Kishan Reddy: ‘ಧರಣಿ’ ಪೋರ್ಟಲ್ನಿಂದ ಹೊಸ ಸಮಸ್ಯೆ; ಬಿಆರ್‌ಎಸ್ ಸರ್ಕಾರದ ವಿರುದ್ಧ ಕಿಶನ್ ರೆಡ್ಡಿ ಕಿಡಿ
ಕೆಸಿಆರ್ ಕ್ರಮಗಳು ನಿಜಾಮನ ಆಡಳಿತ ವಿಧಾನಗಳನ್ನು ಮುಂದುವರಿಸುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಕಿಶನ್ ರೆಡ್ಡಿ ಟೀಕಿಸಿದ್ದಾರೆ.
ಹೈದರಾಬಾದ್, ಜುಲೈ 17: ಬಿಆರ್‌ಎಸ್ ಸರ್ಕಾರದ ‘ಧರಣಿ’ ಪೋರ್ಟಲ್ (Dharani Portal) ಹಳೆಯ ಸಮಸ್ಯೆಗಳನ್ನು ಉಲ್ಬಣಗೊಳಿಸಿರುವುದಲ್ಲದೆ ಹೊಸ ಸಮಸ್ಯೆಗಳನ್ನು ಸೃಷ್ಟಿಸಿದೆ ಎಂದು ತೆಲಂಗಾಣ (Telangana) ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಕಿಶನ್ ರೆಡ್ಡಿ (Kishan Reddy) ವಾಗ್ದಾಳಿ ನಡೆಸಿದ್ದಾರೆ. ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅವರು, ‘ಧರಣಿ’ಯಲ್ಲಿ ಪರಿಹರಿಸಬೇಕಾದ ಅನೇಕ ಸಮಸ್ಯೆಗಳಿವೆ ಎಂಬುದನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳಬೇಕು. ಸಮಸ್ಯೆಗಳನ್ನು ಒಪ್ಪಿಕೊಳ್ಳುವುದು ಮತ್ತು ಸರಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಸರ್ಕಾರವು ತನ್ನ ತಪ್ಪುಗಳನ್ನು ಅರಿತು ಸರಿಪಡಿಸಿಕೊಳ್ಳಲು ಇದು ಸೂಕ್ತ ಸಮಯ ಎಂದು ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ‘ಸ್ವಾಮಿತ್ವ (SWAMITVA)’ ಯೋಜನೆಯ ಮೂಲಕ ಬಡವರಿಗೆ ಆಸ್ತಿ ಪ್ರಮಾಣಪತ್ರ ಮತ್ತು ಹಕ್ಕು ಪತ್ರಗಳನ್ನು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.
ಕೆಸಿಆರ್ ಸರ್ಕಾರದ ಅದಕ್ಷತೆಯಿಂದ ರಾಜ್ಯದ 75 ಲಕ್ಷ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಮತ್ತು ಸಾಮಾನ್ಯ ನಾಗರಿಕರು ಕಷ್ಟಪಟ್ಟು ದುಡಿದ ಜಮೀನುಗಳನ್ನು ಅಕ್ರಮ ಒತ್ತುವರಿಯಿಂದ ರಕ್ಷಿಸಲಾಗುವುದು ಎಂದು ಭರವಸೆ ನೀಡುವ ಬದಲು, ಖಾಸಗಿ ಕಂಪನಿ ಜಾಹೀರಾತು ನೀಡುವಂತೆ ಮಾಡುವ ನಡೆ ಖೇದಕರ. ಖಾಸಗಿ ಸಂಸ್ಥೆಯೊಂದು ದಿನಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸುವಂತೆ ಮಾಡುವ ಮೂಲಕ ವಿವಾದಿತ ‘ಧರಣಿ’ ವಿಚಾರದಲ್ಲಿ ಬಿಆರ್‌ಎಸ್ ಸರಕಾರ ಹಾಗೂ ಕಲ್ವಕುಂಟ್ಲ ಕುಟುಂಬ ಕೈ ತೊಳೆದುಕೊಂಡಿರುವುದು ಸ್ಪಷ್ಟವಾಗಿದೆ. ಧರಣಿ ಪೋರ್ಟಲ್‌ನಲ್ಲಿನ ಲೋಪದೋಷಗಳಿಗೆ ಉತ್ತರಿಸುವ ಜವಾಬ್ದಾರಿ ತೆಲಂಗಾಣ ಸರ್ಕಾರಕ್ಕಿದೆ. ಸಮಸ್ಯೆಗಳನ್ನು ಬಗೆಹರಿಸದೆ ಬೇರೆಯವರ ಮೇಲೆ ತಪ್ಪು ಹೊರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಶನ್ ರೆಡ್ಡಿ ದೂರಿದ್ದಾರೆ.
