ಇಂಗ್ಲೆಂಡ್ ತಂಡದ ವಿರುದ್ಧ ಐವರು ಯುವಕರ ಪ್ರತಿಭಟನೆ; ಕ್ರಿಕೆಟ್ ಮೈದಾನದಲ್ಲಿ ಅನುಚಿತ ವರ್ತನೆ ತೋರಲು ಇತಿಹಾಸ ಕಾರಣ!

| Updated By: ganapathi bhat

Updated on: Apr 06, 2022 | 7:06 PM

ಸೋಮವಾರ (ಮಾ.15) ಸಂಜೆ 5 ಗಂಟೆಯ ವೇಳೆಗೆ ಘಟನೆ ನಡೆದಿದೆ. ಅನುಚಿತ ವರ್ತನೆ ತೋರಿದ ಐವರನ್ನೂ ಪೊಲೀಸರು ಬಂಧಿಸಿದ್ದಾರೆ. ಇಂದು (ಮಾ.16) ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಂಗ್ಲೆಂಡ್ ತಂಡದ ವಿರುದ್ಧ ಐವರು ಯುವಕರ ಪ್ರತಿಭಟನೆ; ಕ್ರಿಕೆಟ್ ಮೈದಾನದಲ್ಲಿ ಅನುಚಿತ ವರ್ತನೆ ತೋರಲು ಇತಿಹಾಸ ಕಾರಣ!
ಪುಣೆಯ ಗಹುಂಜೆ ಮೈದಾನ
Follow us on

ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರು ಏಕದಿನ ಪಂದ್ಯಗಳು ನಡೆಯಲಿರುವ ಪುಣೆಯ ಗಹುಂಜೆ ಮೈದಾನವು ಅಭಿಮಾನಿಗಳ ಅತಿರೇಕದ ವರ್ತನೆಗೆ ಸಾಕ್ಷಿಯಾಗಿದೆ. ಅನೈತಿಕವಾಗಿ ಸ್ಟೇಡಿಯಂ ಪ್ರವೇಶಿಸಿ ಪ್ರತಿಭಟನೆ ತೋರಿದ ಕೊಲ್ಹಾಪುರದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕ್ರಿಕೆಟ್ ಮೈದಾನ ಅಥವಾ ಪಿಚ್​ಗೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ಪೊಲೀಸರು ಹಾಗೂ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (MCA) ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ (ಮಾ.15) ಸಂಜೆ 5 ಗಂಟೆಯ ವೇಳೆಗೆ ಘಟನೆ ನಡೆದಿದೆ. ಅನುಚಿತ ವರ್ತನೆ ತೋರಿದ ಐವರನ್ನೂ ಪೊಲೀಸರು ಬಂಧಿಸಿದ್ದಾರೆ. ಇಂದು (ಮಾ.16) ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಐದು ಮಂದಿ ಸ್ಟೇಡಿಯಂ ಪ್ರವೇಶಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದ ತಕ್ಷಣ ನಾವು ಸ್ಥಳಕ್ಕೆ ಭೇಟಿ ನೀಡಿ, ಐವರನ್ನು ಪೊಲೀಸ್ ಕಸ್ಟಡಿಗೆ ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿ ಶಹಾಜಿ ಪವಾರ್ ತಿಳಿಸಿದ್ದಾರೆ.

ಪ್ರಸ್ತುತ ಇಂಗ್ಲೆಂಡ್​ನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್​ರ ಪವಿತ್ರ ಜಗದಂಬಾ ಖಡ್ಗವನ್ನು ಭಾರತಕ್ಕೆ ತರಿಸಿಕೊಳ್ಳಬೇಕು ಎಂಬುದು ಯುವಕರ ಬೇಡಿಕೆಯಾಗಿದೆ. ತಮ್ಮ ಅಹವಾಲವನ್ನು ಸಾರ್ವಜನಿಕವಾಗಿ ತೋರುವ ಉದ್ದೇಶದಿಂದ ಯುವಕರು ಈ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಶಿವಾಜಿ ಮಹಾರಾಜ್​ರ ಖಡ್ಗವನ್ನು 1875-76 ಸಂದರ್ಭದಲ್ಲಿ ಬಲವಂತವಾಗಿ ಇಂಗ್ಲೆಂಡ್ ರಾಜಕುಮಾರ ವೇಲ್ಸ್​ಗೆ ನೀಡಲಾಯಿತು ಎಂದು ಆರೋಪಿಸಿರುವ ಯುವಕರು ಕೇಸರಿ ಬಾವುಟ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ‘ಇಂಗ್ಲೆಂಡ್ ಟೀಮ್ ಗೋ ಬ್ಯಾಕ್’ ಎಂದು ಘೋಷಣೆ ಕೂಗಿದ್ದಾರೆ.

