕ್ರಿಶ್ಚಿಯನ್ನರ ಪ್ರಾಬಲ್ಯಕ್ಕೆ ಇದರಿಂದ ಧಕ್ಕೆಯಾಗಬಹುದು ಎಂದು ಕ್ರಿಶ್ಚಿಯನ್ನರು ಭೀತಿ ವ್ಯಕ್ತಪಡಿಸಿದ್ದಾರೆ. ಟರ್ಕಿ ದೇಶದ ಇಸ್ತಾಂಬುಲ್ ನಗರದಲ್ಲಿರುವ ಹಾಜಿಯಾ ಸೋಫಿಯಾ ಚರ್ಚ್ ಅನ್ನು ಮತ್ತೆ ಮಸೀದಿಯಾಗಿಸಬೇಕೆಂಬ ಮುಸ್ಲಿಂ ಲೀಗ್ ನಾಯಕ ಪನಕ್ಕಾಡ್ ಸಾದಿಕ್ ಆಲಿ ಸಾಹಿಬ್ ಥಂಗಲ್ ಅವರ ಹೇಳಿಕೆಯು ಕ್ರಿಶ್ಚಿಯನ್ನರ ಅಸಮಾಧಾನ ಉಂಟುಮಾಡಿದೆ.
ಅವಕಾಶಗಳು (Opportunities) ಎಲ್ಡಿಎಫ್ನಲ್ಲಿ ಒಡಕು: ಎಲ್ಡಿಎಫ್ ಮೈತ್ರಿಕೂಟದದಲ್ಲಿದ್ದ ಎನ್ಸಿಪಿಯ ಮಣಿ ಸಿ.ಕಪ್ಪನ್, ಎ.ಎನ್.ರಂಜನ್ ಬಾಬು ನೇತೃತ್ವದ ಜೆಎಸ್ಎಸ್, ಜಾರ್ಜ್ ಥಾಮಸ್ ನಾಯಕತ್ವದ ಜೆಡಿಎಸ್ ಇದೀಗ ಯುಡಿಎಫ್ ಜೊತೆಗಿವೆ. ಈ ಬೆಳವಣಿಗೆಯು ಮತಗಳಿಕೆಯ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗಿದೆ.
ಎಲ್ಡಿಎಫ್ ದೌರ್ಬಲ್ಯಗಳು: ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವವರನ್ನು ಬದಿಗಿಟ್ಟು ಹಿಂಬಾಗಿಲ ಮೂಲಕ ಒಂದಿಷ್ಟು ಜನರನ್ನು ಪ್ರಮುಖ ಹುದ್ದೆಗಳಿಗೆ ನೇಮಿಸಿರುವುದು ಎಲ್ಡಿಎಫ್ ಸರ್ಕಾರದ ಪ್ರಾಮಾಣಿಕತೆಯ ಬಗ್ಗೆ ಶಂಕೆಯುಂಟು ಮಾಡಿದೆ. ರಾಜಕಾರಿಣಿಗಳ ಸಂಬಂಧಿಗಳಿಗೆ ಹಿಂಬಾಗಿಲ ಮೂಲಕ ಸರ್ಕಾರಿ ಉದ್ಯೋಗ ನೀಡಲಾಗಿದೆ ಎಂದು ಉದ್ಯೋಗಾಕಾಂಕ್ಷಿಗಳು ಆರೋಪಿಸಿದ್ದರು. ಈ ಆರೋಪಕ್ಕೆ ಸರ್ಕಾರ ಸರಿಯಾಗಿ ಪ್ರತಿಕ್ರಿಯಿಸಿರಲಿಲ್ಲ.
ಅಮೆರಿಕ ಕಂಪನಿಯೊಂದಿಗೆ ಮೀನುಗಾರಿಕೆ ಒಪ್ಪಂದ: ಅಮೆರಿಕ ಮೂಲದ ಇಎಂಸಿಸಿ ಕಂಪನಿಯೊಂದಿಗೆ ಎಲ್ಡಿಎಫ್ ಸರ್ಕಾರ ಆಳಸಮುದ್ರ ಮೀನುಗಾರಿಕೆಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದಕ್ಕೆ ಸ್ಥಳೀಯ ಮೀನುವಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಯುಡಿಎಫ್ಗೆ ಅನುಕೂಲ ಮಾಡಿಕೊಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಚಿನ್ನದ ಕಳ್ಳಸಾಗಣೆ ಮತ್ತು ಲೈಫ್ ಮಿಷನ್ ಹಗರಣ: ಚಿನ್ನದ ಕಳ್ಳಸಾಗಣೆ ಮತ್ತು ಲೈಫ್ ಮಿಷನ್ ಹಗರಣಗಳಿಂದಾಗಿ ಎಲ್ಡಿಎಫ್ನ ವರ್ಚಸ್ಸು ಹಾಳಾಗಿದೆ. ಹಗರಣಮುಕ್ತ ಸರ್ಕಾರ ಇದಲ್ಲ ಎಂದು ಚುನಾವಣೆ ವೇಳೆ ಯುಡಿಎಫ್ ಪ್ರಚಾರ ಮಾಡುವ ಸಾಧ್ಯತೆಯಿದೆ.
