ದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ದಿನಗಣನೆ ಆರಂಭವಾಗಿದೆ. ದೇವಸ್ಥಾನದ ಭೂಮಿ ಪೂಜೆ ಸಮಾರಂಭವು ಆಗಸ್ಟ್ 5ಕ್ಕೆ ಆಯೋಜಿಸಲಾಗಿದ್ದು ಪ್ರಧಾನಿ ನರೇಂದ್ರ ಮೋದಿ ಸೇರಿದ್ದಂತೆ ದೇಶದ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ.
ಆದರೆ, ಉನ್ನತ ಮೂಲಗಳ ಪ್ರಕಾರ ಬಿಜೆಪಿ ಪಕ್ಷದ ವರಿಷ್ಠ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿ ಅವರಿಗೆ ಈವರೆಗೆ ಆಮಂತ್ರಣ ಪತ್ರ ನೀಡಿಲ್ಲವಂತೆ. ಆದರೆ, ಪಕ್ಷದ ಇತರೆ ನಾಯಕರಾದ ಉಮಾ ಭಾರತಿ ಹಾಗೂ ಮಾಜಿ ಸಿಎಂ ಕಲ್ಯಾಣ್ ಸಿಂಗ್ರಿಗೆ ಆಮಂತ್ರಣ ನೀಡಲಾಗಿದೆ.
ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡ್ವಾಣಿ ಕಳೆದ ವಾರ ಲಕ್ನೋನಲ್ಲಿರುವ CBI ನ್ಯಾಯಾಲಯದಲ್ಲಿ ನಡೆಯುತ್ತಿರುವ ಕೇಸ್ಗೆ ಹಾಜರಾಗಿದ್ದರು. ಜೊತೆಗೆ, ಈ ಪ್ರಕರಣದಲ್ಲಿ ಮುರಳಿ ಮನೋಹರ್ ಜೋಶಿ ಹಾಗೂ ಉಮಾ ಭಾರತಿಯವರ ಹೆಸರು ಸಹ ತಳುಕು ಹಾಕಲಾಗಿತ್ತು.
ಆದರೆ, ಕೇಂದ್ರ ಸರ್ಕಾರದ ಕೊವಿಡ್ ನಿಯಮಾವಳಿಯ ಪ್ರಕಾರ 65ಕ್ಕಿಂತ ಹೆಚ್ಚು ವಯೋಮಿತಿಯವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಉಲ್ಲೇಖಿಸಲಾಗಿದೆಯಂತೆ. ಈ ಕಾರಣಕ್ಕಾಗಿ ಹಿರಿಯರಾದ ಅಡ್ವಾಣಿ (92) ಮತ್ತು ಜೋಶಿಗೆ (86) ಆಮಂತ್ರಣ ನೀಡಲಾಗಿಲ್ಲ ಎಂಬ ಮಾತೂ ಸಹ ಕೇಳಿಬಂದಿದೆ.
Published On - 2:49 pm, Sat, 1 August 20