ತಿರುವನಂತಪುರ: ಮುಲ್ಲಪೆರಿಯಾರ್ ಡ್ಯಾಮ್ನಿಂದ ಹಂತಹಂತವಾಗಿ ನೀರು ಬಿಡುಗಡೆ ಮಾಡುವಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ಗೆ ಪತ್ರ ಬರೆದಿದ್ದಾರೆ. ಡ್ಯಾಮ್ನ ನೀರಿನ ಮಟ್ಟ ಏರಿಕೆ ಆಗುತ್ತಿದೆ. ಈ ಬಗ್ಗೆ ತಮಿಳುನಾಡಿನಿಂದ ಮೊದಲ ಎಚ್ಚರಿಕೆ ಅಕ್ಟೋಬರ್ 23 ರಂದು ಹೇಳಲಾಗಿತ್ತು.
ಇಂದು (ಅಕ್ಟೋಬರ್ 24) ಪಿಣರಾಯಿ ವಿಜಯನ್ ತಮ್ಮ ಪತ್ರದಲ್ಲಿ, ಕೇರಳದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹ ಪರಿಸ್ಥಿತಿ, ಭೂಕುಸಿತ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡ್ಯಾಮ್ನ ನೀರಿನ ಮಟ್ಟವನ್ನು ಗಮನಿಸಬೇಕು. ಅದರಿಂದಾಗಿ ಅಹಿತಕರ ಘಟನೆಗಳು ಆಗದಂತೆ ತಡೆಯಬೇಕು ಎಂದು ಕೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.
ಮುಲ್ಲಪೆರಿಯಾರ್ ಡ್ಯಾಮ್ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಇದ್ದು ಉಸ್ತುವಾರಿಯನ್ನು ತಮಿಳುನಾಡು ಸರ್ಕಾರ ನೋಡಿಕೊಳ್ಳುತ್ತಿದೆ. ಈ ಡ್ಯಾಮ್ 1895 ರಲ್ಲಿ ಬ್ರಿಟೀಷರು ನಿರ್ಮಿಸಿದ್ದಾಗಿದೆ. ತಮಿಳುನಾಡಿನ ಮಧುರೈಗೆ ನೀರಿನ ಪೂರೈಕೆ ನೋಡಿಕೊಳ್ಳಲು ಈ ಡ್ಯಾಮ್ ಕಟ್ಟಲಾಗಿದೆ.
ಅಕ್ಟೋಬರ್ 23ರಂದು ಮುಲ್ಲಪೆರಿಯಾರ್ ಡ್ಯಾಮ್ನ ನೀರಿನ ಮಟ್ಟ 136 ಅಡಿಗಳಷ್ಟು ಆಗಿತ್ತು. ಹಾಗೂ ಈ ಬಗ್ಗೆ ತಮಿಳುನಾಡು ಸರ್ಕಾರ ಇಡುಕ್ಕಿ ಜಿಲ್ಲಾಡಳಿತಕ್ಕೆ ಎಚ್ಚರಿಕೆಯನ್ನೂ ನೀಡಿತ್ತು. ಡ್ಯಾಮ್ನ ಹೊರಹರಿವಿನ ಭಾಗದಲ್ಲಿ ವಾಸಿಸುವ ಜನರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಲಾಗಿತ್ತು. ಭಾನುವಾರ 5 ಗಂಟೆಯಂತೆ, ಇಲ್ಲಿನ ನೀರಿನ ಮಟ್ಟ 136.90 ಅಡಿ ಆಗಿದೆ.
ಭಾರತೀಯ ಹವಾಮಾನ ಇಲಾಖೆ(India Meteorological Department) ಅಕ್ಟೋಬರ್ 25ರವರೆಗೂ ಕೇರಳದ ಹಲವು ಜಿಲ್ಲೆಗಳಲ್ಲಿ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಿದೆ. ಅದರಲ್ಲಿ ಕೊಟ್ಟಾಯಂ, ಇಡುಕ್ಕಿ, ಪಲಕ್ಕಾಡ್, ಮಲಪ್ಪುರಂ, ಕೊಯಿಕ್ಕೊಡ್, ವಯಾನಾಡ್ ಮತ್ತು ಕಣ್ಣೂರು, ಪಥನಂತಿಟ್ಟ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಹೇರಲಾಗಿದ್ದು, ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಎರ್ನಾಕುಲಂ, ತ್ರಿಶೂರ್ ಮತ್ತು ಕಾಸರಗೋಡು ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಲಾಗಿದೆ. ಆರೆಂಜ್ ಅಲರ್ಟ್ ಎಂದರೆ 6 ಸಿಎಂನಿಂದ 20 ಸಿಎಂನವರೆಗೆ ಮಳೆಯಾಗಬಹುದು ಎಂಬ ಎಚ್ಚರಿಕೆಯಾಗಿದೆ. ಹಾಗೇ ಹಳದಿ ಅಲರ್ಟ್ ಎಂದರೆ 6ಸಿಎಂನಿಂದ 11 ಸಿಎಂವರೆಗೆ ಮಳೆಯಾಗಬಹುದು ಎಂಬ ಮುನ್ಸೂಚನೆಯಾಗಿದೆ.
ಸದ್ಯ ಕೇರಳದಲ್ಲಿ ನೈಋತ್ಯ ಮಾನ್ಸೂನ್ ಸಕ್ರಿಯವಾಗಿದೆ. ಹೀಗಾಗಿ ಕೇರಳದ ಬಹುತೇಕ ಪ್ರದೇಶಗಳಲ್ಲಿ ಮತ್ತು ಲಕ್ಷದ್ವೀಪದ ವಿವಿಧ ಕಡೆಗಳಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗೇ, ಇಂದು ಕೇರಳದ ಕರಾವಳಿ ತೀರದಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿಮೀ ಇರಬಹುದಾದ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯಬಾರದೆಂದು ಸೂಚಿಸಲಾಗಿದೆ.
ಇದನ್ನೂ ಓದಿ: Kerala Floods: ಕರ್ನಾಟಕ ಬಿಜೆಪಿಯಿಂದ ಕೇರಳಕ್ಕೆ ಅಗತ್ಯ ವಸ್ತುಗಳ ರವಾನೆ
ಇದನ್ನೂ ಓದಿ: ಕೇರಳದಲ್ಲಿ ಅ.25ರವರೆಗೂ ಮಳೆಯ ಎಚ್ಚರಿಕೆ; 8 ಜಿಲ್ಲೆಗಳಲ್ಲಿ ಐಎಂಡಿಯಿಂದ ಆರೆಂಜ್ ಅಲರ್ಟ್
Published On - 8:57 pm, Sun, 24 October 21