ಸಿಎಎ ಎಂದರೇನು? ಮುಸ್ಲಿಮರು ವಿರೋಧಿಸುತ್ತಿರುವುದು ಯಾಕೆ? ಎನ್​ಆರ್​ಸಿಗೂ ಅದಕ್ಕೂ ಏನು ಸಂಬಂಧ? ಇಲ್ಲಿದೆ ವಿವರ

|

Updated on: Mar 12, 2024 | 11:20 AM

Know What is CAA: ಸಿಟಿಜನ್ ಅಮೆಂಡ್ಮೆಂಟ್ ಆ್ಯಕ್ಟ್ ಅಥವಾ ಸಿಎಎ ಎಂಬುದು ಭಾರತಕ್ಕೆ ನಿರಾಶ್ರಿತರಾಗಿ ಬಂದು ನೆಲಸಿರುವ ನೆರೆಯ ದೇಶಗಳ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾರತೀಯ ಪೌರತ್ವ ಕಲ್ಪಿಸುವ ಕಾಯ್ದೆಯಾಗಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮೂಲದ ಹಿಂದೂ, ಸಿಖ್, ಬೌದ್ಧ, ಕ್ರೈಸ್ತ, ಜೈನ ಮತ್ತು ಪಾರ್ಸಿ ಜನರಿಗೆ ಸಿಎಎ ಅಡಿ ಭಾರತೀಯ ಪೌರತ್ವ ಅವಕಾಶ ಸಿಗುತ್ತದೆ. ಧಾರ್ಮಿಕ ಆಧಾರದಲ್ಲಿ ಪೌರತ್ವ ನೀಡುವುದು ತಪ್ಪು ಎಂಬುದು ಮುಸ್ಲಿಮ್ ಹಾಗೂ ವಿಪಕ್ಷಗಳ ಆಕ್ಷೇಪವಾಗಿದೆ.

ಸಿಎಎ ಎಂದರೇನು? ಮುಸ್ಲಿಮರು ವಿರೋಧಿಸುತ್ತಿರುವುದು ಯಾಕೆ? ಎನ್​ಆರ್​ಸಿಗೂ ಅದಕ್ಕೂ ಏನು ಸಂಬಂಧ? ಇಲ್ಲಿದೆ ವಿವರ
ಸಿಎಎ
Follow us on

ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳ (CAA rules) ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸಿಎಎ ವಿಚಾರ ಕಳೆದ ನಾಲ್ಕೈದು ವರ್ಷದಿಂದಲೂ ಸಾಕಷ್ಟು ಚರ್ಚೆ, ಪ್ರತಿಭಟನೆಗೆ ಕಾರಣವಾಗಿದೆ. ಅದರಲ್ಲೂ ಎನ್​ಆರ್​ಸಿ ಮತ್ತು ಸಿಎಎ ಸಂಯೋಜನೆ ವಿರುದ್ಧ ಮುಸ್ಲಿಮರು ಹಾಗೂ ಹಲವು ವಿಪಕ್ಷಗಳು ತೀವ್ರವಾಗಿ ಆಕ್ಷೇಪಿಸುತ್ತಿವೆ. ಸಿಎಎ ಎಂದರೇನು, ಎನ್​ಆರ್​ಸಿಗೂ ಇದಕ್ಕೂ ಏನು ಸಂಬಂಧ, ಕೆಲ ಮುಸ್ಲಿಮರು ಯಾಕೆ ವಿರೋಧಿಸುತ್ತಿದ್ದಾರೆ, ಆ ವಿರೋಧದಲ್ಲಿ ಸತ್ಯಾಸತ್ಯತೆ ಎಷ್ಟು ಇತ್ಯಾದಿ ಕೆಲ ವಿಚಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸಿಎಎ ಎಂದರೇನು?

ಪೌರತ್ವ ತಿದ್ದುಪಡಿ ಮಸೂದೆ ಭಾರತದ ನೆರೆಯ ದೇಶಗಳಾದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಧಾರ್ಮಿಕವಾಗಿ ದೌರ್ಜನ್ಯಕ್ಕೊಳಗಾಗಿ 2014ರ ಡಿಸೆಂಬರ್ 31ಕ್ಕೆ ಮುಂಚೆ ಭಾರತಕ್ಕೆ ವಲಸೆ ಅಥವಾ ನಿರಾಶ್ರಿತರಾಗಿ ಬಂದ ಆರು ಅಲ್ಪಸಂಖ್ಯಾತ ಸಮುದಾಯಗಳ ಜನರಿಗೆ ಭಾರತೀಯ ಪೌರತ್ವ ಹೊಂದುವ ಅವಕಾಶ ಕೊಡುತ್ತದೆ. ಆ ಮೂರು ಮುಸ್ಲಿಮ್ ದೇಶಗಳಲ್ಲಿನ ಹಿಂದೂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಜನರಿಗೆ ಈ ಅವಕಾಶ ಕೊಡಲಾಗಿದೆ.

ಇದನ್ನೂ ಓದಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅಧಿಸೂಚನೆ ಜಾರಿಗೊಳಿಸಿದ ಕೇಂದ್ರ ಸರ್ಕಾರ!

ಸಿಎಎಗೆ ಮುಸ್ಲಿಮರ ವಿರೋಧ ಯಾಕೆ?

