AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳ ಚುನಾವಣೆ: 11 ವರ್ಷಗಳ ಹಿಂದೆ ಯೋಧನನ್ನು ರಕ್ಷಿಸುವಾಗ ಕೈ ಕಳೆದುಕೊಂಡ ಯುವತಿ ಈಗ ಬಿಜೆಪಿ ಅಭ್ಯರ್ಥಿ

11 ವರ್ಷಗಳ ಹಿಂದೆ ಛತ್ತೀಸ್​ಗಡದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಯೋಧನನ್ನು ರಕ್ಷಿಸುವ ವೇಳೆ ತನ್ನ ಬಲಗೈ ಕಳೆದುಕೊಂಡ ಯುವತಿ ಈಗ ಅದೇ ಯೋಧನ ಪತ್ನಿ. ಪಾಲಕ್ಕಾಡ್ ಜಿಲ್ಲೆಯ ಬಿಜೆಪಿ ಅಭ್ಯರ್ಥಿಯ ಪ್ರೇಮ್ ಕಹಾನಿ ಇದು.

ಕೇರಳ ಚುನಾವಣೆ: 11 ವರ್ಷಗಳ ಹಿಂದೆ ಯೋಧನನ್ನು ರಕ್ಷಿಸುವಾಗ ಕೈ ಕಳೆದುಕೊಂಡ ಯುವತಿ ಈಗ ಬಿಜೆಪಿ ಅಭ್ಯರ್ಥಿ
ಪತಿ ವಿಕಾಸ್ ಜತೆ ಜ್ಯೋತಿ
Ghanashyam D M | ಡಿ.ಎಂ.ಘನಶ್ಯಾಮ
|

Updated on: Dec 07, 2020 | 5:12 PM

Share

ಕೊಚ್ಚಿ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೇರಳದಲ್ಲಿ ಅಖಾಡ ಸಿದ್ದಗೊಂಡಿದೆ. ಇಲ್ಲಿನ ಪಾಲಕ್ಕಾಡ್ ಜಿಲ್ಲೆ ಕೊಲ್ಲಂಗೋಡ್ ಬ್ಲಾಕ್ ಪಂಚಾಯತ್​​ನಿಂದ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಜ್ಯೋತಿ ವಿಕಾಸ್ ಛತ್ತೀಸ್​ಗಡದವರು. ಜ್ಯೋತಿ ಕುಂಡು ಎಂಬ ಮಹಿಳೆ ಕೇರಳಕ್ಕೆ ಬಂದು ಜ್ಯೋತಿ ವಿಕಾಸ್ ಆಗಿದ್ದರ ಹಿಂದೆ ಪ್ರೇಮಕಥೆಯೊಂದಿದೆ.

11 ವರ್ಷಗಳ ಹಿಂದೆ ಛತ್ತೀಸ್​ಗಡದಲ್ಲಿ ಸಂಭವಿಸಿದ ಬಸ್ ಅಪಘಾತವೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದ ಜ್ಯೋತಿ ಕುಂಡು ಬಲಕೈ ಕಳೆದುಕೊಂಡಿದ್ದರು. ದಾಂತೇವಾಡ ಜಿಲ್ಲೆಯ ಬಚೇಲಿ ಗ್ರಾಮದ ಈ ಯುವತಿಯ ಬದುಕು ತಿರುವು ಪಡೆದುಕೊಂಡದ್ದೇ ಅಲ್ಲಿಂದ. ಜ್ಯೋತಿ ಆ ದಿನ ಕಾಲೇಜು ಹಾಸ್ಟೆಲ್​​ನಿಂದ ಮನೆಗೆ ಬರುತ್ತಿದ್ದರು. ಅದೇ ಬಸ್​ನಲ್ಲಿದ್ದ ಸಿಐಎಸ್​​ಎಫ್ ಸಿಬ್ಬಂದಿ ಪಿ.ವಿ. ವಿಕಾಸ್ ತಮ್ಮ ಶಿಬಿರಕ್ಕೆ ಮರಳುತ್ತಿದ್ದರು. ಬಸ್​​ನಲ್ಲಿ ವಿಕಾಸ್​​ ನಿದ್ದೆಗೆ ಜಾರಿದ್ದರು. ಬಸ್ ಸಂಚರಿಸುತ್ತಿದ್ದಂತೆ ಮುಂದಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್​​ನ್ನು ಗಮನಿಸಿದ ಜ್ಯೋತಿ ಸಹಪ್ರಯಾಣಿಕನಾದ ವಿಕಾಸ್​ನನ್ನು ಇನ್ನೊಂದು ಬದಿಗೆ ನೂಕಿ ಪ್ರಾಣ ಉಳಿಸಿದರು. ಈ ಹೊತ್ತಲ್ಲಿ ಬಸ್ ಮತ್ತು ಟ್ರಕ್ ನಡುವೆ ಸಿಲುಕಿ ಅವರ ಬಲಕೈಗೆ ಗಂಭೀರ ಗಾಯಗಳಾಯಿತು.

ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ರಾಯಪುರದಲ್ಲಿರುವ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತೀವ್ರ ಪೆಟ್ಟಾಗಿದ್ದರಿಂದ ಭುಜದಿಂದ ಕೆಳಗೆ ಕೈಯನ್ನು ಕತ್ತರಿಸಿ ತೆಗೆಯಬೇಕಾಗಿ ಬಂತು. ಆ ಕಷ್ಟದ ಗಳಿಗೆಯಲ್ಲಿ ಜತೆಯಾಗಿದ್ದು ವಿಕಾಸ್. ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ವಿಕಾಸ್ ಅಲ್ಲಿಯೇ ಇರುತ್ತಿದ್ದರು. ನನ್ನ ಚಿಕಿತ್ಸೆಯ ವೆಚ್ಚವನ್ನು ಭರಿಸಿದ್ದೂ ವಿಕಾಸ್ ಅಂತಾರೆ ಜ್ಯೋತಿ.

