ಟಾಯ್ಲೆಟ್ ಸೀಟ್ ನೆಕ್ಕಿಸಿದರು, ಕಮೋಡ್​ನಲ್ಲಿ ತಲೆ ಮುಳುಗಿಸಿದರು: ಆತ್ಮಹತ್ಯೆಗೈದ ವಿದ್ಯಾರ್ಥಿಯ ತಾಯಿ ಗಂಭೀರ ಆರೋಪ

ಕೇರಳದ ಕೊಚ್ಚಿಯಲ್ಲಿ 15 ವರ್ಷದ ಶಾಲಾ ವಿದ್ಯಾರ್ಥಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಇದೀಗ ಟ್ವಿಸ್ಟ್ ದೊರೆತಿದೆ. ಆತನಿಗೆ ಗಂಭೀರವಾಗಿ ಚಿತ್ರಹಿಂಸೆ ನೀಡಿ ರ‍್ಯಾಗಿಂಗ್ ಮಾಡಲಾಗಿತ್ತು. ಹೀಗಾಗಿ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಾಲಕನ ತಾಯಿ ಆರೋಪ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಟಾಯ್ಲೆಟ್ ಸೀಟ್ ನೆಕ್ಕಿಸಿದರು, ಕಮೋಡ್​ನಲ್ಲಿ ತಲೆ ಮುಳುಗಿಸಿದರು: ಆತ್ಮಹತ್ಯೆಗೈದ ವಿದ್ಯಾರ್ಥಿಯ ತಾಯಿ ಗಂಭೀರ ಆರೋಪ
ಮಿಹಿರ್ ಅಹ್ಮದ್ (ಚಿತ್ರ ಕೃಪೆ - ಆತನ ತಾಯಿಯ ಇನ್​ಸ್ಟಾಗ್ರಾಂ ಪೋಸ್ಟ್)
Image Credit source: Instagram

Updated on: Feb 02, 2025 | 10:54 AM

ಕೊಚ್ಚಿ, ಫೆಬ್ರವರಿ 2: ಕೇರಳದ ಕೊಚ್ಚಿಯ ತ್ರಿಪುಣಿತರಾದಲ್ಲಿ ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸುದ್ದಿಯಾಗಿತ್ತು. ಆದರೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದ್ದು, ಬಾಲಕನಿಗೆ ಶಾಲೆಯಲ್ಲಿ ಭಯಾನಕವಾಗಿ ರ‍್ಯಾಗಿಂಗ್ ಮಾಡಲಾಗಿತ್ತು ಎಂದು ಆತನ ತಾಯಿ ಆರೋಪಿಸಿದ್ದಾರೆ. ಟಾಯ್ಲೆಟ್ ಸೀಟ್ ನೆಕ್ಕುವಂತೆ ಮಾಡಿದ್ದಲ್ಲದೆ, ಫ್ಲಷ್ ಮಾಡುವಾಗ ಕಮೋಡ್​ನಲ್ಲಿ ಆತನ ತಲೆಯನ್ನು ಮುಳುಗಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

15 ವರ್ಷದ ವಿದ್ಯಾರ್ಥಿ ಮಿಹಿರ್ ಅಹ್ಮದ್ ಕೆಲವು ದಿನಗಳ ಹಿಂದೆ 26ನೇ ಮಹಡಿಯ ಫ್ಲಾಟ್​​​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಗ್ಗೆ ಇದೀಗ ಆತನ ತಾಯಿ ಗಂಭೀರ ಆರೋಪ ಮಾಡಿದ್ದಾರೆ.

ಮಿಹಿರ್ ಅಹ್ಮದ್ ತಾಯಿ ಹೇಳಿದ್ದೇನು?

