ಕುಲಪತಿ ಹುದ್ದೆಯಿಂದ ನಾನು ಕೆಳಗಿಳಿಯುತ್ತೇನೆ, ನೀವೇ ಅದನ್ನು ನಿರ್ವಹಿಸಿ; ಕೇರಳ ಮುಖ್ಯಮಂತ್ರಿಗೆ ಖಡಕ್​ ಪತ್ರ ಬರೆದ ರಾಜ್ಯಪಾಲ ಆರಿಫ್​ ಮೊಹಮ್ಮದ್​ ಖಾನ್​

| Updated By: Lakshmi Hegde

Updated on: Dec 11, 2021 | 2:16 PM

ಇನ್ನು ಆರಿಫ್​ ಅವರು ಕೇರಳದ ರಾಜ್ಯಪಾಲರಾದ ನಂತರ ಅನೇಕ ವಿಷಯಕ್ಕೆ ಜನಮೆಚ್ಚುಗೆ ಗಳಿಸಿದವರಾಗಿದ್ದಾರೆ. ಜನಸಾಮಾನ್ಯರ ರಾಜ್ಯಪಾಲ ಎಂದೇ ಖ್ಯಾತಿಗಳಿಸಿದ್ದಾರೆ.

ಕುಲಪತಿ ಹುದ್ದೆಯಿಂದ ನಾನು ಕೆಳಗಿಳಿಯುತ್ತೇನೆ, ನೀವೇ ಅದನ್ನು ನಿರ್ವಹಿಸಿ; ಕೇರಳ ಮುಖ್ಯಮಂತ್ರಿಗೆ ಖಡಕ್​ ಪತ್ರ ಬರೆದ ರಾಜ್ಯಪಾಲ ಆರಿಫ್​ ಮೊಹಮ್ಮದ್​ ಖಾನ್​
ಕೇರಳ ರಾಜ್ಯಪಾಲ
Follow us on

ತಿರುವನಂತಪುರಂ: ಕೇರಳದ ಉನ್ನತ ಶಿಕ್ಷಣ ಕ್ಷೇತ್ರ, ರಾಜ್ಯದ ವಿಶ್ವವಿದ್ಯಾಲಯಗಳ ಉಪ-ಕುಲಪತಿ ಹುದ್ದೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿರುವ ಬಗ್ಗೆ ಅಲ್ಲಿನ ರಾಜ್ಯಪಾಲ, ಯೂನಿವರ್ಸಿಟಿಗಳ ಕುಲಪತಿಯೂ ಆಗಿರುವ ಆರಿಫ್​ ಮೊಹಮ್ಮದ್​ ಖಾನ್​  ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಹೀಗೆ ಮುಂದುವರಿಯುತ್ತದೆ ಅಂತಾದರೆ ನಾನು ಕುಲಪತಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ಆ ಸ್ಥಾನವನ್ನು ನೀವೇ ವಹಿಸಿಕೊಳ್ಳಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ಗೆ ಪತ್ರ ಬರೆದಿದ್ದಾರೆ.  ಸೋಮವಾರವೇ ಈ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ನಾನು ಕುಲಪತಿ ಹುದ್ದೆಯನ್ನು ಬಿಡುತ್ತೇನೆ. ನೀವು ಯೂನಿರ್ವಸಿಟಿ ಆ್ಯಕ್ಟ್​​ನಲ್ಲಿ ತಿದ್ದುಪಡಿ ಮಾಡಿಕೊಂಡು ಆ ಸ್ಥಾನವನ್ನು ವಹಿಸಿಕೊಳ್ಳಿ ಎಂದು ಕೇಳಿದ್ದಾರೆ ಎನ್ನಲಾಗಿದೆ. 

