AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರಂಭಿಕ ಹಂತದಲ್ಲಿನ ಸ್ತನ ಕ್ಯಾನ್ಸರ್ ಮರುಕಳಿಸುವ ಅಪಾಯವನ್ನು ಕಡಿಮೆ ಮಾಡಲು 5 ಮಾರ್ಗಗಳು

ಭಾರತದ ಮಹಿಳೆಯರನ್ನು ಕಾಡುವ ಅತ್ಯಂತ ಸಾಮಾನ್ಯ ಮತ್ತು ಮಾರಕ ಕ್ಯಾನ್ಸರ್‌ ಎಂದರೆ ಅದು ಸ್ತನ ಕ್ಯಾನ್ಸರ್. ಈಗೀಗ ಜಾಗೃತಿಯ ಹೆಚ್ಚಳದಿಂದ ಮತ್ತು ವೈದ್ಯಕೀಯ ವ್ಯವಸ್ಥೆಯ ಆಧುನೀಕರಣದಿಂದಾಗಿ ಭಾರತದಲ್ಲಿ ಸುಮಾರು ಶೇ.76ರಷ್ಟು ಸ್ತನ ಕ್ಯಾನ್ಸರ್ ಪ್ರಕರಣಗಳು ಆರಂಭಿಕ ಹಂತದಲ್ಲಿಯೇ ಪತ್ತೆಯಾಗುತ್ತವೆ. ಆರಂಭಿಕ ಹಂತದಲ್ಲಿನ ಸ್ತನ ಕ್ಯಾನ್ಸರ್ ಮರುಕಳಿಸುವ ಅಪಾಯವನ್ನು ಕಡಿಮೆ ಮಾಡಲು ವೈದ್ಯರು 5 ಮಾರ್ಗಗಳು ಸೂಚಿಸಿದ್ದಾರೆ.

ಆರಂಭಿಕ ಹಂತದಲ್ಲಿನ ಸ್ತನ ಕ್ಯಾನ್ಸರ್ ಮರುಕಳಿಸುವ ಅಪಾಯವನ್ನು ಕಡಿಮೆ ಮಾಡಲು 5 ಮಾರ್ಗಗಳು
ಡಾ. ಸಿಎನ್ ಪಾಟೀಲ್
TV9 Web
| Updated By: ಮಾಲಾಶ್ರೀ ಅಂಚನ್​|

Updated on: Sep 16, 2025 | 4:43 PM

Share

ಭಾರತದ ಮಹಿಳೆಯರನ್ನು ಕಾಡುವ ಅತ್ಯಂತ ಸಾಮಾನ್ಯ ಮತ್ತು ಮಾರಕ ಕ್ಯಾನ್ಸರ್‌ ಎಂದರೆ ಅದು ಸ್ತನ ಕ್ಯಾನ್ಸರ್ (breast cancer). ಈಗೀಗ ಜಾಗೃತಿಯ ಹೆಚ್ಚಳದಿಂದ ಮತ್ತು ವೈದ್ಯಕೀಯ ವ್ಯವಸ್ಥೆಯ ಆಧುನೀಕರಣದಿಂದಾಗಿ ಭಾರತದಲ್ಲಿ ಸುಮಾರು ಶೇ.76ರಷ್ಟು ಸ್ತನ ಕ್ಯಾನ್ಸರ್ ಪ್ರಕರಣಗಳು ಆರಂಭಿಕ ಹಂತದಲ್ಲಿಯೇ ಪತ್ತೆಯಾಗುತ್ತವೆ. ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಎಂದರೆ ಸ್ತನದಲ್ಲಿ ಅಥವಾ ಸ್ತನದ ಹತ್ತಿರದ ಲಿಂಫ್ ನೋಡ್‌ ಗಳಲ್ಲಿ ಕ್ಯಾನ್ಸರ್ ಗಂಟು ಕಾಣಿಸಿಕೊಳ್ಳುವುದು ಮತ್ತು ದೇಹದ ಇತರ ಭಾಗಗಳಿಗೆ ಇನ್ನೂ ಹರಡಿಲ್ಲದೇ ಇರುವುದು. ಈ ಸ್ತನ ಕ್ಯಾನ್ಸರ್ 0, 1, 2 ಅಥವಾ 3ನೇ ಹಂತದಲ್ಲಿರಬಹುದು. ಆತಂಕಕಾರಿ ವಿಚಾರವೆಂದರೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ ಬಳಿಕವೂ ಈ ಕ್ಯಾನ್ಸರ್ ಮತ್ತೆ ಮರುಕಳಿಸಬಹುದು. ಹೀಗೆ ಈ ಕುರಿತ ಆತಂಕ ಹೆಚ್ಚಾಗಿದೆ.