ಆತಂಕಗಳು (Threats) ಬಂಡಾಯ ಅಭ್ಯರ್ಥಿಗಳು: ಯುಡಿಎಫ್ ಮೈತ್ರಿಕೂಟಕ್ಕೆ, ಅದರಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಇರುವ ಅತಿದೊಡ್ಡ ಆತಂಕ ಬಂಡಾಯ ಅಭ್ಯರ್ಥಿಗಳದು. ಅಭ್ಯರ್ಥಿಗಳ ಆಯ್ಕೆಯೇ ಕಾಂಗ್ರೆಸ್ಗೆ ದೊಡ್ಡ ಸವಾಲಾಗುವ ಸಾಧ್ಯತೆಯಿದೆ. ಬಿ ಫಾರಂ ಸಿಗದವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಎಲ್ಡಿಎಫ್ ಕೊಟ್ಟ ಉಚಿತ ಆಹಾರ ಕಿಟ್ಗಳು: ಪಿಣರಾಯಿ ವಿಜಯನ್ ಸರ್ಕಾರವು 88 ಲಕ್ಷ ಕುಟುಂಬಗಳಿಗೆ ಉಚಿತ ಆಹಾರ ಕಿಟ್ಗಳನ್ನು ವಿತರಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್ಡಿಎಫ್ ಮುನ್ನಡೆ ದಾಖಲಿಸಲು ಇದು ಮುಖ್ಯಪಾತ್ರ ವಹಿಸಿತು ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಯುಡಿಎಫ್ ನ್ಯಾಯ್ (NYAY) ಯೋಜನೆ ಜಾರಿಗೆ ತರುವ ಬಗ್ಗೆ ಮಾತನಾಡಿದೆ. ಈ ಯೋಜನೆಯಡಿ ಬಡ ಕುಟುಂಬಗಳು ತಿಂಗಳಿಗೆ ₹ 6000 ನೆರವು ಪಡೆಯುತ್ತಾರೆ.
ಪಲರಿವಟ್ಟಮ್ ಮೇಲ್ಸೇತುವೆ: ಕಲಮಸ್ಸೆರಿ ಕ್ಷೇತ್ರದಲ್ಲಿ ಯುಡಿಎಫ್ ವಿ.ಕೆ.ಇಬ್ರಾಹಿಂ ಕುಂಜು ಅವರಿಗೆ ಮತ್ತೆ ಟಿಕೆಟ್ ಕೊಟ್ಟರೆ ಎಲ್ಡಿಎಫ್ ಕಲಮಸ್ಸೆರಿ ಮೇಲ್ಸೇತುವೆ ಹಗರಣವನ್ನು ಪ್ರಸ್ತಾಪಿಸಿ ರಾಜ್ಯವ್ಯಾಪಿ ಚುನಾವಣೆ ವಿಷಯ ಮಾಡಬಹುದು.
ದೂರ ಸರಿಯದ ಹಿರಿಯರು: ಕಾಂಗ್ರೆಸ್ನ ಹಿರಿಯ ನಾಯಕರಾದ ಕೆ.ಸಿ.ಜೋಸೆಫ್ (74), ಪಿ.ಜೆ.ಕುರಿಯನ್ (79) ಮತ್ತು ಪಿ.ಸಿ.ಚಾಕೊ (74) ಈ ಬಾರಿಯೂ ಸ್ಪರ್ಧಿಸುವ ಇಚ್ಛೆ ತೋಡಿಕೊಂಡಿದ್ದಾರೆ. ಹೊಸ ಮುಖಗಳಿಗೆ ಅವಕಾಶ ನೀಡಲು ಇದು ತೊಡಕುಂಟು ಮಾಡುತ್ತದೆ.
