ದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ(Congress working committee)ಯ ಸಭೆ ನಡೆದ ಬೆನ್ನಲ್ಲೇ ಕಾಂಗ್ರೆಸ್ ವಲಯದಿಂದ ಇನ್ನೊಂದು ಸುದ್ದಿ ಹೊರಬಿದ್ದಿದೆ. ಕಾಂಗ್ರೆಸ್ ಅಧ್ಯಕ್ಷ (Congress President) ಸ್ಥಾನಕ್ಕೆ ಮತ್ತೊಮ್ಮೆ ಏರುವ ಬಗ್ಗೆ ರಾಹುಲ್ ಗಾಂಧಿ ಪರಾಮರ್ಶಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಸೋನಿಯಾ ಗಾಂಧಿ (Sonia Gandhi) ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ನಾನು ಹಂಗಾಮಿ ಅಧ್ಯಕ್ಷೆಯಲ್ಲ..ಪೂರ್ಣಾವಧಿ ಅಧ್ಯಕ್ಷೆಯಾಗಿಯೇ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಸಭೆಯಲ್ಲಿ ಸೋನಿಯಾ ಗಾಂಧಿ ಜಿ 23 ನಾಯಕರಿಗೆ ಹೇಳಿದ್ದಾರೆ. ಆದರೆ ಪಂಜಾಬ್, ರಾಜಸ್ಥಾನ, ಛತ್ತೀಸಗಡ್, ಮಾಜಿ ರಕ್ಷಣಾ ಸಚಿವ ಎ.ಕೆ.ಅಂಟೋನಿ ಸೇರಿ ಹಲವರು, ರಾಹುಲ್ ಗಾಂಧಿಯವರಿಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಹೊರುವಂತೆ ಒತ್ತಾಯಿಸಿದ್ದಾರೆ. ಅವರ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಖಂಡಿತವಾಗಿಯೂ ನಿಮ್ಮ ಮನವಿಯನ್ನು ಪರಿಗಣಿಸುತ್ತೇನೆ. ಈ ಸಂಬಂಧ ಪರಾಮರ್ಶಿಸುತ್ತೇನೆ ಎಂದು ಹೇಳಿದ್ದಾಗಿ ವರದಿಯಾಗಿದೆ.
ಇಂದಿನ ಸಭೆಯಲ್ಲಿ ಕಾಂಗ್ರೆಸ್ ಸಾಂಸ್ಥಿಕ ಹುದ್ದೆಗಳ ಚುನಾವಣೆ ಸೇರಿ, ನೂತನ ಅಧ್ಯಕ್ಷನ ಆಯ್ಕೆ ಬಗ್ಗೆಯೂ ವ್ಯಾಪಕ ಚರ್ಚೆ ನಡೆದಿದೆ. ಮುಂದಿನ ವರ್ಷದ ಸೆಪ್ಟೆಂಬರ್ ಒಳಗೆ ಈ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸಾಂಸ್ಥಿಕ ಚುನಾವಣೆಗಳ ವೇಳಾಪಟ್ಟಿಯನ್ನೂ ಈಗಲೇ ಅಂತಿಮಗೊಳಿಸಲಾಗಿದೆ ಎಂದೂ ಹೇಳಲಾಗಿದೆ. ಈ ಮಧ್ಯೆ ಇಂದು ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿ, ನೀವೀಗ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ. ಅದಕ್ಕೆ ನಾನು ನಿಮ್ಮ ಮಾತನ್ನು ಪರಿಗಣಿಸುತ್ತೇನೆ (Will Consider) ಎಂದು ರಾಹುಲ್ ಗಾಂಧಿ ಉತ್ತರಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಕೇರಳದ ಸಂಸದರಾಗಿರುವ ರಾಹುಲ್ ಗಾಂಧಿ ಈ ಹಿಂದೆ 2017ರಲ್ಲಿ ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ಏರಿದ್ದರು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಿತ್ತು. ಅದರ ನೈತಿಕ ಹೊಣೆ ಹೊತ್ತ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಅವರು ಹುದ್ದೆಯಿಂದ ಕೆಳಗೆ ಇಳಿದ ಬಳಿಕ ಮತ್ತೆ ಸೋನಿಯಾ ಗಾಂಧಿಯವರು ಮಧ್ಯಂತರ ಅವಧಿಗೆ ಅಧ್ಯಕ್ಷೆಯಾಗಿದ್ದರು. ಆದರೆ ಇದುವರೆಗೂ ಅಂದರೆ ಎರಡು ವರ್ಷವಾದರೂ ಕಾಂಗ್ರೆಸ್ಗೆ ನೂತನ ಅಧ್ಯಕ್ಷ ಸಿಗಲಿಲ್ಲ. ಈ ಬಗ್ಗೆ ಅವರದ್ದೇ ಪಕ್ಷದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪದೇಪದೆ ಸೋನಿಯಾ ಗಾಂಧಿಗೆ ಪತ್ರ ಬರೆದು ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಕೆಲವರು ಮಾಧ್ಯಮಗಳ ಎದುರೂ ಹೇಳಿಕೊಂಡಿದ್ದಾರೆ. ಇನ್ನು ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದ ಬಳಿಕ ಪಕ್ಷಕ್ಕೆ ನೂತನ ನಾಯಕರು ಬೇಕು..ಆದರೆ ಗಾಂಧಿ ಕುಟುಂಬದಿಂದ ಹೊರತಾದ ನಾಯಕ ಆಗಿರಬೇಕು ಎಂಬ ಕೂಗೂ ಕೇಳಿಬಂದಿತ್ತು. ಈಗ ಮತ್ತೊಮ್ಮೆ ರಾಹುಲ್ ಗಾಂಧಿಯೇ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುವ ಎಲ್ಲ ಸಾಧ್ಯತೆಗಳೂ ಇದೆ.
ಇದನ್ನೂ ಓದಿ: ಮ್ಯೂಚುವಲ್ ಫಂಡ್ನ ಫಂಡ್ ಮ್ಯಾನೇಜರ್ಗಳು ಬಸ್ಸಿನ ಡ್ರೈವರ್ ಅಥವಾ ವಿಮಾನದ ಪೈಲಟ್ಗಳಿದ್ದಂತೆ: ಡಾ ಬಾಲಾಜಿ ರಾವ್