ಮಗನ ಮರಣದ ನಂತರ, ಮಿಹಿರ್ ಏಕೆ ಅಂತಹ ಕಠಿಣ ನಿರ್ಧಾರ ಕೈಗೊಂಡ ಎಂಬುದನ್ನು ಅರ್ಥಮಾಡಿಕೊಳ್ಳಲು ನನ್ನ ಪತಿ ಮತ್ತು ನಾನು ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿದೆವು. ಆತನ ಸ್ನೇಹಿತರು, ಸಹಪಾಠಿಗಳು ಮತ್ತು ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ಪರಿಶೀಲಿಸಿದಾಗ ಆತ ಅನುಭವಿಸಿದ ಭಯಾನಕ ವಾಸ್ತವ ಗಮನಕ್ಕೆ ಬಂತು. ಶಾಲೆಯಲ್ಲಿ ಮತ್ತು ಶಾಲಾ ಬಸ್‌ನಲ್ಲಿ ವಿದ್ಯಾರ್ಥಿಗಳ ಗುಂಪಿನಿಂದ ಕ್ರೂರವಾಗಿ ರ‍್ಯಾಗಿಂಗ್, ಬೆದರಿಸುವಿಕೆ ಮತ್ತು ದೈಹಿಕ ಹಲ್ಲೆ ಆತ ಆ ಕಠಿಣ ನಿರ್ಧಾರಕ್ಕೆ ಬರಲು ಕಾರಣವಾಯಿತು ಎಂದು ತಾಯಿ ಸಾಮಾಜಿಕ ಮಾಧ್ಯದಲ್ಲಿ ಮಾಡಿದ ಪೋಸ್ಟ್​​ನಲ್ಲಿ ಆರೋಪಿಸಿದ್ದಾರೆ.

ಮಿಹಿರ್​​ನನ್ನು ಥಳಿಸಲಾಗಿತ್ತು. ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿತ್ತು ಮತ್ತು ಆತನ ಜೀವನದ ಕೊನೆಯ ದಿನ ಯಾರೂ ಊಹಿಸಲಾಗದ ಅವಮಾನವನ್ನು ಮಾಡಲಾಗಿತ್ತು. ಅವನನ್ನು ಬಲವಂತವಾಗಿ ವಾಶ್​ರೂಮ್​ಗೆ ಕರೆದೊಯ್ದು, ಟಾಯ್ಲೆಟ್ ಸೀಟ್ ಅನ್ನು ನೆಕ್ಕಲು ಬಲವಂತ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ಟಾಯ್ಲೆಟ್ ಅನ್ನು ಫ್ಲಶ್ ಮಾಡಿದಾಗ ಆತನ ತಲೆಯನ್ನು ಕಮೋಡ್​ ಒಳಕ್ಕೆ ತಳ್ಳಲಾಗಿತ್ತು. ಈ ಕ್ರೌರ್ಯದ ಕೃತ್ಯಗಳು ಆತನಿಗೆ ಗಂಭೀರ ಘಾಸಿ ಮಾಡಿದವು ಎಂದು ಅವರು ಹೇಳಿದ್ದಾರೆ.

ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಪಿಣರಾಯಿ ವಿಜಯನ್​ಗೆ ಪತ್ರ

ಘಟನೆ ಸಂಬಂಧ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಮಿಹಿರ್ ತಾಯಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿ ಮತ್ತು ಕೇರಳ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ತಮ್ಮ ಮಗನ ಸಾವಿನ ಬಗ್ಗೆ ತಕ್ಷಣದ ಮತ್ತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್, ಸುಲಿಗೆ

ಮಿಹಿರ್ ಜನವರಿ 15 ರಂದು ಶಾಲೆಯಿಂದ ಮರಳಿದ ಕೇವಲ ಒಂದು ಗಂಟೆಯ ನಂತರ ಕೊಚ್ಚಿಯ ತ್ರಿಪುಣಿತರಾದಲ್ಲಿನ ತಮ್ಮ 26 ನೇ ಮಹಡಿಯ ಫ್ಲಾಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:35 am, Sun, 2 February 25

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us