ಅಪ್ಪನ ಕೊನೇ ಆಸೆ ಪೂರೈಸಲು ಒಂದು ಜಾಹೀರಾತು ಕೊಟ್ಟ ಮಗ; ಮನೆ ಬಾಗಿಲಿಗೆ ಬಂದವರನ್ನು ನೋಡಿ ತಲೆಕೆಡಿಸಿಕೊಂಡ !
ಕೊಲ್ಲಂನಲ್ಲಿರುವ ಲೂಯಿಸ್ ಅಥವಾ ಅವರ ಸೋದರ ಬೇಬಿ ಎಲ್ಲಿದ್ದರೂ ತನ್ನನ್ನು ಸಂಪರ್ಕಿಸಬೇಕು ಎಂದು ಹೇಳಿ ವಿಳಾಸವನ್ನೂ ಕೊಟ್ಟಿದ್ದರು. ಆದರೆ ನಾಸರ್ ಅವರ ಯೋಜನೆ ಪೀಕಲಾಟಕ್ಕೆ ಕಾರಣವಾಯಿತು.
ಇಲ್ಲೊಬ್ಬ ವ್ಯಕ್ತಿ ತಾನು ಪತ್ರಿಕೆಯಲ್ಲಿ ಕೊಟ್ಟ ಜಾಹೀರಾತಿನಿಂದ ದೊಡ್ಡ ಪೀಕಲಾಟಕ್ಕೆ ಒಳಗಾಗುವಂತಾಗಿದೆ. ಕೇರಳದ ತಿರುವನಂತಪುರಂ ಜಿಲ್ಲೆಯ ಮದನ್‌ವಿಲಾದ ನಿವಾಸಿಯಾಗಿದ್ದ ಅಬ್ದುಲ್ಲಾ ಸಾಯುವ ಕೊನೇ ಕ್ಷಣದಲ್ಲಿ ಮಗ ನಾಸರ್ ಬಳಿ, ಕೊಲ್ಲಂನಲ್ಲಿರುವ ಲೂಯಿಸ್ ಎಂಬ ವ್ಯಕ್ತಿಯಿಂದ ತಾವು ಸಾಲ ತೆಗೆದುಕೊಂಡಿದ್ದು, ಅದನ್ನು ಇನ್ನೂ ತೀರಿಸಿಲ್ಲ. ಹೇಗಾದರೂ ಸರಿ ನೀನಾದರೂ ಅವರಿಗೆ ಹಣ ವಾಪಸ್ ಕೊಡು ಎಂದು ಹೇಳಿದ್ದರು. ಕೊಲ್ಲಂ ಲೂಯಿಸ್ ಮತ್ತು ಅಬ್ದುಲ್ಲಾ ಇಬ್ಬರೂ 1980ರಲ್ಲಿ ದುಬೈನಲ್ಲಿ ಇದ್ದರು. ಇವರಿಬ್ಬರೂ ಕೆಲಸ ಹುಡುಕಿಕೊಂಡೇ ಅಲ್ಲಿ ಹೋಗಿ, ಒಂದೇ ರೂಂನಲ್ಲಿ ಇದ್ದರು. ಆದರೆ ಅಬ್ದುಲ್ಲಾಗೆ ಬೇಗ ಕೆಲಸ ಸಿಗದೆ ಕಷ್ಟಪಡುತ್ತಿದ್ದರು. ಈ ವೇಳೆ ತನ್ನ ಸ್ನೇಹಿತ ಲೂಯಿಸ್ರಿಂದ 22 ಸಾವಿರ ರೂಪಾಯಿ ಸಾಲ ಪಡೆದಿದ್ದರು. ನಂತರದ ದಿನಗಳಲ್ಲಿ ಅಬ್ದುಲ್ಲಾಗೂ ಒಳ್ಳೆಯ ಕೆಲಸ ಸಿಕ್ಕಿದ ಕಾರಣ ಬೇರೆ ಕಡೆಗೆ ಹೋಗುವಂತಾಯಿತು. ಒಟ್ಟಾರೆ ಲೂಯಿಸ್ ಮತ್ತು ಅಬ್ದುಲ್ಲಾ ನಡುವೆ ಸಂಪರ್ಕವೇ ಇಲ್ಲದಂತಾಗಿತ್ತು.
