ದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಮಸೀದಿ ವಿವಾದದ ಬೆನ್ನಿಗೇ ಮತ್ತೊಂದು ಮಸೀದಿ ವಿವಾದ ಗರಿಗೆದರುವ ಎಲ್ಲ ಸಾಧ್ಯತೆಗಳು ಕಾಣಿಸಿಕೊಂಡಿವೆ. ಆಗ್ರಾದ ಶಾಹಿ ಜಾಮಾ ಮಸೀದಿಯಲ್ಲಿ (Agra Jama Masjid Petition) ಉತ್ಖನನ ನಡೆಸಲು ಪುರಾತತ್ವ ಇಲಾಖೆಗೆ ಸೂಚಿಸಬೇಕು ಎಂದು ಕೋರಿ ಅಲಹಾಬಾದ್ ಹೈಕೋರ್ಟ್ಗೆ (Allahabad High Court ) ವಕೀಲ ವರುಣ್ ಕುಮಾರ್ ಎನ್ನುವವರು ಅರ್ಜಿ ಸಲ್ಲಿಸಿದ್ದಾರೆ.
ಮಂದಿರವನ್ನು ಕೆಡವಿ, ಅದೇ ಜಾಗದಲ್ಲಿ ಜಾಮಾ ಮಸೀದಿಯನ್ನು ನಿರ್ಮಿಸಲಾಗಿದೆ. ಮಸೀದಿಯ ಮೆಟ್ಟಿಲುಗಳ ಅಡಿಯಲ್ಲಿ ಠಾಕೂರ್ ಕೇಶವ್ ದೇವ್ (ದೇವರ) ವಿಗ್ರಹವಿದೆ (Thakur Keshav Dev Ji). ವೈಜ್ಞಾನಿಕ ರೀತಿಯಲ್ಲಿ ಉತ್ಖನನ ಮಾಡಿದರೆ ವಿಗ್ರಹ ಲಭ್ಯವಾಗಲಿದೆ ಎಂದು ಅವರು ಮನವಿ ಮಾಡಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವರುಣ್ ಕುಮಾರ್ ಅವರು ಏಪ್ರಿಲ್ 14, 2021ರಂದು ಮಥುರಾದ ಸಿವಿನ್ ನ್ಯಾಯಾಧೀಶರಿಗೆ ಇಂಥದ್ದೇ ಅರ್ಜಿ ಸಲ್ಲಿಸಿದ್ದರು. ಆಗ್ರಾದ ಶಾಹಿ ಜಾಮಾ ಮಸೀದಿಯ ಮೆಟ್ಟಿಲುಗಳ ಅಡಿಯಲ್ಲಿ ವಿಗ್ರಹವೊಂದನ್ನು ಅಡಗಿಸಿ ಇಟ್ಟಿರುವ ಶಂಕೆಯಿದೆ. ಹೀಗಾಗಿ ಅಲ್ಲಿ ಉತ್ಖನನ ನಡೆಸಬೇಕು ಎಂದು ವರುಣ್ ಕೋರಿದ್ದರು. ಆದರೆ ಈ ಅರ್ಜಿಯ ವಿಚಾರಣೆ ಇನ್ನೂ ಆರಂಭವಾಗಿಲ್ಲ.
ಉತ್ಖನನ ಬೇಡಿಕೆ ಕುರಿತು ಪ್ರತಿಕ್ರಿಯಿಸಿರುವ ಶಾಹಿ ಜಾಮಾ ಮಸೀದಿಯ ಇಮಾಮ್, ‘ಈ ಮಸೀದಿಯನ್ನು ನಿರ್ಮಿಸಿದ್ದು ಮೊಗಲ್ ದೊರೆ ಶಹಜಹಾನ್ರ ಮಗಳು ಜಹಾನ್ ಆರಾ. ತನ್ನ ಮದುವೆಗೆಂದು ಮೀಸಲಿಟ್ಟಿದ್ದ ಹಣವನ್ನು ಮಸೀದಿಗಾಗಿ ಅವರು ಖರ್ಚು ಮಾಡಿದ್ದರು’ ಎಂದು ವಿವರಿಸಿದರು. ಮಸೀದಿಯಲ್ಲಿ ವಿಗ್ರಹವೊಂದನ್ನು ಅಡಗಿಸಿಡಲಾಗಿದೆ. ದೇವಸ್ಥಾನದ ಅವಶೇಷಗಳ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂಬ ಆರೋಪಗಳ ಕುರಿತು ವಿವರಣೆ ನೀಡಿದ ಅವರು, ‘ಇಂಥ ಆರೋಪಗಳಿಗೆ ಯಾವುದೇ ಪುರಾವೆಯಿಲ್ಲ. ಕೇವಲ ಊಹಾಪೋಹ ಆಧರಿಸಿ ಇಡೀ ಮಸೀದಿಯನ್ನು ಕೆಡವುವುದು ಸರಿಯಲ್ಲ’ ಎಂದು ಹೇಳಿದರು.
Published On - 10:56 am, Wed, 6 July 22