ಧರಣಿ ಪೋರ್ಟಲ್‌ನಲ್ಲಿನ ಸಮಸ್ಯೆಗಳನ್ನು ಗುರುತಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ತಂತ್ರಜ್ಞಾನದ ನೆರವಿನಿಂದ ಎಲ್ಲಾ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸಬಹುದು ಎಂಬ ಕೆಸಿಆರ್ ಸರ್ಕಾರದ ಆಲೋಚನೆಯಿಂದಾಗಿ ಈ ಸಮಸ್ಯೆ ದೊಡ್ಡದಾಗಿದೆ. ಜಿಲ್ಲಾಧಿಕಾರಿಗಳ ಮೇಲೆ ಹೊರೆ ಹೊರಿಸಿ ಹೊಸ ಸಮಸ್ಯೆಗಳು ಸೃಷ್ಟಿಯಾಗಿವೆ. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಸ್ವಾಮಿತ್ವ ಯೋಜನೆ ಮೂಲಕ ಬಡವರಿಗೆ ತೊಂದರೆ ರಹಿತ ಆಸ್ತಿ ಪ್ರಮಾಣ ಪತ್ರ ನೀಡುತ್ತಿದ್ದರೆ, ಬಿಆರ್‌ಎಸ್ ಸರ್ಕಾರ ಭೂ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗುತ್ತಿದೆ ಎಂದು ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸಚಿವ ಕಿಶನ್ ರೆಡ್ಡಿಗೆ ಪ್ರತಿಷ್ಠಿತ ‘ಗ್ಲೋಬಲ್ ಇನ್ಕ್ರೆಡಿಬಲ್ ಇಂಕ್ ಲೀಡರ್ಶಿಪ್’ ಪ್ರಶಸ್ತಿ ಪ್ರದಾನ
ಕಳೆದ 9 ವರ್ಷಗಳಲ್ಲಿ ಬಿಆರ್‌ಎಸ್ ಪ್ರಜಾಪ್ರಭುತ್ವ ಮತ್ತು ನಿರಂಕುಶ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಕಿಶನ್ ರೆಡ್ಡಿ ಟೀಕಿಸಿದ್ದಾರೆ. ಜನರಿಗಾಗಿ ದುಡಿಯುವ ಮಾಧ್ಯಮ ಸಂಸ್ಥೆಗಳನ್ನು ನಿಷೇಧಿಸುವ ಕೆಸಿಆರ್ ನಿರ್ಧಾರದ ಕಹಿ ನೆನಪು ಇಂದಿಗೂ ಹಸಿಯಾಗಿದೆ. ಪತ್ರಕರ್ತರನ್ನು 10 ಕಿಲೋಮೀಟರ್ ದೂರದಲ್ಲಿ ಸಮಾಧಿ ಮಾಡುವುದಾಗಿ ಕೆಸಿಆರ್ ಬೆದರಿಕೆ ಹಾಕಿದ್ದನ್ನು ಕಿಶನ್ ರೆಡ್ಡಿ ಮರೆತಿಲ್ಲ. ಕೆಸಿಆರ್ ಕ್ರಮಗಳು ನಿಜಾಮನ ಆಡಳಿತ ವಿಧಾನಗಳನ್ನು ಮುಂದುವರಿಸುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ ಎಂದು ರೆಡ್ಡಿ ಟೀಕಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