
ತಿರುವನಂತಪುರಂ, ಜುಲೈ 11: ಕೆಲವೊಮ್ಮೆ ನ್ಯಾಯಾಲಯದ ವಿಳಂಬದ ತೀರ್ಪಿನಿಂದಾಗಿ ಆ ಅರ್ಜಿ ಸಲ್ಲಿಸಿದ ವ್ಯಕ್ತಿಗಳಿಗೆ ಯಾವೆಲ್ಲ ರೀತಿಯ ತೊಂದರೆಗಳಾಗುತ್ತವೆ ಎಂಬುದಕ್ಕೆ ಜ್ವಲಂತ ಉದಾಹರಣೆಯೊಂದು ಕೇರಳದಲ್ಲಿ ನಡೆದಿದೆ. ಕೇರಳದ ಎರ್ನಾಕುಲಂ ಮೂಲದ ಸ್ತನ ಕ್ಯಾನ್ಸರ್ ಪೀಡಿತ ಮಹಿಳೆಯೊಬ್ಬರು 2022ರ ಜೂನ್‌ನಲ್ಲಿ ಕೇರಳ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಸ್ತನ ಕ್ಯಾನ್ಸರ್‌ನಿಂದ (Breast Cancer) ಬಳಲುತ್ತಿದ್ದ ಈ ಮಹಿಳೆ ಪ್ರತಿ ತಿಂಗಳು ಆ ಕ್ಯಾನ್ಸರ್ನ ಔಷಧಿಗೆ ಲಕ್ಷಾಂತರ ರೂ. ಖರ್ಚು ಮಾಡಲಾಗದೆ ಕ್ಯಾನ್ಸರ್ನ ಔಷಧದದ ಬೆಲೆಯನ್ನು ಕಡಿಮೆಗೊಳಿಸಲು ಆದೇಶ ನೀಡಿ ಎಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಲ್ಲಿಸಿ 4 ವರ್ಷಗಳೇ ಕಳೆದಿತ್ತು. ಆದರೂ ಈ ಪ್ರಕರಣದಲ್ಲಿ ತೀರ್ಪು ಪ್ರಕಟವಾಗಲಿಲ್ಲ. ನ್ಯಾಯಾಲಯದ ತೀರ್ಪಿಗಾಗಿ ಕಾದು ಕಾದು ಆ ಅರ್ಜಿದಾರರಾದ ಮಹಿಳೆ ಕ್ಯಾನ್ಸರ್ ರೋಗದಿಂದ ಮೃತಪಟ್ಟಿದ್ದಾರೆ.
ಕೇರಳ ಹೈಕೋರ್ಟ್‌ನ ಕಡತಗಳ ನಡುವೆ ಆಕೆ ಸಲ್ಲಿಸಿದ್ದ ಅರ್ಜಿ ಇನ್ನೂ ಧೂಳು ತಿನ್ನುತ್ತಾ ಬಿದ್ದಿದೆ. ಆದರೆ, ಆ ಬಗ್ಗೆ ಪ್ರಶ್ನಿಸಲು ಅದನ್ನು ಸಲ್ಲಿಸಿದ್ದ ಮಹಿಳೆ ಇಂದು ಜೀವಂತವಾಗಿಲ್ಲ. ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆ ಮಹಿಳೆ, ತಿಂಗಳಿಗೆ ಬರೋಬ್ಬರಿ 1.5 ಲಕ್ಷ ವೆಚ್ಚ ತಗಲುವ ಎರಡು ಪ್ರಮುಖ ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ಕಡಿಮೆ ಮಾಡುವಂತೆ ಕೋರಿ 2022ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, 4 ವರ್ಷಗಳ ಸುದೀರ್ಘ ಕಾಯುವಿಕೆ ಮತ್ತು 57 ಕೋರ್ಟ್ ವಿಚಾರಣೆಗಳ ನಂತರವೂ ಯಾವುದೇ ತೀರ್ಪು ಸಿಗದೆ ಆಕೆ ಕೊನೆಯುಸಿರೆಳೆದಿದ್ದಾರೆ.