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ ನಲ್ಲಿ ಪ್ರಕಟವಾದ ಒಂದು ಅಧ್ಯಯನ ವರದಿಯ ಪ್ರಕಾರ ಆರಂಭಿಕ ಹಂತದಲ್ಲಿ ಸ್ತನ ಕ್ಯಾನ್ಸರ್ (ಇಬಿಸಿ) ಪತ್ತೆಯಾದ ಸುಮಾರು ಶೇ.20ರಷ್ಟು ಮಹಿಳೆಯರಲ್ಲಿ ಮುಂದಿನ 10 ವರ್ಷಗಳ ಒಳಗೆ ಮತ್ತೆ ಸ್ತನ ಕ್ಯಾನ್ಸರ್ ಮರುಕಳಿಸುವಿಕೆಯನ್ನು ಎದುರಿಸುತ್ತಾರೆ. ಆರಂಭಿಕ ಹಂತದಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದ ಪ್ರತಿಯೊಬ್ಬರೂ ರೋಗನಿರ್ಣಯದ ಸಮಯದಲ್ಲಿನ ವಯಸ್ಸು, ಗೆಡ್ಡೆಯ ಗಾತ್ರ, ಕ್ಯಾನ್ಸರ್ ಇರುವ ಲಿಂಫ್ ನೋಡ್‌ ಗಳ ಸಂಖ್ಯೆ, ಜೀನ್‌ ಗಳಲ್ಲಿನ ರೂಪಾಂತರ ಅಥವಾ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗಬಹುದಾದ ಜೀನ್‌ಗಳ ಅಸಹಜ ಚಟುವಟಿಕೆ ಹೀಗೆ ಹಲವಾರು ಅಂಶಗಳ ಆಧಾರದ ಮೇಲೆ ಕ್ಯಾನ್ಸರ್ ಮರುಕಳಿಕೆಯ ಅಪಾಯವನ್ನು ಎದುರಿಸುತ್ತಾರೆ. ಹಾಗಾಗಿ ಅಪಾಯಗಳನ್ನು ಮೊದಲೇ ಅರ್ಥಮಾಡಿಕೊಳ್ಳುವುದು ಮತ್ತು ಮುಂದಿನ ದಾರಿಯ ಕುರಿತು ಸ್ಪಷ್ಟ ತಿಳುವಳಿಕೆಯನ್ನು ಹೊಂದಿರುವುದು ಬಹಳ ಮುಖ್ಯ.