ಸಿಎಎಯಲ್ಲಿ ಧಾರ್ಮಿಕವಾಗಿ ತಾರತಮ್ಯ ಮಾಡಲಾಗಿದೆ. ಈ ಕಾಯ್ದೆ ಅಡಿಯಲ್ಲಿ ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಮುಸ್ಲಿಮರಿಲ್ಲ. ಶ್ರೀಲಂಕಾ ಮೊದಲಾದ ನೆರೆಯ ದೇಶಗಳಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಿದ್ದಾರೆ. ಅವರಿಗೆ ಯಾಕೆ ಪೌರತ್ವ ಕೊಡುತ್ತಿಲ್ಲ? ಮುಸ್ಲಿಮರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ ಎಂಬದು ಕೆಲ ವರ್ಗದ ಮುಸ್ಲಿಮರಿಂದ ಬರುತ್ತಿರುವ ಆಕ್ಷೇಪವಾಗಿದೆ. ಹಾಗೆಯೇ, ಮುಸ್ಲಿಮ್ ದೇಶಗಳಿಂದ ಮುಸ್ಲಿಮ್ ಸಮುದಾಯದವರೂ ಕೂಡ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ಬಂದವರಿದ್ದಾರೆ. ಅವರನ್ನು ಪೌರತ್ವದಿಂದ ಹೊರಗಿಟ್ಟರೆ ನಡುನೀರಲ್ಲಿ ಕೈಬಿಟ್ಟಂತೆ. ಪೌರತ್ವ ಅವಕಾಶ ಎಲ್ಲರಿಗೂ ಸಮಾನವಾಗಿರಬೇಕು. ಕೆಲ ನಿರ್ದಿಷ್ಟ ಸಮುದಾಯಗಳಿಗೆ ಮನ್ನಣೆ ಕೊಡುವುದು ತಪ್ಪು ಎಂಬುದು ಕೆಲ ವಿಪಕ್ಷಗಳ ಆಕ್ಷೇಪವೂ ಆಗಿದೆ.

ಆದರೆ, ಮುಸ್ಲಿಮ್ ದೇಶಗಳಿಂದ ವಲಸೆ ಬಂದ ಮುಸ್ಲಿಮರು ಧರ್ಮ ಕಾರಣಕ್ಕೆ ದೌರ್ಜನ್ಯಕ್ಕೊಳಗಾದವರಲ್ಲ. ಸಿರಿಯಾ, ಅಫ್ಘಾನಿಸ್ತಾನದಲ್ಲಿ ಕಲಹಗಳಿಂದಾಗಿ ಮುಸ್ಲಿಮರು ಭಾರತಕ್ಕೆ ಬಂದಿದ್ದಾರೆ. ಅಲ್ಲಿನ ಪರಿಸ್ಥಿತಿ ಸುಧಾರಿಸಿದ ಬಳಿಕ ಇವರು ವಾಪಸ್ ಹೋಗಬಹುದು. ಆದರೆ, ಹಿಂದೂ, ಕ್ರೈಸ್ತ, ಬೌದ್ಧ ಇತ್ಯಾದಿ ಅಲ್ಪಸಂಖ್ಯಾತ ಸಮುದಾಯದ ಜನರು ಎಲ್ಲಿಗೆ ಹೋಗುತ್ತಾರೆ? ಅವರಿಗೆ ಭಾರತೀಯ ಪೌರತ್ವ ನೀಡುವುದು ನ್ಯಾಯಯುತ ಎಂಬುದು ಸರ್ಕಾರದ ವಾದ.

ಇದನ್ನೂ ಓದಿ: ಮಿಷನ್ ದಿವ್ಯಾಸ್ತ್ರ ಯಶಸ್ವಿ ಉಡಾವಣೆ: ಡಿಆರ್​ಡಿಒಗೆ ಪ್ರಧಾನಿ ಮೋದಿ ಅಭಿನಂದನೆ

ಎನ್​ಆರ್​ಸಿ ಮತ್ತು ಸಿಎಎ ಸಂಯೋಜನೆ ಅಪಾಯಕಾರಿ ಎನ್ನುವ ವಿರೋಧಿಗಳು

ಎನ್​ಆರ್​ಸಿ ಎನ್ನುವುದು ನಾಗರಿಕರ ನೊಂದಣಿ ಯೋಜನೆಯಾಗಿದೆ. ಇದು ದೇಶದ ಎಲ್ಲಾ ಪ್ರಜೆಗಳ ಅಧಿಕೃತ ಪಟ್ಟಿಯಾಗಿರುತ್ತದೆ. ಅಕ್ರಮವಾಗಿ ವಲಸೆ ಬಂದವರನ್ನು ಗುರುತಿಸಿ ಹೊರಗಿಡುವುದು ಇದರ ಮೂಲ ಉದ್ದೇಶ. ಅದರಲ್ಲೂ ಮಯನ್ಮಾರ್ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದ ಜನರನ್ನು ಗುರುತಿಸಲು ಈ ಎನ್​ಆರ್​ಸಿ ಸಹಾಯವಾಗುವ ನಿರೀಕ್ಷೆ ಇದೆ. ಬಾಂಗ್ಲಾದೇಶೀ ಮತ್ತು ರೋಹಿಂಗ್ಯಾ ಮುಸ್ಲಿಮರು ಭಾರತದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ನೆಲಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:45 pm, Mon, 11 March 24