ರಾಜ್ಯದ ಉನ್ನತ ಯೂನಿವರ್ಸಿಟಿಗಳ ಉಪಕುಲಪತಿಗಳ ನೇಮಕದ ವಿಚಾರದಲ್ಲಿ ಸಿಪಿಐ (ಎಂ) ನೇತೃತ್ವದ ಕೇರಳ ಸರ್ಕಾರ ತೀವ್ರ ಹಸ್ತಕ್ಷೇಪ ಮಾಡುತ್ತಿದೆ. ಈ ಮೂಲಕ ಕುಲಪತಿಯಾದ ನನ್ನ ಅಧಿಕಾರವನ್ನು ದುರ್ಬಲಗೊಳಿಸುತ್ತಿದೆ ಎಂದು ರಾಜ್ಯಪಾಲ ಆರಿಫ್​ ಮೊಹಮ್ಮದ್​ ಖಾನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕಣ್ಣೂರು ವಿಶ್ವವಿದ್ಯಾಲಯದ ಉಪ ಕುಲಪತಿ ಗೋಪಿನಾಥ್​ ರವೀಂದ್ರನ್​ ಕಳೆದ ತಿಂಗಳು ನಿವೃತ್ತರಾಗಬೇಕಿತ್ತು. ಆದರೆ ಮತ್ತೆ ನಾಲ್ಕು ವರ್ಷಗಳ ಕಾಲ ಅವಧಿ ವಿಸ್ತರಣೆ ಮಾಡಲಾಯಿತು. ಹಾಗೇ ಮತ್ತೊಂದು ಪ್ರಮುಖ ವಿಶ್ವವಿದ್ಯಾಲಯಕ್ಕೆ ಉಪ ಕುಲಪತಿ ನೇಮಕ ಮಾಡಲು ಅಭ್ಯರ್ಥಿಗಳ ಸಮಿತಿ ರಚಿಸಲು ಹೆಸರು ಸೂಚಿಸಿ ಎಂದು ರಾಜ್ಯಪಾಲರು ಕೇರಳ ಸರ್ಕಾರವನ್ನು ಕೇಳಿದರೆ, ತಿರುಗಿ ಒಬ್ಬರ ಹೆಸರನ್ನು ಮಾತ್ರ ಸರ್ಕಾರ ಸೂಚಿಸಿತ್ತು.  ಹೀಗೆ ಹಲವು ಕಾರಣಗಳಿಂದ ಆರಿಫ್ ಮೊಹಮ್ಮದ್​ ಖಾನ್ ಬೇಸರಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಅದರಲ್ಲೂ ಕಣ್ಣೂರಿನ ವಿಶ್ವವಿದ್ಯಾಲಯದ ಉಪಕುಲಪತಿಗೆ ಅವಧಿ ವಿಸ್ತರಣೆ ಮಾಡಿದ್ದು ಸ್ವಲ್ಪ ಮಟ್ಟಿಗೆ ವಿವಾದವನ್ನೂ ಸೃಷ್ಟಿಸಿತು. ಅಷ್ಟೇ ಅಲ್ಲ, ಪಿಣರಾಯಿ ವಿಜಯನ್​ ಅವರ ಕಾರ್ಯದರ್ಶಿ ಪತ್ನಿಯನ್ನು ಕಣ್ಣೂರು ವಿಶ್ವ ವಿದ್ಯಾಲಯದ ಬೋಧಕ ಹುದ್ದೆಗೆ ನೇಮಕ ಮಾಡುವಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಇನ್ನು ಆರಿಫ್​ ಅವರು ಕೇರಳದ ರಾಜ್ಯಪಾಲರಾದ ನಂತರ ಅನೇಕ ವಿಷಯಕ್ಕೆ ಜನಮೆಚ್ಚುಗೆ ಗಳಿಸಿದವರಾಗಿದ್ದಾರೆ. ಜನಸಾಮಾನ್ಯರ ರಾಜ್ಯಪಾಲ ಎಂದೇ ಖ್ಯಾತಿಗಳಿಸಿದ್ದಾರೆ. ವರದಕ್ಷಿಣ ವಿರುದ್ಧ ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದ ಅವರು, ಘಟಿಕೋತ್ಸವದ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ, ವರದಕ್ಷಿಣೆ ಕೊಡುವುದಿಲ್ಲ, ವರದಕ್ಷಿಣೆ ಪಡೆಯುವುದಿಲ್ಲ ಎಂಬ ಪ್ರತಿಜ್ಞೆ ಮಾಡಿಸಿದ್ದಾರೆ.

ಇದನ್ನೂ ಓದಿ: ರಂಗನಾಥಸ್ವಾಮಿ ದೇವಾಲಯಕ್ಕೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