ಎಡಪಕ್ಷಗಳ ನೇತೃತ್ವದ ಎಲ್ಡಿಎಫ್ ಸಾಮರ್ಥ್ಯಗಳು ಪಿಣರಾಯಿ ವಿಜಯನ್: ಪಕ್ಷದ ಮುಖವಾಗಿ ಒಬ್ಬ ವ್ಯಕ್ತಿಯಿರುವುದೇ ಎಡಮೈತ್ರಿಕೂಟದ ದೊಡ್ಡ ಶಕ್ತಿ. ಹೇಳಿಕೊಳ್ಳುವಂಥ ಬಣ ರಾಜಕೀಯ, ಭಿನ್ನಮತಗಳು ಇಲ್ಲ.
ಅಭಿವೃದ್ಧಿ ಕಾರ್ಯಗಳು: ಉಚಿತ ಆಹಾರ ಕಿಟ್ಗಳ ವಿತರಣೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಪಿಣರಾಯಿ ಜಾರಿಗೆ ತಂದಿದರು. ಲಾಕ್ಡೌನ್ ಅವಧಿಯಲ್ಲಿ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಸಲ್ಲಿಸಿದ ರೀತಿ ಜನಪ್ರಿಯವಾಯಿತು.
ಹೊಸ ಮಿತ್ರರು: ಈ ಹಿಂದೆ ಯುಡಿಎಫ್ನೊಂದಿಗೆ ಇದ್ದ ಜೋಸ್ ಕೆ.ಮಾಣಿ ಅವರ ಕೇರಳ ಕಾಂಗ್ರೆಸ್ (ಎಂ) ಇದೀಗ ಎಲ್ಡಿಎಫ್ ಮೈತ್ರಿಕೂಟಕ್ಕೆ ಬಂದಿದೆ. ಎಲ್ಜೆಡಿ ಸಹ ಎಲ್ಡಿಎಫ್ನೊಂದಿಗೆ ಗುರುತಿಸಿಕೊಂಡಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ಮೇಲುಗೈ: ಈಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಎಡಪಕ್ಷಗಳ ಪರ ಅಲೆ ನಿಚ್ಚಳವಾಗಿ ಕಾಣಿಸಿತ್ತು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿಯೂ ಇದೇ ಓಟ ಮುಂದುವರಿಯಬಹುದು ಎನ್ನಲಾಗಿದೆ.
ದೌರ್ಬಲ್ಯಗಳು ಸಮರ್ಥನೆಯ ಕೊರತೆ: ಈಚೆಗೆ ಕೇಳಿಬಂದ ಎಂದು ವಿವಾದಗಳ ಬಗ್ಗೆ ಎಲ್ಡಿಎಫ್ ಪ್ರಬಲವಾಗಿ ಸಮರ್ಥಿಸಿಕೊಳ್ಳಲಿಲ್ಲ.
ದೂರ ಸರಿದ ವಿ.ಎಸ್.ಅಚ್ಯುತಾನಂದನ್: ಕೇರಳದ ಜನಪ್ರಿಯ ನಾಯಕ ಮತ್ತು ದೊಡ್ಡಮಟ್ಟದಲ್ಲಿ ಜನಸಮೂಹವನ್ನು ಆಕರ್ಷಿಸುತ್ತಿದ್ದ ವಿ.ಎಸ್.ಅಚ್ಯುತಾನಂದನ್ ಈ ಬಾರಿಯ ವಿಧಾನಸಭಾ ಚುನಾವಣೆಯಿಂದ ದೂರ ಉಳಿಯಲಿದ್ದಾರೆ. ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿಯೂ ಅವರು ಎಲ್ಡಿಎಫ್ ಪರ ಹೆಚ್ಚು ಮತಗಳನ್ನು ಆಕರ್ಷಿಸಿದ್ದರು.
ಅವಕಾಶಗಳು ಪೂರಕ ಭಾವನೆ: ಈ ಬಾರಿಯೂ ಕೇರಳದಲ್ಲಿ ಎಲ್ಡಿಎಫ್ ಅಧಿಕಾರಕ್ಕೆ ಮರಳಬಹುದು ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಮತಗಟ್ಟೆ ಸಮೀಕ್ಷೆಗಳು ಸಹ ಇದನ್ನೇ ಹೇಳಿವೆ.
