ಅವರದ್ದು ಮಧ್ಯಮ ವರ್ಗದ ಸುಂದರ ಕುಟುಂಬ, ವೈದ್ಯೆಯಾಗುವ ಮೂಲಕ ಇಡೀ ಕುಟುಂಬವೇ ಹೆಮ್ಮೆ ಪಡುವಂತೆ ಮಾಡಿದ್ದ ಮಗಳ ಕಂಡರೆ ಬೆಟ್ಟದಷ್ಟು ಪ್ರೀತಿ. ಕೋಲ್ಕತ್ತಾದಲ್ಲಿ ತಮ್ಮ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದರು. ಆದರೆ ಆಗಸ್ಟ್ 9ರ ಕರಾಳ ರಾತ್ರಿ ಅವರ ಕನಸ್ಸನ್ನು ಛಿತ್ರಗೊಳಿಸಿತ್ತು.
ಆಗಸ್ಟ್ 9ರಂದು ರಾತ್ರಿ 11.30ರ ಸುಮಾರಿಗೆ ತರಬೇತಿ ನಿರತ ವೈದ್ಯೆ ಪ್ರತಿ ದಿನ ಮಾಡುವ ಹಾಗೆಯೇ ತಾಯಿಗೆ ಕರೆ ಮಾಡಿದ್ದಳು. ತುಂಬಾ ಹೊತ್ತು ಮಾತನಾಡಿದ್ದಳು.
ಆಗಸ್ಟ್ 10ರ ಬೆಳಗ್ಗೆ ಅರ್ಧ ಗಂಟೆಯೊಳಗೆ ಬಂದ ಆ ಮೂರು ಕರೆಗಳು ಅವರ ಹೃದಯವನ್ನು ಛಿದ್ರಗೊಳಿಸಿದ್ದವು. ಕೋಲ್ಕತ್ತಾ ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ನಂತರ ಬೆಳಗ್ಗೆ ಪೋಷಕರಿಗೆ ಮಾಡಿದ ಕರೆಗಳ ಆಡಿಯೊ ಎನ್ಡಿ ಟಿವಿಗೆ ಲಭ್ಯವಾಗಿದೆ.
ತಮ್ಮ ಮಗಳ ಸಾವಿನ ಸುದ್ದಿ ಕೇಳಿ ಪೋಷಕರು ಅನುಭವಿಸಿದ ಆಘಾತ ಯಾರಿಗೂ ಬೇಡ. ಮಗಳು ಇನ್ನಿಲ್ಲ ಎನ್ನುವ ದುಃಖದ ಜತೆಗೆ ಆಕೆ ಸಂಕಟ, ಚಿತ್ರಹಿಂಸೆ ಅನುಭವಿಸಿ ಸತ್ತಳಲ್ಲ ಎನ್ನುವ ನೋವೇ ಹೆಚ್ಚಾಗಿ ಕಾಡುತ್ತಿದೆ. ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ಆರೋಪಿ ಸಂಜಯ್ ರಾಯ್ನನ್ನು ಪೊಲೀಸರು ಬಂಧಿಸಿದ್ದಾರೆ. ಪಾಲಿಗ್ರಾಫ್ ಪರೀಕ್ಷೆ ಕೂಡ ನಡೆದಿದೆ.
ಮೊದಲು ಅತ್ಯಾಚಾರ ಮಾಡಿದ್ದು ನಾನೇ ಎಂದು ಒಪ್ಪಿಕೊಂಡಿದ್ದಾತ ಇದ್ದಕ್ಕಿದ್ದಂತೆ ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು ಎನ್ನುವ ಗೊಂದಲದ ಹೇಳಿಕೆಯನ್ನು ನೀಡಿ ತಾನು ನಿರಪರಾಧಿ ಎಂದು ಹೇಳಿದ್ದಾನೆ.
ಮತ್ತಷ್ಟು ಓದಿ: Kolkata Murder Case: ಕತ್ತಿನಲ್ಲಿ ಬ್ಲೂಟೂತ್, ಕೈಯಲ್ಲಿ ಹೆಲ್ಮೆಟ್ ಸೆಮಿನಾರ್ ರೂಂಗೆ ಹೋಗುತ್ತಿರುವ ಆರೋಪಿ ದೃಶ್ಯ ಸೆರೆ
ಆತ ಹೆಲ್ಮೆಟ್ ಹಿಡಿದು, ಇಯರ್ಫೋನ್ ಹಾಕಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಕೆಯ ಮೃತದೇಹದ ಬಳಿ ಬ್ಲೂಟೂತ್ ಕೂಡ ಸಿಕ್ಕಿತ್ತು. ಆ ಪೋಷಕರು ತಮ್ಮ ಮಗಳು ವೈದ್ಯೆಯಾದ ಕನಸಿನ ಜತೆಗೆ ಆಕೆಗೆ ಮದುವೆ ಮಾಡಿ ಒಂದು ಸುಂದರ ಕುಟುಂಬವನ್ನು ಸಿಗುವಂತೆ ಮಾಡುವ ಕನಸ್ಸು ಕಂಡಿದ್ದರು ಎಲ್ಲವೂ ನುಚ್ಚುನೂರಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