ಅದೃಷ್ಟವಶಾತ್, ವೈದ್ಯಕೀಯ ಕ್ಷೇತ್ರದಲ್ಲಿ ಉಂಟಾಗಿರುವ ಅನೇಕ ಪ್ರಗತಿಗಳಿಂದಾಗಿ ಸ್ತನ ಕ್ಯಾನ್ಸರ್ ನಲ್ಲಿ ಬದುಕುಳಿದವರ ದೃಷ್ಟಿಕೋನ ಬದಲಾಗುತ್ತಿವೆ. ಹಾರ್ಮೋನ್ ಆಧಾರಿತ ಚಿಕಿತ್ಸೆಗಳಿಂದ ಹಿಡಿದು ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿಕೊಂಡ ಆರೋಗ್ಯಕರ ಅಂಗಾಂಶಗಳನ್ನು ಉಳಿಸುವ ಅತ್ಯಾಧುನಿಕ ಚಿಕಿತ್ಸೆಗಳವರೆಗೆ ಬಹಳಷ್ಟು ಚಿಕಿತ್ಸೆಗಳು ಈಗ ಲಭ್ಯವಿದೆ. ಕ್ಯಾನ್ಸರ್‌ ಅನ್ನು ಕಡಿಮೆ ಅವಧಿಯಲ್ಲಿ ನಿಯಂತ್ರಿಸುವುದರ ಮೇಲಿದ್ದ ಗಮನವು ಈಗ ದೀರ್ಘಕಾಲದಲ್ಲಿ ಕ್ಯಾನ್ಸರ್ ಮರುಕಳಿಸುವಿಕೆಯ ಅಪಾಯವನ್ನು ಕಡಿಮೆ ಮಾಡುವುದರ ಕಡೆಗೆ ಹರಿದಿದೆ. ಜೊತೆಗೆ ಜೀವನದ ಗುಣಮಟ್ಟವನ್ನು ಸಂರಕ್ಷಿಸುವ ಕಡೆಗೆ ಗಮನ ಹರಿಸಲಾಗುತ್ತಿದೆ. ಇದೆಲ್ಲದರ ಪರಿಣಾಮವಾಗಿ ಹೆಚ್ಚು ಮಹಿಳೆಯರು ದೀರ್ಘಕಾಲ ಬದುಕುವುದರ ಜೊತೆಗೆ ಉತ್ತಮವಾಗಿ ಬದುಕುವ ಅವಕಾಶವನ್ನು ಪಡೆಯುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಬೆಂಗಳೂರು ಆಸ್ಟರ್ ಹಾಸ್ಪಿಟಲ್ ನ ಡಿಪಾರ್ಟ್‌ಮೆಂಟ್ ಆಫ್ ಮೆಡಿಕಲ್ ಆಂಕಾಲಜಿಯ ಎಚ್‌ಓಡಿ ಮತ್ತು ಲೀಡ್ ಕನ್ಸಲ್ಟಂಟ್ ಡಾ. ಸಿಎನ್ ಪಾಟೀಲ್ ಅವರು,* “ಹಲವಾರು ಮಂದಿ ಆರಂಭಿಕ ಹಂತದಲ್ಲಿ ಸ್ತನ ಕ್ಯಾನ್ಸರ್‌ ಅನ್ನು ಪತ್ತೆಹಚ್ಚಿದರೆ ಅದು ಸಂಪೂರ್ಣವಾಗಿ ಗುಣವಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದರಿಂದ ಫಲಿತಾಂಶ ಉತ್ತಮವಾಗಬಹುದಾದರೂ ಕ್ಯಾನ್ಸರ್ ಮರುಕಳಿಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿಯೇ ಬಹಳ ಜಾಗರೂಕರಾಗಿರಬೇಕು ಮತ್ತು ಅತ್ಯಾಧುನಿಕ ಚಿಕಿತ್ಸಾ ಆಯ್ಕೆಗಳ ಕುರಿತು ಮುಕ್ತವಾಗಿ ಚರ್ಚೆ ನಡೆಸಬೇಕು, ತಿಳಿದುಕೊಳ್ಳಬೇಕು. ನಿಮಗೆ ಎದುರಾಗಬಹುದಾದ ಅಪಾಯವನ್ನು ಅರ್ಥಮಾಡಿಕೊಂಡು ನಿಮ್ಮ ವೈದ್ಯಕೀಯ ತಂಡದ ಜೊತೆ ನಿಕಟವಾಗಿ ಕೆಲಸ ಮಾಡುವ ಮೂಲಕ, ಕ್ಯಾನ್ಸರ್ ಮರುಕಳಿಸುವಿಕೆಯ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಮತ್ತು ಉತ್ತಮ ಆರೋಗ್ಯವನ್ನು ಪಾಲಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬಹುದು” ಎಂದು ಹೇಳಿದರು.

ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಮರುಕಳಿಸುವಿಕೆಯ ಅಪಾಯವನ್ನು ಕಡಿಮೆ ಮಾಡಲು ಇಲ್ಲಿವೆ 5 ಮಾರ್ಗಗಳು:

1.ಆರೋಗ್ಯಕರ ದೇಹ ತೂಕ ಕಾಪಾಡಿಕೊಳ್ಳಿ ಮತ್ತು ಕ್ರಿಯಾಶೀಲ ಜೀವನಶೈಲಿ ಪಾಲಿಸಿ

ಅತಿಯಾದ ದೇಹ ತೂಕ ಮತ್ತು ನಿಷ್ಕ್ರಿಯ ಜೀವನಶೈಲಿಯಿಂದ ಸ್ತನ ಕ್ಯಾನ್ಸರ್ ಮರುಕಳಿಸುವಿಕೆಯ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ಹಾರ್ಮೋನ್‌ಗಳನ್ನು ನಿಯಂತ್ರಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ನಿಯಮಿತ ವ್ಯಾಯಾಮ ಮಾಡುವುದರಿಂದ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದರಿಂದ ಸಹಾಯವಾಗುತ್ತದೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್‌ ಗಳಿಂದ ಕೂಡಿದ ಸಮತೋಲಿತ ಆಹಾರ ಸೇವನೆ ಕಡೆಗೆ ಗಮನ ಹರಿಸಬೇಕು. ಈ ಮೂಲಕ ಉತ್ತಮ ತೂಕ ಇರುವಂತೆ ನೋಡಿಕೊಳ್ಳಬೇಕು. ಇವೆಲ್ಲವೂ ಕ್ಯಾನ್ಸರ್ ಮರಳಿ ಬರುವ ಸಾಧ್ಯತೆಯನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತವೆ.

2. ನಿಯಮಿತವಾಗಿ ಫಾಲೋ-ಅಪ್‌ ಮಾಡಿ ಮತ್ತು ತಪಾಸಣೆ ಮಾಡಿಸಿಕೊಳ್ಳಿ

ಕ್ಯಾನ್ಸರ್ ಮರುಕಳಿಸುವಿಕೆಯನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿದರೆ ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು ಮತ್ತು ಉತ್ತಮ ಫಲಿತಾಂಶಗಳಿಗೆ ಕಾರಣವಾಗಬಹುದು. ಇಮೇಜಿಂಗ್, ಲ್ಯಾಬ್-ಟೆಸ್ಟ್‌ ಗಳು ಮತ್ತು ದೈಹಿಕ ಪರೀಕ್ಷೆಗಳನ್ನು ನಡೆಸಲು ನಿಮ್ಮ ಫಾಲೋ-ಅಪ್ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿ. ಹಾಗೆ ಮಾಡುವುದರಿಂದ ದೇಹದಲ್ಲಾಗುವ ಯಾವುದೇ ಬದಲಾವಣೆಗಳನ್ನು ಆರಂಭದಲ್ಲಿಯೇ ಕಂಡುಹಿಡಿಯಲು ಸಹಾಯವಾಗುತ್ತದೆ. ಗಂಟು, ನೋವು ಅಥವಾ ವಿವರಿಸಲಾಗದ ಆಯಾಸ ಹೀಗೆ ಯಾವುದೇ ಹೊಸ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ವೈದ್ಯಕೀಯ ತಜ್ಞರನ್ನು ಭೇಟಿಯಾಗಿ ಅವರ ಅಭಿಪ್ರಾಯ ಪಡೆಯುವುದು ಮುಖ್ಯ.