ಆರಂಭಿಕ ಮಾತುಕತೆ: ಸೀಟು ಹಂಚಿಕೆ ಬಗ್ಗೆ ಎಲ್ಡಿಎಫ್ನಲ್ಲಿ ಬಹಳ ಮುಂಚಿತವಾಗಿಯೇ ಮಾತುಕತೆ ಶುರುವಾಗಿದೆ. ಹೆಚ್ಚು ಗೊಂದಲ, ವಿವಾದಗಳು ಇಲ್ಲದೆ ಸೀಟು ಹಂಚಿಕೆ ಪ್ರಕ್ರಿಯೆ ಮುಕ್ತಾಯವಾಗಿದೆ. ಯುಡಿಎಫ್ಗೆ ಹೋಲಿಸಿದರೆ ಯುವ ಮತ್ತು ಉತ್ತಮ ಅಭ್ಯರ್ಥಿಗಳು ಎಲ್ಡಿಎಫ್ಗೆ ಸಿಕ್ಕಿದ್ದಾರೆ.
ಜೋಸ್ ಕೆ.ಮಾಣಿ: ಜೋಸ್ ಕೆ.ಮಣಿ ಪ್ರವೇಶದಿಂದ ಮಧ್ಯ ಟ್ರಾವಂಕೂರ್ನ ಕ್ರಿಶ್ಚಿಯನ್ ಮತಬ್ಯಾಂಕ್ ಎಲ್ಡಿಎಫ್ಗೆ ಒಲಿಯುವ ಸಾಧ್ಯತೆಗಳಿವೆ.
ಪ್ರಕರಣಗಳು ರದ್ದು: ಶಬರಿಮಲೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಳಲ್ಲಿ ಭಾಗಿಯಾದವರ ವಿರುದ್ಧ ದಾಖಲಾಗಿದ್ದ ಹಲವು ಪ್ರಕರಣಗಳನ್ನು ಎಲ್ಡಿಎಫ್ ಸರ್ಕಾರ ಹಿಂಪಡೆದಿದೆ. ಈ ಬೆಳವಣಿಗೆಯು ಎಲ್ಡಿಎಫ್ಗೆ ಚುನಾವಣಾ ಲಾಭ ತಂದುಕೊಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಆತಂಕಗಳು ವಿವಾದಗಳು: ಹಂಗಾಮಿ ನೌಕರರ ಕಾಯಮಾತಿ ಮತ್ತು ಆಳ ಸಮುದ್ರ ಮೀನುಗಾರಿಕೆ ಒಪ್ಪಂದದ ಬಗ್ಗೆ ವಿವಾದಗಳು ಹುಟ್ಟಿಕೊಂಡಿದ್ದವು. ಈ ವಿವಾದಗಳನ್ನು ನಿರ್ವಹಿಸುವಲ್ಲಿ ಸರ್ಕಾರ ಎಡವಿತು ಎಂದು ಹೇಳಲಾಗುತ್ತಿದೆ.
ಸಮುದಾಯದ ಸಮಸ್ಯೆಗಳು: ಜಾಕೊಬಿಟ್ ಸಿರಿಯನ್ ಚರ್ಚ್ ವಿಚಾರವನ್ನು ಎಲ್ಡಿಎಫ್ ನಿರ್ವಹಿಸಿದ ರೀತಿಯ ಬಗ್ಗೆ ನಾಯರ್ ಸೇವಾ ಸಂಘದಿಂದ (ಎನ್ಎಸ್ಎಸ್) ಪ್ರಬಲ ಆಕ್ಷೇಪ ವ್ಯಕ್ತವಾಗಿದೆ. ಸಮಾಜದ ಮುಖ್ಯಧಾರೆಯಲ್ಲಿಯೂ ಅಸಮಾಧಾನ ಕಾಣಿಸಿಕೊಂಡಿದೆ.
ಮಣಿ ಸಿ.ಕಪ್ಪನ್: ಮಧ್ಯ ಟ್ರಾವಂಕೂರ್ನಲ್ಲಿ ಪ್ರಬಲರಾಗಿದ್ದ ಮಣಿ ಸಿ.ಕಪ್ಪನ್ ಇದೀಗ ಯುಡಿಎಫ್ ಪರ ನಿಂತಿರುವುದು ಎಲ್ಡಿಎಫ್ಗೆ ಹಿನ್ನಡೆಯಾಗಬಹುದು ಎಂದು ಹೇಳಲಾಗುತ್ತಿದೆ.
