ನೌಶೇರಾ, ಜ.18: ಜಮ್ಮು-ಕಾಶ್ಮೀರದ ನೌಶೇರಾ ನಿಯಂತ್ರಣ ರೇಖೆಯ ಬಳಿ ನೆಲಬಾಂಬ್ ಸ್ಫೋಟಗೊಂಡಿದ್ದು,
ಸ್ಫೋಟದಿಂದ ಓರ್ವ ಯೋಧ ಹುತಾತ್ಮವಾಗಿದ್ದು, 3 ಜನ ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಸೇನಾ ಸಿಬ್ಬಂದಿಯನ್ನು ಒಳಗೊಂಡ ಗಸ್ತು ತಂಡವು ನಿಯಂತ್ರಣ ರೇಖೆಯ ಉದ್ದಕ್ಕೂ ವಾಡಿಕೆಯಂತೆ ಕಣ್ಗಾವಲು ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಇನ್ನು ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಬಂದಿಲ್ಲ. ಗಡಿ ಪ್ರದೇಶದ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದ ಭಾರತೀಯ ಸೇನೆಯು ಎಲ್‌ಒಸಿ ಉದ್ದಕ್ಕೂ ಬಂಡಾಯ ನಿಗ್ರಹ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಜನವರಿ 12ರಂದು ಸಂಜೆ ಸೇನಾ ವಾಹನಗಳ ಮೇಲೆ ಉಗ್ರರು ದಾಳಿ ನಡೆಸಿದ್ದು, ಒಳಗಿದ್ದ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಇದುವರೆಗೆ ಯಾವುದೇ ಸಾವು-ನೋವುಗಳ ವರದಿಯಾಗಿಲ್ಲ. ಹತ್ತಿರದ ಬೆಟ್ಟದಿಂದ ಉಗ್ರರು ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತದ ಸೇನೆಯು ಭಯೋತ್ಪಾದಕರು ಮೇಲೆ ದಾಳಿ ಮಾಡಿದೆ. ವರದಿಗಳ ಪ್ರಕಾರ, ದಾಳಿಗೊಳಗಾದ ಸೇನಾ ಬೆಂಗಾವಲು ಪಡೆಯಲ್ಲಿ ಹಲವಾರು ವಾಹನಗಳಿತ್ತು.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದ ಟ್ರಕ್, ಮೂವರು ಸಾವು
ರಜೌರಿಯ ಡೇರಾ ಕಿ ಗಲಿಯಲ್ಲಿ ಹೊಂಚುದಾಳಿಯಿಂದ ನಾಲ್ವರು ಸೈನಿಕರು ಮೃತಪಟ್ಟು ಐವರು ಗಾಯಗೊಂಡ ನಂತರ ಕಳೆದ ಕೆಲವು ವಾರಗಳಲ್ಲಿ ಈ ಪ್ರದೇಶದಲ್ಲಿ ಸೇನೆಯ ಮೇಲೆ ನಡೆದ ಎರಡನೇ ಭಯೋತ್ಪಾದಕ ದಾಳಿ ಇದಾಗಿದೆ. ರಜೌರಿ ಮತ್ತು ಪೂಂಚ್ ನಲ್ಲಿರುವ ಪಿರ್ ಪಂಜಾಲ್ ಪ್ರದೇಶ 2003 ರಿಂದ ಭಯೋತ್ಪಾದನೆಯಿಂದ ಮುಕ್ತವಾಗಿದೆ. ಆದರೆ ಅಕ್ಟೋಬರ್ 2021 ರಿಂದ ಪ್ರಮುಖ ದಾಳಿಗಳು ಪುನರಾರಂಭವಾಗಿವೆ. ಕಳೆದ ಏಳು ತಿಂಗಳುಗಳಲ್ಲಿ, ಅಧಿಕಾರಿಗಳು ಮತ್ತು ಕಮಾಂಡೋಗಳು ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಈ ಪ್ರದೇಶಗಳಲ್ಲಿ 35 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:08 pm, Thu, 18 January 24