ಹೋರಾಟ ನಿಂತಿಲ್ಲ:
ಅರ್ಜಿ ಸಲ್ಲಿಸಿದ ಮಹಿಳೆ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರೂ ಆಕೆ ಆರಂಭಿಸಿದ ಹೋರಾಟ ಇನ್ನೂ ಮುಗಿದಿಲ್ಲ. ಜ್ಯೋತ್ಸ್ನಾ ಸಿಂಗ್ ಮತ್ತು ಕೆ.ಎಮ್. ಗೋಪಕುಮಾರ್ ಎಂಬ ಇಬ್ಬರು ಸಾಮಾಜಿಕ ಕಾರ್ಯಕರ್ತರು ಈ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಕೋರಿ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ಇದೇ ಪತ್ರದ ಪ್ರತಿಗಳನ್ನು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿಗೂ ರವಾನಿಸಲಾಗಿದೆ.
ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಏಕೆ ಸಂಭವಿಸುತ್ತದೆ? ತಜ್ಞರು ಹೇಳುವುದೇನು?
“ಈ ಹೋರಾಟವನ್ನು ಆರಂಭಿಸಿದ ಮಹಿಳೆ ಇಂದು ನಮ್ಮೊಂದಿಗಿಲ್ಲ. ಜೀವ ರಕ್ಷಕ ಔಷಧಿಗಳ ವಿಷಯದಲ್ಲಿ ನ್ಯಾಯಾಂಗದ ವಿಳಂಬವು ಎಷ್ಟು ಜೀವವನ್ನು ಬಲಿ ತೆಗೆದುಕೊಳ್ಳಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ” ಎಂದು ಆ ಪತ್ರದಲ್ಲಿ ಈ ಘಟನೆಯನ್ನು ವಿವರಿಸಿ ಬರೆಯಲಾಗಿದೆ.
57 ವಿಚಾರಣೆಗಳು ನಡೆದರೂ ತೀರ್ಪಿಲ್ಲ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಇದುವರೆಗೆ ಬರೋಬ್ಬರಿ 57 ವಿಚಾರಣೆಗಳು ನಡೆದಿವೆ. ಕೋರ್ಟ್ ಒಬ್ಬ ವಿಶೇಷ ವಕೀಲರನ್ನು ನೇಮಿಸಿತ್ತು, ಸರ್ಕಾರದ ಸಂಪೂರ್ಣ ವರದಿಯನ್ನು ಕೇಳಿತ್ತು ಹಾಗೂ ಔಷಧ ಕಂಪನಿಗಳಿಗೂ ಸಮನ್ಸ್ ನೀಡಿತ್ತು. ವಿಚಾರಣೆಯ ಸಂದರ್ಭದಲ್ಲಿ ಸರ್ಕಾರವು “ಕ್ಯಾನ್ಸರ್‌ಗೆ ಹಳೆಯ ಔಷಧಿಯೇ ಸಾಕು” ಎಂದು ವಾದಿಸಿದಾಗ, ಕೋರ್ಟ್ ನೇಮಿಸಿದ್ದ ವಕೀಲರು “ಆ ಹಳೆಯ ಔಷಧಿಗಳು ಆರಂಭಿಕ ಹಂತದ ಕ್ಯಾನ್ಸರ್‌ಗೆ ಕೆಲಸ ಮಾಡುವುದಿಲ್ಲ” ಎಂದು ಸಾಬೀತುಪಡಿಸಿದ್ದರು. ಈ ಕೇಸ್‌ನ ಗಂಭೀರತೆ ಪರಿಗಣಿಸಿ ಒಂದು ವಿಶೇಷ ಶನಿವಾರದಂದೂ ಇಡೀ ದಿನ ವಿಚಾರಣೆ ನಡೆಸಲಾಗಿತ್ತು. 2025ರ ವೇಳೆಗೆ ಎಲ್ಲಾ ವಾದ-ಪ್ರತಿವಾದಗಳು ಪೂರ್ಣಗೊಂಡಿದ್ದವು. ಕೇಸ್ ಪದೇ ಪದೇ “ತೀರ್ಪಿಗೆ ಸಿದ್ಧವಿರುವ” ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿತ್ತಾದರೂ, ಪ್ರತಿ ಬಾರಿಯೂ ಅದನ್ನು ಮುಂದೂಡಲಾಗುತ್ತಿತ್ತು. ಕೊನೆಯ ವಿಚಾರಣೆಯು ಜುಲೈ 2ರಂದು ನಡೆದಿದ್ದು, ಮುಂದಿನ ವಿಚಾರಣೆಯನ್ನು ಜುಲೈ 15ಕ್ಕೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಸಿಟಿಯ ಮಹಿಳೆಯರಲ್ಲೇ ಸ್ತನ ಕ್ಯಾನ್ಸರ್ ಹೆಚ್ಚಾಗುತ್ತಿರುವುದೇಕೆ? ಅಚ್ಚರಿಯ ಕಾರಣ ಇಲ್ಲಿದೆ
