ದೆಹಲಿ: ಲಖಿಂಪುರ್ ಖೇರಿಯಲ್ಲಿ Lakhimpur Kheri) ನಡೆದ ಪ್ರತಿಭಟನೆಯಲ್ಲಿ ರೈತರ ಹತ್ಯೆಯ ಕುರಿತು ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಕಠಿಣ ಪ್ರಶ್ನೆಗಳೊಂದಿಗೆ ಪ್ರತಿಕ್ರಿಯಿಸಿದೆ. “ನೀವು ನಿಮ್ಮ ಕಾಲುಗಳನ್ನು ಎಳೆಯುತ್ತಿದ್ದೀರಿ ಎಂದು ಸುಪ್ರೀಂಕೋರ್ಟ್ (Supreme Court) ಉತ್ತರ ಪ್ರದೇಶ ಸರ್ಕಾರ ವಿರುದ್ದ ಗುಡುಗಿದೆ. ಎಲ್ಲಾ ಸಾಕ್ಷಿಗಳ ಹೇಳಿಕೆಯನ್ನು ರಕ್ಷಿಸಲು ಮತ್ತು ದಾಖಲಿಸಲು ಯುಪಿ ಸರ್ಕಾರಕ್ಕೆ ಆದೇಶಿಸಿದ ಸುಪ್ರೀಂಕೋರ್ಟ್ “ಇದು ಅಂತ್ಯವಿಲ್ಲದ ಕಥೆಯಾಗಬಾರದು” ಎಂದು ಹೇಳಿದೆ. ಯಾವ ಅಪರಾಧದಲ್ಲಿಯಾರನ್ನು ಬಂಧಿಸಲಾಗಿದೆ ಎಂಬುದರ ಕುರಿತು ಸ್ಥಿತಿ ವರದಿಯನ್ನು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಕೇಳಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ 10 ಜನರನ್ನು ಬಂಧಿಸಲಾಗಿದೆ. ಘಟನೆಯ ಕುರಿತು ಸಿಬಿಐ ಒಳಗೊಂಡಂತೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆಯನ್ನು ಕೋರಿ ಇಬ್ಬರು ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದ ನಂತರ ಸುಪ್ರೀಂಕೋರ್ಟ್ ಈ ವಿಷಯವನ್ನು ಕೈಗೆತ್ತಿಕೊಂಡಿತ್ತು.
ಸುಪ್ರೀಂಕೋರ್ಟ್ ವಿಚಾರಣೆಯ ಹೈಲೈಟ್
ಸಿಜೆಐ: ಎಷ್ಟು ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ ಮತ್ತು ಎಷ್ಟು ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ? ಏಕೆಂದರೆ ಪೊಲೀಸರು ಅವರನ್ನು ಪ್ರಶ್ನಿಸದ ಹೊರತು ನಾವು ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವುದಿಲ್ಲ.
ಯುಪಿ ಸರ್ಕಾರದ ಪರವಾಗಿ ಹಾಜರಾದ ಗರಿಮಾ ಪ್ರಸಾದ್: 4 ಮಂದಿ ಪೊಲೀಸ್ ವಶದಲ್ಲಿದ್ದು, ಉಳಿದ 6 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ
ನ್ಯಾಯಮೂರ್ತಿ ಸೂರ್ಯ ಕಾಂತ್: ನೀವು ಹೆಚ್ಚಿನ ಪೊಲೀಸ್ ರಿಮಾಂಡ್‌ಗೆ ಒತ್ತಾಯಿಸಲಿಲ್ಲವೇ?
ಗರಿಮಾ ಪ್ರಸಾದ್: ಇದನ್ನು 3 ದಿನಗಳವರೆಗೆ ನೀಡಲಾಗಿದೆ.
ಸಿಜೆಐ: ಹೆಚ್ಚಿನ ಪೊಲೀಸ್ ರಿಮಾಂಡ್ ಅಗತ್ಯವಿಲ್ಲವೇ?
ಯುಪಿ ಸರ್ಕಾರದ ಪರವಾಗಿ ಹಾಜರಾದ ಹರೀಶ್ ಸಾಳ್ವೆ: ಸಾಕಷ್ಟು ಫೂಟೇಜ್, ವಿಡಿಯೊ ಫೋಟೋಗಳನ್ನು ಪರಿಶೀಲಿಸಲಾಗುತ್ತಿದೆ. ಅವರನ್ನು ಹೆಚ್ಚು ಪ್ರಶ್ನಿಸುವ ಅಗತ್ಯವಿಲ್ಲ.
ಸಿಜೆಐ: ಇದು ಮುಗಿಯದ ಕಥೆಯಾಗಬಾರದು
ನ್ಯಾಯಮೂರ್ತಿ ಸೂರ್ಯ ಕಾಂತ್: ಕೇವಲ 4 ಮಂದಿಯ ಹೇಳಿಕೆಗಳನ್ನು ಏಕೆ ದಾಖಲಿಸಿದ್ದು?
ಹರೀಶ್ ಸಾಳ್ವೆ: ಸೆಕ್ಷನ್ 164 ರ ಅಡಿಯಲ್ಲಿ ಹೇಳಿಕೆಗಳನ್ನು ದಾಖಲಿಸುವಾಗ ಕೆಲವು ನ್ಯಾಯಾಲಯಗಳನ್ನು ಮುಚ್ಚಲಾಯಿತು.
ಗರಿಮಾ ಪ್ರಸಾದ್: ಅಪರಾಧದ ಮರುಸೃಷ್ಟಿ ಮಾಡಲಾಗುತ್ತಿದೆ
ಸೂರ್ಯ ಕಾಂತ್: ಅದು ಬೇರೆ ಮತ್ತು ಹೇಳಿಕೆಗಳನ್ನು ದಾಖಲಿಸುವುದು ಬೇರೆ
ಹರೀಶ್ ಸಾಳ್ವೆ: ದಯವಿಟ್ಟು ಇದನ್ನು ಮುಂದಿನ ವಾರ ಕೈಗೆತ್ತಿಕೊಳ್ಳಿ
ಸಿಜೆಐ: ದಯವಿಟ್ಟು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲು ಹೇಳಿ ಮತ್ತು ಸಾಕ್ಷಿಗಳ ರಕ್ಷಣೆ ಕೂಡ ಮುಖ್ಯವಾಗಿದೆ.
ಆದೇಶ ಓದಿದ ಸಿಜೆಐ ಮುಂದಿನ ವಿಚಾರಣೆ ಅಕ್ಟೋಬರ್ 26 ರಂದು ಕೈಗೆತ್ತಿಕೊಳ್ಳುವುದಾಗಿ ಹೇಳಿದರು.
ಇದನ್ನೂ ಓದಿ: ಲಖಿಂಪುರ ಖೇರಿ ಹಿಂಸಾಚಾರ: ಮತ್ತೆ 4 ಮಂದಿ ಬಂಧನ; ಅದರಲ್ಲೊಬ್ಬ ಬಿಜೆಪಿ ಕಾರ್ಯಕರ್ತ