3. ಅತ್ಯಾಧುನಿಕ ಚಿಕಿತ್ಸೆಗಳ ಕುರಿತು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ

ಆರಂಭಿಕ ಹಂತದಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದ ಮಹಿಳೆಯರಿಗೆ ಹಾರ್ಮೋನ್ ಆಧಾರಿತ ಔಷಧಿಗಳು ಮತ್ತು ನಿರ್ದಿಷ್ಟ ಚಿಕಿತ್ಸೆ ಮುಂತಾದ ಅತ್ಯಾಧುನಿಕ ಚಿಕಿತ್ಸೆಗಳನ್ನು ನೀಡುವ ಮೂಲಕ ಅವರ ಜೀವನದ ಗುಣಮಟ್ಟವನ್ನು ಕಾಪಾಡಿಕೊಂಡು ಕ್ಯಾನ್ಸರ್ ಮರುಕಳಿಸುವಿಕೆಯ ಅಪಾಯವನ್ನು ಕಡಿಮೆ ಮಾಡಬಹುದು. ಭಾರತದಲ್ಲಿ ಇನ್ನೂ ಚಿಕಿತ್ಸೆ ಲಭ್ಯತೆ ಮತ್ತು ಜಾಗೃತಿ ಉಂಟುಮಾಡುವ ಅಗತ್ಯ ಬಹಳ ಇದೆ. ಬದುಕುವ ಕುರಿತು ಯೋಚನೆ ಮಾಡುವುದಕ್ಕಿಂತ ಬದುಕುಳಿಯುವ ಕುರಿತು ಆಲೋಚಿಸುವುದು ಬಹಳ ಮುಖ್ಯ. ಯಶಸ್ವಿ ಚಿಕಿತ್ಸೆ ಜೊತೆಗೆ ದೀರ್ಘಕಾಲದ ಆರೈಕೆ, ಭಾವನಾತ್ಮಕ ಆರೋಗ್ಯ ಮತ್ತು ಜೀವನದ ಗುಣಮಟ್ಟ ಆದ್ಯತೆಯಾಗಿರಬೇಕು. ರೋಗಿಗಳು “ನನಗೆ ದೊರೆಯಬಹುದಾದ ಅತ್ಯಾಧುನಿಕ ಚಿಕಿತ್ಸಾ ಆಯ್ಕೆಗಳೇನು?” ಎಂಬಂತಹ ಪ್ರಶ್ನೆಗಳನ್ನು ಕೇಳುವಂತೆ ಅವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು.

4. ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕೆ ಆದ್ಯತೆ ನೀಡಿ

ದೈಹಿಕ ಚೇತರಿಕೆ ಮತ್ತು ದೀರ್ಘಕಾಲ ಬದುಕುಳಿಯಲು ಭಾವನಾತ್ಮಕ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಸಾಮಾಜಿಕ ಬೆಂಬಲ, ಕೌನ್ಸೆಲಿಂಗ್ ಮತ್ತು ಒತ್ತಡ ನಿರ್ವಹಣೆ ಮೂಲಕ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು ಮತ್ತು ಕ್ಯಾನ್ಸರ್ ಮರುಕಳಿಸುವಿಕೆಯ ಅಪಾಯವನ್ನು ಕಡಿಮೆ ಮಾಡಬಹುದು. ಆತಂಕ, ಖಿನ್ನತೆ ಅಥವಾ ಕ್ಯಾನ್ಸರ್ ಮರುಕಳಿಸುವಿಕೆಯ ಭಯದಿಂದ ಒದ್ದಾಡುತ್ತಿದ್ದರೆ, ಮನೋವೈದ್ಯರನ್ನು ಸಂಪರ್ಕಿಸಲು ಹಿಂಜರಿಯಬೇಡಿ.