ಆ ಔಷಧಿಗಳು ಯಾವುವು?:
ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಅತ್ಯಂತ ಅಗತ್ಯವಿರುವ ಎರಡು ಜೀವ ರಕ್ಷಕ ಔಷಧಿಗಳ ಬೆಲೆಯೇ ಈ ಇಡೀ ಪ್ರಕರಣದ ಮುಖ್ಯ ವಿಷಯವಾಗಿದೆ. ಆ 2 ಪ್ರಮುಖ ಔಷಧಗಳೆಂದರೆ, ರಿಬೋಸಿಸಿಕ್ಲಿಬ್ (Ribociclib). ಇದರ ಬೆಲೆ ತಿಂಗಳಿಗೆ 78,468 ರೂ. ಇನ್ನೊಂದು ಔಷಧ ಅಬೆಮಾಸಿಸಿಕ್ಲಿಬ್ (Abemaciclib). ಇದರ ಬೆಲೆ ತಿಂಗಳಿಗೆ 47,752 ರೂ.ನಿಂದ 95,504 ರೂ.ಗಳಷ್ಟಿದೆ. ಇವೆರಡನ್ನೂ ತೆಗೆದುಕೊಳ್ಳಲು ತಿಂಗಳಿಗೆ ಒಂದೂವರೆ ಲಕ್ಷ ರೂ.ಗಳಷ್ಟು ವೆಚ್ಚವಾಗಲಿದೆ.
ಅರ್ಜಿ ಸಲ್ಲಿಸಿದ್ದ ಮಹಿಳೆಯು ದೇಹದಾದ್ಯಂತ ಅತ್ಯಂತ ವೇಗವಾಗಿ ಹರಡುವ ಒಂದು ವಿಶಿಷ್ಟ ಮಾದರಿಯ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಈ ದುಬಾರಿ ಔಷಧಿಗಳನ್ನು ಭಾರತದಲ್ಲೇ ಕಡಿಮೆ ಬೆಲೆಗೆ ಉತ್ಪಾದಿಸಲು ಅನುಮತಿ ನೀಡುವಂತಹ ಕಾನೂನನ್ನು ಸರ್ಕಾರ ಜಾರಿಗೆ ತರಬೇಕು ಎಂದು ಅವರು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ, ಆಕೆ ಸಾವನ್ನಪ್ಪುವವರೆಗೂ ತೀರ್ಪು ಪ್ರಕಟವಾಗಲೇ ಇಲ್ಲ. ಆಕೆಯ ಸಾವಿನ ಬಳಿಕವಾದರೂ ಆಕೆಯ ಹೋರಾಟಕ್ಕೆ ಫಲ ಸಿಗಲಿ ಎಂಬ ಆಶಯದಿಂದ ಆಕೆಯ ಆಪ್ತರ ತಂಡ ಈಗ ಕಾರ್ಯೋನ್ಮುಖವಾಗಿದೆ.
ಸ್ತನ ಕ್ಯಾನ್ಸರ್ನ ಭೀಕರತೆ:
2022ರಲ್ಲಿ ಭಾರತದಲ್ಲಿ ಅಂದಾಜು 1.9 ಲಕ್ಷ ಹೊಸ ಸ್ತನ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿದ್ದು, 98,337 ಮಹಿಳೆಯರು ಇದರಿಂದ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಮಹಿಳೆಯರ ಕ್ಯಾನ್ಸರ್ ಸಾವುಗಳಿಗೆ ಇದುವೇ ಪ್ರಮುಖ ಕಾರಣವಾಗಿದೆ. ಇತ್ತೀಚೆಗೆ ಅಂದರೆ ಫೆಬ್ರವರಿ 2026ರಲ್ಲಿ ಸರ್ಕಾರವೇ ಸಂಸತ್ತಿಗೆ ನೀಡಿರುವ ಮಾಹಿತಿಯ ಪ್ರಕಾರ, ಈ ಸಂಖ್ಯೆಯು ಶೀಘ್ರದಲ್ಲೇ ವರ್ಷಕ್ಕೆ 2.4 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:51 pm, Sat, 11 July 26