ಹೀಗೆ ವಯಸ್ಸಾಗುತ್ತ ಅಬ್ದುಲ್ಲಾ ತಮ್ಮ ಕೆಲಸದಿಂದ ನಿವೃತ್ತರಾಗಿ ಕೇರಳದ ಮನೆಗೆ ಬಂದು ಇಲ್ಲಿಯೇ ವಾಸವಾಗಿದ್ದರು. 2022ರ ಜನವರಿ 23ರಂದು ಮೃತಪಟ್ಟಿದ್ದಾರೆ. ಆದರೆ ಮೃತಪಡುವುದಕ್ಕೂ ಮೊದಲು ಲೂಯಿಸ್ರನ್ನು ನೆನಪಿಸಿಕೊಂಡ ಅವರು, ಮಗನ ಬಳಿ ಲೂಯಿಸ್ ಬಗ್ಗೆ ಮಾತನಾಡಿದ್ದಾರೆ. ಕೊಲ್ಲಂನ ನಿವಾಸಿ ಎಂದು ಹೇಳಿದ್ದು ಬಿಟ್ಟರೆ, ಇನ್ಯಾವುದೇ ಮಾಹಿತಿಯನ್ನೂ ಕೊಟ್ಟಿರಲಿಲ್ಲ. ಹೀಗಾಗಿ ತಂದೆಯ ಕೊನೇ ಅಭಿಲಾಷೆಯನ್ನು ಹೇಗಾದರೂ ಪೂರೈಸಬೇಕು ಎಂದು ನಿಶ್ಚಯ ಮಾಡಿದ ಮಗ ನಾಸರ್, ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದರು. ಇದ್ದುದರಲ್ಲಿ ಲೂಯಿಸ್ ಅವರ ಸೋದರನ ಹೆಸರು ಬೇಬಿ ಎಂಬುದೊಂದು ಸುಳಿವನ್ನು ಅಬ್ದುಲ್ಲಾ ನೀಡಿದ್ದರು. ಅದೊಂದೇ ಮಾಹಿತಿ ಇಟ್ಟುಕೊಂಡು ನಾಸರ್ ಪ್ರಯತ್ನ ಪಡುತ್ತಲೇ ಇದ್ದರು.
ಕೊಲ್ಲಂನಲ್ಲಿರುವ ಲೂಯಿಸ್ ಅಥವಾ ಅವರ ಸೋದರ ಬೇಬಿ ಎಲ್ಲಿದ್ದರೂ ತನ್ನನ್ನು ಸಂಪರ್ಕಿಸಬೇಕು ಎಂದು ಹೇಳಿ ವಿಳಾಸವನ್ನೂ ಕೊಟ್ಟಿದ್ದರು. ಆದರೆ ನಾಸರ್ ಅವರ ಯೋಜನೆ ಪೀಕಲಾಟಕ್ಕೆ ಕಾರಣವಾಯಿತು. ನಾನು ಲೂಯಿಸ್ ಎಂದು ಹೇಳಿಕೊಂಡು ಒಟ್ಟು ಐವರು ನಾಸರ್ ಮನೆ ಬಾಗಿಲಿಗೆ ಬಂದು ನಿಂತಿದ್ದರು. ಇದು ದೊಡ್ಡ ಗೊಂದಲಕ್ಕೆ ಕಾರಣವಾಯಿತು. ಯಾರು ನಿಜವಾದ ಲೂಯಿಸ್? ಯಾರಿಗೆ ದುಡ್ಡುಕೊಡಬೇಕು ಏನೇನೂ ಗೊತ್ತಾಗದೆ ನಾಸರ್ ಕಂಗಾಲಾಗುವಂತಾಯಿತು. ಆದರೆ ಅಬ್ದುಲ್ಲಾ ಅವರ ಸ್ನೇಹಿತರೊಬ್ಬರು, ಇವರೆಲ್ಲರೂ ನಕಲಿ ಲೂಯಿಸ್. ಇವರ್ಯಾರಿಗೂ ಹಣ ಕೊಡಬೇಡ ಎಂದು ನಾಸರ್ ಬಳಿ ಹೇಳಿದ್ದಾರೆ. ಸದ್ಯ ನಾಸರ್ಗೆ ಅದೇ ಸಲಹೆಯನ್ನು ಪಾಲಿಸಿದ್ದು, ನಿಜವಾದ ಲೂಯಿಸ್ಗಾಗಿ ಹುಡುಕಾಡುತ್ತಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆಗೆ ಬಂತು ಮೂಗನ್ನು ಮಾತ್ರ ಮುಚ್ಚುವ ಮಾಸ್ಕ್: ಜಗತ್ತಿನಾದ್ಯಂತ ವೈರಲ್ ಆದ ‘ಕೋಸ್ಕ್’ ಮಾಸ್ಕ್
Published On - 1:54 pm, Fri, 4 February 22