5. ತಂಬಾಕು ಸೇವನ ತಪ್ಪಿಸಿ ಮತ್ತು ಮದ್ಯಪಾನವನ್ನು ಮಿತಿಗೊಳಿಸಿ

ಧೂಮಪಾನ ಮತ್ತು ಅತಿಯಾದ ಮದ್ಯಪಾನವು ಸ್ತನ ಕ್ಯಾನ್ಸರ್ ಮರುಕಳಿಸುವಿಕೆಯ ಅಪಾಯವನ್ನು ಹೆಚ್ಚಿಸಬಹುದು. ಹಾಗಾಗಿ ನೀವು ಧೂಮಪಾನ ಮಾಡುತ್ತಿದ್ದರೆ ಅದನ್ನು ಬಿಡಬೇಕು. ಅದಕ್ಕಾಗಿ ಕೌನ್ಸೆಲಿಂಗ್ ಅಥವಾ ಇತರ ಕಾರ್ಯಕ್ರಮಗಳ ಬೆಂಬಲವನ್ನು ಪಡೆಯಬಹುದು. ಮದ್ಯಪಾನವನ್ನು ಮಿತಿಗೊಳಿಸಿ ಅಥವಾ ಸಾಧ್ಯವಾದರೆ ಸಂಪೂರ್ಣವಾಗಿ ಬಿಟ್ಟುಬಿಡಿ. ಇದನ್ನೆಲ್ಲಾ ನಿಯಂತ್ರಣಕ್ಕೆ ತರಲು ವೈಯಕ್ತಿಕ ಮಾರ್ಗದರ್ಶನ ಪಡೆಯಲು ನಿಮ್ಮ ವೈದ್ಯರ ತಂಡದೊಂದಿಗೆ ಚರ್ಚಿಸಿ.

ಇದನ್ನೂ ಓದಿ: ಜೀವನಶೈಲಿಯ ಸಣ್ಣ ಬದಲಾವಣೆಯೊಂದಿಗೆ 30 ಕೆಜಿಗಳಷ್ಟು ತೂಕ ಇಳಿಸಿಕೊಂಡ ನ್ಯೂರಾಲಜಿಸ್ಟ್

ಕ್ಯಾನ್ಸರ್ ಮರುಕಳಿಸುವಿಕೆಯ ಅಪಾಯ ಇರುವುದೇನೋ ನಿಜ, ಆದರೆ ಜಾಗರೂಕತೆ, ಚಿಕಿತ್ಸೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಮತ್ತು ಆರೋಗ್ಯ ಕಾಪಾಡಲು ಸಮಗ್ರ ವಿಧಾನ ಪಾಲಿಸುವುದು ಇತ್ಯಾದಿಗಳ ಮೂಲಕ ಈ ಅಪಾಯದಿಂದ ದೂರ ಸರಿಯಬಹುದಾಗಿದೆ. ನಿಮ್ಮ ವೈದ್ಯರ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡುವುದರ ಮೂಲಕ, ಅತ್ಯಾಧುನಿಕ ಚಿಕಿತ್ಸೆಗಳ ಕುರಿತು ಚರ್ಚಿಸುವುದರ ಮೂಲಕ, ಉತ್ತಮ ಜೀವನಶೈಲಿ ಪಾಲಿಸುವುದರ ಮೂಲಕ ಮತ್ತು ದೈಹಿಕ ಹಾಗೂ ಮಾನಸಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವುದರ ಮೂಲಕ ಕ್ಯಾನ್ಸರ್ ಮರುಕಳಿಸುವಿಕೆಯ ಅಪಾಯವನ್ನು ಕಡಿಮೆ ಮಾಡಬಹುದು. ಹಾಗಾಗಿ ಉತ್ತಮ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಳ್ಳಬೇಕಾದುದು ಅವಶ್ಯ ಮತ್ತು ಅನಿವಾರ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