ಬಂಧಿತ ಯುವಕರನ್ನು ಹರ್ಷಲ್ ಸುರ್ವೆ, ಪ್ರದೀಪ್ ಹಂದೆ, ಆಶಿಶ್ ಅಷ್ಟೇಕರ್, ದೇವೇಂದ್ರ ಸಾವಂತ್ ಮತ್ತು ವಿಜಯ್ ದರ್ವನ್ ಎಂದು ಗುರುತಿಸಲಾಗಿದೆ. ಎಲ್ಲಾ ಯುವಕರೂ ಕೊಲ್ಹಾಪುರದವರಾಗಿದ್ದು, ಐಪಿಸಿ ಸೆಕ್ಷನ್ 143, 452, 506(1), 188 ಮತ್ತು 269 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನೆಯ ಬಳಿಕ ಮೈದಾನದಲ್ಲಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಐವರು ಮೈದಾನಕ್ಕೆ ಆಗಮಿಸಿದಾಗಲೂ ಭದ್ರತಾ ಸಿಬ್ಬಂದಿಗಳು ಲಾಠಿ ಹಿಡಿದುಕೊಂಡು ಗೇಟ್ ಬಳಿ ನಿಂತಿದ್ದರು. ಆದರೆ, ಪ್ರತಿಭಟನೆ ನಡೆಸಲು ಬಂದವರನ್ನು ಕಂಡು ಗಾಬರಿಗೊಂಡ ಸೆಕ್ಯುರಿಟಿಯವರು ಯುವಕರನ್ನು ಒಳಹೋಗಲು ಬಿಟ್ಟಿದ್ದಾರೆ ಎಂದು MCA ಅಧ್ಯಕ್ಷ ವಿಕಾಸ್ ಕಾಕತ್ಕರ್ ಹೇಳಿದ್ದಾರೆ.

ಪಂದ್ಯಾಟಕ್ಕೆ ಮೂರು ದಿನಗಳಿರುವ ಮೊದಲು ಮೈದಾನಕ್ಕೆ ಪೊಲೀಸ್ ಭದ್ರತೆ ನೀಡಲಾಗುತ್ತದೆ. ಈ ವಿಚಾರದಲ್ಲಿ ನಾವು ಮಾರ್ಚ್ 20ರಿಂದ ಪೊಲೀಸ್ ಸೆಕ್ಯುರಿಟಿ ಪಡೆಯುತ್ತೇವೆ. ಸದ್ಯದ ಮಟ್ಟಿಗೆ ಮೈದಾನದಲ್ಲಿ 14 ಭದ್ರತಾ ಸಿಬ್ಬಂದಿಗಳಿದ್ದಾರೆ. ಮೈದಾನದ ಎಲ್ಲಾ ಕಡೆಗಳಲ್ಲೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಏಕದಿನ ಪಂದ್ಯಾಟಗಳು ಮಾರ್ಚ್ 23, 26 ಮತ್ತು 28ರಂದು ನಡೆಯಲಿದೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆಯ ಕಾರಣಕ್ಕೆ ಪ್ರೇಕ್ಷಕರಿಗೆ ಪಂದ್ಯಾಟ ವೀಕ್ಷಿಸಲು ಅನುಮತಿ ನಿರಾಕರಿಸಲಾಗಿದೆ.

ಇದನ್ನೂ ಓದಿ:
 ಕ್ರಿಕೆಟ್​ ವಿಶೇಷ: ಟೆಸ್ಟ್​ ಕ್ರಿಕೆಟ್​ ಆರಂಭವಾಗಿ ಇಂದಿಗೆ 144 ವರ್ಷ.. ಮೊದಲ ಟೆಸ್ಟ್​ ಪಂದ್ಯದ ರೋಚಕ ಕಹಾನಿ ನೀವೊಮ್ಮೆ ಓದಲೇಬೇಕು!

India vs England | ಡೇವಿಡ್ ಮಲಾನ್: ಟಿ-20 ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ನ ಚಾಂಪಿಯನ್ ಬ್ಯಾಟ್ಸ್​ಮನ್!

Published On - 4:47 pm, Tue, 16 March 21