ಡೆಹ್ರಾಡೂನ್: ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ ಮತ್ತು ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಡುವೆ ಹೋಲಿಕೆ ಮಾಡುವುದು ಬೇಡ ಎಂದು ಉತ್ತರಾಖಂಡದ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಹೇಳಿದ್ದಾರೆ. ಮರ್ಕಜ್ ನಡೆದಿದ್ದು ಮುಚ್ಚಿದ ಪ್ರದೇಶದಲ್ಲಾಗಿತ್ತು,.ಆದರೆ ಕುಂಭ ಮೇಳ ತೆರೆದ ಸ್ಥಳದಲ್ಲಿ ನಡೆಯುತ್ತಿದೆ, ಗಂಗಾ ನದಿ ತೀರದಲ್ಲಿ ನಡೆಯುತ್ತಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತೀರತ್ ಸಿಂಗ್ ಹೇಳಿದ್ದಾರೆ. ದೇಶದಲ್ಲಿ ಕೊವಿಡ್ ಎರಡನೇ ಅಲೆ ಪ್ರತಾಪ ತೋರುತ್ತಿರುವ ಹೊತ್ತಿನಲ್ಲಿಯೇ ಹರಿದ್ವಾರದಲ್ಲಿ ಕುಂಭ ಮೇಳ ನಡೆಯುತ್ತಿದೆ. ಕುಂಭ ಮೇಳದಲ್ಲಿ ಲಕ್ಷೋಪಲಕ್ಷ ಜನ ಸೇರಿದ್ದಾರೆ. ಹೀಗಿರುವಾಗ ಕುಂಭ ಮೇಳ ಮತ್ತು ಮರ್ಕಜ್- ಎರಡು ಧಾರ್ಮಿಕ ಕಾರ್ಯಕ್ರಮಗಳ ನಡುವೆ ಅಂತರವೇನಿದೆ ಎಂದು ಕೇಳಿದ ಪ್ರಶ್ನೆಗೆ ರಾವತ್ ಈ ರೀತಿ ಉತ್ತರಿಸಿದ್ದಾರೆ.
ನಿಜಾಮುದ್ದೀನ್ ಮರ್ಕಜ್ ಮತ್ತು ಕುಂಭ ಮೇಳದ ನಡುವಿನ ವ್ಯತ್ಯಾಸದ ಬಗ್ಗೆ ವಿವರಿಸಿ ಕುಂಭ ಮೇಳವನ್ನು ಸಮರ್ಥಿಸಿಕೊಂಡ ರಾವತ್, ಇಲ್ಲಿ ಭಾಗವಹಿಸಿರುವ ಭಕ್ತರು ಇಲ್ಲಿಯವರೇ ಆಗಿದ್ದಾರೆ, ವಿದೇಶದವರಲ್ಲ. ಆದಾಗ್ಯೂ ಮರ್ಕಜ್ ನಡೆದಾಗ ಕೊರೊನಾವೈರಸ್ ಬಗ್ಗೆ ಹೆಚ್ಚಿನ ಅರಿವು ಜನರಿಗೆ ಇರಲಿಲ್ಲ. ಅಲ್ಲಿ ಯಾವುದೇ ಮಾರ್ಗಸೂಚಿ ಇರಲಿಲ್ಲ. ಮರ್ಕಜ್ನಲ್ಲಿ ಭಾಗವಹಿಸಿದ ಜನರು ಆ ಸ್ಥಳದಲ್ಲಿ ಎಷ್ಟು ಸಮಯ ಇದ್ದರು ಎಂಬುದು ಯಾರಿಗೂ ಗೊತ್ತಿಲ್ಲ,.ಆದರೆ ಈಗ ಕೊವಿಡ್ ಬಗ್ಗೆ ಜನರಿಗೆ ಹೆಚ್ಚಿನ ಜಾಗೃತಿ ಇದೆ, ಮಾರ್ಗಸೂಚಿ ಬಗ್ಗೆ ಅರಿವು ಜನರಿಗಿದೆ ಎಂದು ಹೇಳಿದ್ದಾರೆ.
ಕೊವಿಡ್ ಸಾಂಕ್ರಾಮಿಕದ ನಡುವೆಯೇ ಕುಂಭ ಮೇಳವನ್ನು ಯಶಸ್ವಿಯಾಗಿ ನಡೆಸಲು ಕೊವಿಡ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಿನಿಂದ ಪಾಲಿಸುವುದೇ ನಮ್ಮ ಗುರಿ . ಜನರ ಆರೋಗ್ಯ ಬಗ್ಗೆ ಆದ್ಯತೆ ಇದ್ದರೂ, ನಂಬಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಲೂ ಆಗುವುದಿಲ್ಲ ಎಂದಿದ್ದಾರೆ ರಾವತ್.
ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿವೆ. ನಾವು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದೇವೆ. ಚೇತರಿಕೆ ಪ್ರಮಾಣವೂ ಉತ್ತಮವಾಗಿದೆ. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಸಿದ್ಧತೆ ಮಾಡಿಕೊಂಡಿದ್ದೇವೆ . ಕುಂಭ ಮೇಳದಲ್ಲಿ ಭಾಗವಹಿಸುವವರು ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮಾಡುತ್ತಿದ್ದೇವೆ. ಮೇಳ ನಡೆಯುವ ಜಾಗಗಳಲ್ಲಿ ಮಾಸ್ಕ್, ಸ್ಯಾನಿಟೈಜರ್ ಗಳ ವ್ಯವಸ್ಥೆ ಮಾಡಿದ್ದೇವೆ. ಗಡಿ ಪ್ರದೇಶಗಳಲ್ಲಿ ಜನರನ್ನು ತಪಾಸಣೆಗೊಳಪಡಿಸಿದ ನಂತರವೇ ಹರಿದ್ವಾರದಲ್ಲಿ ನಡೆಯುತ್ತಿರುವ ಮೇಳಕ್ಕೆ ಬರಲು ಅನುವು ಮಾಡಲಾಗುತ್ತಿದೆ. ಅಲ್ಲಿಯೂ ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಬುಧವಾರ ಹರಿದ್ವಾರದಲ್ಲಿ ನಡೆಯುವ ಮೇಷ ಸಂಕ್ರಾಂತಿಯ ಶಾಹಿ ಸ್ನಾನಕ್ಕಾಗಿ ಎಲ್ಲ ಸಿದ್ದತೆಗಳನ್ನು ಮಾಡಲಾಗಿದೆ ಎಂದು ತೀರತ್ ಸಿಂಗ್ ರಾವತ್ ಹೇಳಿದ್ದಾರೆ.
ಉತ್ತರಾಖಂಡದಲ್ಲಿ ಮಂಗಳವಾರ 1,925 ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, 13 ಮಂದಿ ಸಾವಿಗೀಡಾಗಿದ್ದಾರೆ. ಡೆಹ್ರಾಡೂನ್ ಜಿಲ್ಲೆಯಲ್ಲಿ 775, ಹರಿದ್ವಾರದಲ್ಲಿ 594, ನೈನಿತಾಲ್ ನಲ್ಲಿ 217, ಉಧಮ್ ಸಿಂಗ್ ನಗರದಲ್ಲಿ 172 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದೆ. ಹರಿದ್ವಾರದಲ್ಲೀಗ ಸಕ್ರಿಯ ಕೊವಿಡ್ ಪ್ರಕರಣಗಳ ಸಂಖ್ಯೆ 2,812ಕ್ಕೇರಿದೆ.
ಸೋಮವಾರ ಇಲ್ಲಿ 408 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿತ್ತು. ಭಕ್ತರ ಜತೆ, ಸ್ವಾಮಿಗಳು, 13 ಅಖಾರಗಳ ಪ್ರತಿನಿಧಿಗಳು ಕುಂಭಮೇಳದಲ್ಲಿ ಭಾಗವಹಿಸಿದ್ದು, ಹಲವು ಸ್ವಾಮಿಗಳಿಗೆ ಕೊವಿಡ್ ದೃಢಪಟ್ಟಿದೆ. ಉತ್ತರಾಖಂಡ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಇಲ್ಲಿ ಮಂಗಳವಾರ ಗರಿಷ್ಠ ಕೊರೊನಾ ಪ್ರಕರಣ ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 1,12,071ಕ್ಕೇರಿದ್ದು ಸಾವಿನ ಸಂಖ್ಯೆ 1,780ಕ್ಕೆ ತಲುಪಿದೆ. 9,353 ಸಕ್ರಯ ಪ್ರಕರಣಗಳಿದ್ದು 98,897ಮಂದಿ ಚೇತರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕುಂಭ ಮೇಳದಲ್ಲಿ ಮೂರನೇ ಶಾಹಿ ಸ್ನಾನ ಇಂದು, ಕೊವಿಡ್ ಮಾರ್ಗಸೂಚಿ ಪಾಲಿಸಿ: ಉತ್ತರಾಖಂಡ ಸಿಎಂ ತೀರತ್ ಸಿಂಗ್ ರಾವತ್ ಮನವಿ
(Kumbh Mela in Haridwar should not be compared with the Nizamuddin Markaz says Uttarakhand Chief Minister Tirath Singh Rawat)
Published On - 1:17 pm, Wed, 14 April 21