ಬಿಜೆಪಿ ನೇತೃತ್ವದ ತೃತೀಯ ರಂಗ
ಶಕ್ತಿ ಬದ್ಧ ಕಾರ್ಯಕರ್ತರು: ತಳಮಟ್ಟದಲ್ಲಿ ಪ್ರಬಲವಾಗಿರುವ ಬದ್ಧ ಕಾರ್ಯಕರ್ತರ ಪಡೆ ತೃತೀಯ ರಂಗದ ದೊಡ್ಡ ಶಕ್ತಿ. ಆರ್ಎಸ್ಎಸ್ ಕಾರ್ಯಕರ್ತರೂ ಚುನಾವಣಾ ಕಾರ್ಯಗಳಲ್ಲಿ ಸಕ್ರಿಯರಾಗಿ ಕೈಜೋಡಿಸುವ ಮೂಲಕ ಎಲ್ಡಿಎಫ್-ಯುಡಿಎಫ್ಗೆ ಸ್ಪರ್ಧೆ ಒಡ್ಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ನಿಧಿಗೆ ಕೊರತೆಯಿಲ್ಲ: ಕೇಂದ್ರ ಸರ್ಕಾರವು ತೃತೀಯ ರಂಗದ ಬೆನ್ನಿಗೆ ದೃಢವಾಗಿ ನಿಂತಿದೆ. ಹೀಗಾಗಿ ಪ್ರಚಾರಕ್ಕೆ ದೊಡ್ಡಮಟ್ಟದಲ್ಲಿ ಹಣ ಹರಿದುಬರುವ ನಿರೀಕ್ಷೆಯಿದೆ.
ಯೋಜಿತ ಕಾರ್ಯಪದ್ಧತಿ: ಪ್ರಧಾನಿ ಹಂತದಲ್ಲಿ ಮಾತುಕತೆಗಳು ನಡೆಸುವ ಮೂಲಕ ವಿವಿಧ ಚರ್ಚ್ ಗುಂಪುಗಳ ಬೆಂಬಲ ಪಡೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ.
ಹೊಸ ಮುಖಗಳು: ಜೇಕಬ್ ಥಾಮಸ್, ಈ.ಶ್ರೀಧರನ್ ಮತ್ತು ಇತರ ಪ್ರಮುಖ ನಾಯಕರು ಈ ಬಾರಿ ಬಿಜೆಪಿ ನೇತೃತ್ವದ ತೃತೀಯ ರಂಗಕ್ಕೆ ಬಲ ತುಂಬಲಿದ್ದಾರೆ.
ದೌರ್ಬಲ್ಯಗಳು ಆಂತರಿಕ ತಿಕ್ಕಾಟ: ಕೇರಳದ ಬಿಜೆಪಿ ರಾಜ್ಯ ಘಟಕದಲ್ಲಿ ಭಿನ್ನಮತ ಆಗಾಗ ಹೊಗೆಯಾಡುತ್ತಿರುತ್ತದೆ. ಕೇಂದ್ರದ ನಾಯಕರು ಮಧ್ಯಪ್ರವೇಶಿಸುವ ಅನಿವಾರ್ಯತೆ ನಿರ್ಮಾಣವಾಗುತ್ತದೆ.
ಶೋಭಾ ವಿಚಾರ: ಮುಂಚೂಣಿ ನಾಯಕರು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ಶೋಭಾ ಸುರೇಂದ್ರನ್ ಮತ್ತು ಅವರ ಬೆಂಬಲಿಗರು ಮುನಿಸಿಕೊಂಡಿದ್ದಾರೆ.
ಮುಖ್ಯಸ್ಥರ ಸಮಸ್ಯೆ: ಕೆ.ಸುರೇಂದ್ರನ್ ಅವರ ಕಾರ್ಯವೈಖರಿಗೆ ಪಕ್ಷದ ಒಳಗೇ ವಿರೋಧಗಳು ವ್ಯಕ್ತವಾಗುತ್ತಿವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮತ್ತು ಜೊತೆಗೆ ಕೊಂಡೊಯ್ಯಲು ಅವರಿಗೆ ಸಾಧ್ಯವಾಗುತ್ತಿಲ್ಲ.
ಸೀಮಿತ ಅವಕಾಶ: ರಾಜ್ಯದಲ್ಲಿ ಬಿಜೆಪಿಗೆ ಗೆಲುವಿನ ಭರವಸೆ ಇರುವುದು ಕೆಲವೇ ಕ್ಷೇತ್ರಗಳಲ್ಲಿ. ಹಲವು ಕ್ಷೇತ್ರಗಳಲ್ಲಿ ತೃತೀಯ ರಂಗದ ಸ್ಪರ್ಧೆ ಕೇವಲ ಸಾಂಕೇತಿಕವಾಗಬಹುದು.
