ಮೂರು ವರ್ಷಗಳ ನಂತರ ಪಾಟ್ನಾಕ್ಕೆ ಮರಳಿದ ಲಾಲು ಪ್ರಸಾದ್ ಯಾದವ್

ಮೇವು ಹಗರಣದಿಂದಾಗಿ ಕಳೆದ ಮೂರು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್ ಯಾದವ್ ಹುಟ್ಟೂರಿನಿಂದ ದೂರವೇ ಇದ್ದರು.

ಮೂರು ವರ್ಷಗಳ ನಂತರ ಪಾಟ್ನಾಕ್ಕೆ ಮರಳಿದ ಲಾಲು ಪ್ರಸಾದ್ ಯಾದವ್
ಲಾಲು ಪ್ರಸಾದ್ ಯಾದವ್ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 24, 2021 | 11:20 PM

ಪಾಟ್ನಾ: ವೃದ್ಧಾಪ್ಯ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ಲಾಲು ಪ್ರಸಾದ್​ ಯಾದವ್ ಭಾನುವಾರ ತಮ್ಮ ಮನೆಗೆ ಹಿಂದಿರುಗಿದ್ದಾರೆ. ಮೇವು ಹಗರಣದಿಂದಾಗಿ ಕಳೆದ ಮೂರು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್ ಯಾದವ್ ಹುಟ್ಟೂರಿನಿಂದ ದೂರವೇ ಇದ್ದರು. ಪತ್ನಿ ರಾಬ್ರಿ ದೇವಿ ಮತ್ತು ಹಿರಿಯ ಮಗಳು ಮಿಸಾ ಭಾರತಿ ಅವರೊಂದಿಗೆ ಲಾಲು ಯಾದವ್ ಖುಷಿಯಾಗಿದ್ದಾರೆ.

ವಿಮಾನ ನಿಲ್ದಾಣದಿಂದ ಮನೆಗೆ ತೆರಳು ಹಾದಿಯಲ್ಲಿ ಲಾಲು ಅವರನ್ನು ಅವರ ಬೆಂಬಲಿಗರು ‘ಬಡವರ ಬಂಧು’ ಎಂಬ ಘೋಷಣೆಯೊಂದಿಗೆ ಸ್ವಾಗತಿಸಿದರು. ಸೆಪ್ಟೆಂಬರ್ 2018ರಲ್ಲಿ ಲಾಲು ಪ್ರಸಾದ್​ ಯಾದವ್ ಒಮ್ಮೆ ಮಾತ್ರ ಮಗ ತೇಜ್​ ಪ್ರತಾಪ್​ ಮದುವೆಗೆಂದು ರಾಂಚಿಯಿಂದ ಜಾಮೀನಿನ ಮೇಲೆ ಪಾಟ್ನಾಕ್ಕೆ ಬಂದಿದ್ದರು. ವೈದ್ಯಕೀಯ ಚಿಕಿತ್ಸೆಯ ನೆಪದಲ್ಲಿ ಹಲವು ಬಾರಿ ಜಾಮೀನು ವಾಯಿದೆಯನ್ನು ವಿಸ್ತರಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ತೇಜ್​ ಪ್ರತಾಪ್ ಮತ್ತು ತೇಜಸ್ವಿ ತಮ್ಮ ಬಹುಕಾಲದ ವೈಷಮ್ಯ ಮರೆತಂತೆ ಕಂಡುಬಂದರು.

ರಾಂಚಿಯಿಂದ ಬಂದ ಲಾಲು ಯಾದವ್ ನೇರವಾಗಿ ತಮ್ಮ ಪತ್ನಿಯ ಮನೆಗೆ ತೆರಳಿದರು. ತಮಗಾಗಿ ಕಾದು ನಿಂತಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲಿಲ್ಲ. ಲಗುಬಗೆಯ ಮಾತಿಗೆ ಹೆಸರುವಾಸಿಯಾದ ಲಾಲು ಯಾದವ್​ ಮಾತಿನ ಮೋಡಿಯಿಂದ ಎಂಥ ವಾತಾವರಣದಲ್ಲಿಯೂ ಎಲ್ಲರನ್ನೂ ತಮ್ಮತ್ತ ಸೆಳೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ.

ಬಿಹಾರ ವಿಧಾನಸಭೆಯಲ್ಲಿ ನಮ್ಮದೇ ದೊಡ್ಡ ಪಕ್ಷ ಎಂದು ಹೇಳಿಕೊಳ್ಳುತ್ತಿರುವ ಆರ್​ಜೆಡಿ, ಉಪಚುನಾವಣೆಯಲ್ಲಿ ಆಡಳಿತಾರೂಢ ಎನ್​ಡಿಎಯಿಂದ ಕೆಲ ಶಾಸಕರನ್ನು ಸೆಳೆದು ರಾಜ್ಯ ರಾಜಕಾರಣದ ಸಮೀಕರಣ ಬದಲಿಸುವ ಮಾತು ಆಡುತ್ತಿದೆ. ಆರ್​ಜೆಡಿ ಮತ್ತು ಅದರ ಮೈತ್ರಿ ಪಕ್ಷ ಕಾಂಗ್ರೆಸ್​​ ನಡುವೆ ಸಂಬಂಧ ಹಳಸಿದೆ. 2024ರ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ.

ಇದನ್ನೂ ಓದಿ: ಸುಧಾರಿಸದ ಲಾಲು ಪ್ರಸಾದ್​ ಯಾದವ್ ಆರೋಗ್ಯ: ಏಮ್ಸ್​ ಆಸ್ಪತ್ರೆಗೆ ಶಿಫ್ಟ್?​ ಇದನ್ನೂ ಓದಿ: ‘ಬಿಹಾರ ಮತ್ತು ಜಾರ್ಖಂಡ್ ಸಹೋದರರು’;: ಭೋಜ್‌ಪುರಿ ಮತ್ತು ಮಗಾಹಿ ಭಾಷೆಗಳ ಕುರಿತು ಸೊರೆನ್ ಹೇಳಿಕೆಗೆ ನಿತೀಶ್ ಕುಮಾರ್ ಪ್ರತಿಕ್ರಿಯೆ