ಅಪಘಾತದಲ್ಲಿ ನನ್ನನ್ನು ರಕ್ಷಿಸುವಾಗ ಜ್ಯೋತಿ ಕೈಕಳೆದುಕೊಂಡಳು ಎಂಬುದು ನನಗೆ ಮೊದಲು ಗೊತ್ತಿರಲಿಲ್ಲ. ಆಸ್ಪತ್ರೆಗೆ ಬಂದಾಗ ಸಹಪ್ರಯಾಣಿಕರೊಬ್ಬರು ನಡೆದ ಘಟನೆಯನ್ನು ಹೇಳಿದರು. ನಾನು ಭಾವುಕನಾದೆ. ಅಪರಿಚಿತನಾದ ನನ್ನನ್ನು ನೀವು ಯಾಕೆ ಕಾಪಾಡಿದರಿ?ಎಂದು ನಾನು ಆಕೆಯಲ್ಲಿ ಕೇಳಿದಾಗ, ನಾನು ನರ್ಸಿಂಗ್ ವಿದ್ಯಾರ್ಥಿನಿ. ಯಾರಾದರೂ ಆಪತ್ತಿನಲ್ಲಿದ್ದಾಗ ನಿರ್ಲಕ್ಷಿಸಲು ನನ್ನಿಂದ ಸಾಧ್ಯವಾಗದು ಎಂದಳು.

ಆಕೆಯ ಮೇಲಿನ ಜವಾಬ್ದಾರಿ ನನ್ನದು ಎಂದು ಅನಿಸಿತು. ಹಾಗಾಗಿ ಮದುವೆ ಪ್ರಸ್ತಾಪ ಮುಂದಿಟ್ಟೆ . ಆಕೆಯ ಅಪ್ಪ ಸರ್ಕಾರಿ ಉದ್ಯೋಗಿಯಾಗಿದ್ದ ಗೋವಿಂದ ಕಂಡು ನಮ್ಮ ಮದುವೆಗೆ ವಿರೋಧ ವ್ಯಕ್ತಪಡಿಸಿದರು. ಒಂದು ದಿನ ಆಕೆ ನನ್ನೊಂದಿಗೆ ಪಾಲಕ್ಕಾಡ್​ಗೆ ಹೊರಟು ಬಂದಳು. 2011ಏಪ್ರಿಲ್ ನಲ್ಲಿ ಮದುವೆಯಾದೆವು ಎಂದು ತಮ್ಮ ಪ್ರೇಮಕಥೆಯನ್ನು ವಿವರಿಸಿದ್ದಾರೆ ವಿಕಾಸ್.

30ರ ಹರೆಯದ ಜ್ಯೋತಿಗೆ 8 ಮತ್ತು 4 ವರ್ಷದ ಇಬ್ಬರು ಮಕ್ಕಳಿದ್ದಾರೆ. ತಮ್ಮ ಪಂಚಾಯತ್​ನಲ್ಲಿ ಮತಯಾಚಿಸುವಾಗ ನಿರರ್ಗಳವಾಗಿ ಮಲಯಾಳಂ ಮಾತನಾಡುತ್ತಾರೆ. ನರ್ಸ್ ಆಗಿ ಜನರ ಸೇವೆ ಮಾಡಬೇಕು ಎಂಬ ನನ್ನ ಕನಸು 2010 ಜನವರಿ 3ರಂದು ನಡೆದ ಆ ಅಪಘಾತದಲ್ಲಿ ನುಚ್ಚುನೂರಾಯಿತು. ಈ ಚುನಾವಣೆಯಲ್ಲಿ ನಾನು ಗೆದ್ದರೆ ಆ ಕನಸು ಇನ್ನೊಂದು ರೀತಿಯಲ್ಲಿ ಚಿಗುರೊಡೆಯಬಹುದು ಅಂತಾರೆ ಜ್ಯೋತಿ.

ಕೆಲಸದ ನಿಮಿತ್ತ ವಿಕಾಸ್ ದೇಶದಾದ್ಯಂತ ಸಂಚರಿಸುವಾಗ ಪಾಲಕ್ಕಾಡ್​ನಲ್ಲಿ ಜ್ಯೋತಿ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನಾನು ಬಿಜೆಪಿಯಲ್ಲಿ ಸಕ್ರಿಯ ಆಗಿರಲಿಲ್ಲ. ಆದರೆ ಬಿಜೆಪಿ ನಾಯಕರು ಬಂದು ಕೇಳಿಕೊಂಡಾಗ ನಾನು ಒಪ್ಪಿದೆ. ರಾಜಕೀಯ ನನಗೆ ಹೊಸ ದಿಶೆಯನ್ನು ನೀಡಲಿದೆ ಎಂಬ ನಂಬಿಕೆ ನನ್ನದು ಎಂದು ಜ್ಯೋತಿ ಹೇಳಿದ್ದಾರೆ.

ಇದನ್ನೂ ಓದಿ: ಮೊಟ್ಟಮೊದಲ ಬಾರಿಗೆ.. ಚೋಳನಾಯಕನ್ ಸಮುದಾಯದ ಕುಡಿ ಎಲೆಕ್ಷನ್​ ಅಖಾಡಕ್ಕೆ ಎಂಟ್ರಿ

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ರಹಸ್ಯ ಮೈತ್ರಿ: ಪಿಣರಾಯಿ ವಿಜಯನ್ ಆರೋಪ