ಅವಕಾಶಗಳು ಜನಬೆಂಬಲ: ದೊಡ್ಡಪ್ರಮಾಣದಲ್ಲಿ ಎಲ್ಡಿಎಫ್ ವಿರೋಧಿ ಮತಗಳನ್ನು ಸೆಳೆಯಲು ಬಿಜೆಪಿಗೆ ಅವಕಾಶವಿದೆ.
ಲವ್ ಜಿಹಾದ್: ಲವ್ ಜಿಹಾದ್ಗೆ ಕೇರಳದ ಕ್ರಿಶ್ಚಿಯನ್ ಸಮುದಾಯವೂ ಆತಂಕ ವ್ಯಕ್ತಪಡಿಸಿದೆ. ಬಿಜೆಪಿ ಇದನ್ನು ತನಗೆ ಪೂರಕವಾಗಿ ಬಳಸಿಕೊಳ್ಳಬಹುದು.
ಗೆಲುವಿನ ನಿರ್ಧಾರಕ: ಸ್ವತಃ ಗೆಲ್ಲುವ ಸಾಮರ್ಥ್ಯವಿಲ್ಲದಿದ್ದರೂ ಮತ್ತೊಬ್ಬ ಅಭ್ಯರ್ಥಿಯನ್ನು ಸೋಲಿಸುವ ಸಾಮರ್ಥ್ಯವಂತೂ ಸುಮಾರು 15 ಕ್ಷೇತ್ರಗಳಲ್ಲಿ ತೃತೀಯ ರಂಗಕ್ಕೆ ಇದೆ. ಎಲ್ಡಿಎಫ್ ಅಥವಾ ಯುಡಿಎಫ್ ಅಭ್ಯರ್ಥಿಗಳ ಸೋಲು-ಗೆಲುವಿನಲ್ಲಿ ತೃತೀಯ ರಂಗ ಪ್ರಮುಖ ಪಾತ್ರ ನಿರ್ವಹಿಸಲಿದೆ.
ಮತಗಳಿಕೆ: ಈ ಬಾರಿ ತೃತೀಯ ರಂಗದ ಮತಗಳಿಕೆ ಪ್ರಮಾಣ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಬಹುದೆಂಬ ನಿರೀಕ್ಷೆಗಳಿವೆ.
ಆತಂಕಗಳು ಇಂಧನ ದರ ಏರಿಕೆ: ಅಡುಗೆ ಅನಿಲ ಮತ್ತು ಇಂಧನದ ಮೌಲ್ಯ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.
ಶಬರಿಮಲೆ: ಶಬರಿಮಲೆ ವಿವಾದವನ್ನು ಯುಡಿಎಫ್ ರಾಜಕೀಯಕ್ಕೆ ಬಳಸಿಕೊಳ್ಳುವಲ್ಲಿ ಮೇಲುಗೈ ಸಾಧಿಸಿದೆ. 2019ರಲ್ಲಿಯೂ ಯುಡಿಎಫ್ ಈ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿತ್ತು.
ಅಲ್ಪಸಂಖ್ಯಾತರ ಮತಗಳು: ಕೇರಳದ ಹಲವು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿವೆ. ಬಿಜೆಪಿ ನೇತೃತ್ವದ ತೃತೀಯ ರಂಗಕ್ಕೆ ಈ ಮತಗಳು ಒಲಿಯುವ ಸಾಧ್ಯತೆ ಕಡಿಮೆ.
ಹಿಂದುತ್ವ: ಕೇರಳ ಉಳಿದ ರಾಜ್ಯಗಳಂತೆ ಅಲ್ಲ. ಹಿಂದುತ್ವದ ವಿಚಾರಗಳು ಹೆಚ್ಚುಹೆಚ್ಚು ಪ್ರಸ್ತಾಪವಾದಂತೆ ಜಾತ್ಯತೀತ ಮತಗಳು ಅಲ್ಲಿ ದೂರ ಸರಿಯುತ್ತವೆ.
ಇದನ್ನೂ ಓದಿ: ಕೇರಳವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ, ಮೇ 2ಕ್ಕೆ ಮತ ಎಣಿಕೆ
ಇದನ್ನೂ ಓದಿ: ಕೇರಳದಲ್ಲಿ LDF ವಿಜಯೋತ್ಸವ; ಇದು ಜನರ ಗೆಲುವು ಎಂದ ಪಿಣರಾಯಿ ವಿಜಯನ್
Published On - 9:34 pm, Mon, 1 March 21