ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್ಡಿಎಫ್ ಅಧಿಪತ್ಯ ಸ್ಥಾಪಿಸಿದೆ. ಗ್ರಾಮ ಪಂಚಾಯತಿಗಳಲ್ಲಿಯೂ ಬ್ಲಾಕ್, ಜಿಲ್ಲಾ ಪಂಚಾಯತಿ ಮತ್ತು ಕಾರ್ಪೊರೇಷನ್ಗಳಲ್ಲಿ ಎಲ್ಡಿಎಫ್ ಮುನ್ನಡೆ ಸಾಧಿಸಿದೆ. ಮುನ್ಸಿಪಾಲಿಟಿಗಳಲ್ಲಿ ಯುಡಿಎಫ್- ಎಲ್ಡಿಎಫ್ ನಡುವೆ ಜಿದ್ದಾಜಿದ್ದಿ ಪೈಪೋಟಿ ನಡೆದಿತ್ತು.
941 ಗ್ರಾಮ ಪಂಚಾಯತಿಗಳ ಪೈಕಿ 517 ಸೀಟುಗಳಲ್ಲಿ ಎಲ್ಡಿಎಫ್ ಮುನ್ನಡೆ ಸಾಧಿಸಿದೆ. ಯುಡಿಎಫ್ 374, ಎನ್ಡಿಎ 22, ಸ್ವತಂತ್ರ ಅಭ್ಯರ್ಥಿಗಳು ಮತ್ತು ಇತರ ಪಕ್ಷಗಳು 28 ಸೀಟುಗಳಲ್ಲಿ ಮುನ್ನಡೆ ಸಾಧಿಸಿವೆ. ಬ್ಲಾಕ್ ಪಂಚಾಯತ್ನ 152 ಸೀಟುಗಳ ಪೈಕಿ ಎಲ್ಡಿಎಫ್ 107, ಯುಡಿಎಫ್ 45 ಸೀಟುಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಒಟ್ಟು 14 ಜಿಲ್ಲಾ ಪಂಚಾಯತಿಗಳಲ್ಲಿ 10 ಸೀಟುಗಳಲ್ಲಿ ಎಲ್ಡಿಎಫ್ ಮತ್ತು ಯುಡಿಎಫ್ 4 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಮುನ್ಸಿಪಾಲಿಟಿಗಳಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಯೇರ್ಪಟ್ಟಿದ್ದು 86 ಸೀಟುಗಳ ಪೈಕಿ 45 ಸೀಟುಗಳಲ್ಲಿ ಯುಡಿಎಫ್ ಮತ್ತು 35 ಸೀಟುಗಳಲ್ಲಿ ಎಲ್ಡಿಎಫ್ ಮುನ್ನಡೆ ಇದೆ.
ಕಾರ್ಪೊರೇಷನ್ ಚುನಾವಣೆ
ತಿರುವನಂತಪುರಂ (43), ಕೊಲ್ಲಂ (38), ಕೋಯಿಕ್ಕೋಡ್ (47) ಮಹಾನಗರಪಾಲಿಕೆಗಳಲ್ಲಿ ಎಲ್ಡಿಎಫ್ ಮುನ್ನಡೆ ಸಾಧಿಸಿದೆ. ಕೊಚ್ಚಿ ಕಾರ್ಪೊರೇಷನ್ನಲ್ಲಿ ಎಲ್ಡಿಎಫ್ ಅಧಿಕಾರಕ್ಕೇರುವುದು ನಿಚ್ಚಳವಾಗಿದೆ. ಕಣ್ಣೂರು (2), ತ್ರಿಶ್ಶೂರ್ (23) ಸೀಟುಗಳಲ್ಲಿ ಯುಡಿಎಫ್ ಮುನ್ನಡೆ ಸಾಧಿಸಿದೆ. ತಿರುವನಂತಪುರಂನಲ್ಲಿ ಕಳೆದ ವರ್ಷ ಎಲ್ಡಿಎಫ್ 42 ಸೀಟು ಗಳಿಸಿತ್ತು. ಈ ಹಿಂದೆ 20 ಸೀಟುಗಳಿಸಿದ್ದ ಯುಡಿಎಫ್ಗೆ ಈ ಬಾರಿ 9 ಸೀಟುಗಳಲ್ಲಷ್ಟೇ ಜಯ ಸಾಧಿಸಲು ಸಾಧ್ಯವಾಗಿದ್ದು. ಕಳೆದ ಬಾರಿ 35 ಸೀಟುಗಳಿಸಿದ್ದ ಎನ್ಡಿಎ ಈ ಬಾರಿ 27 ಸೀಟುಗಳಲ್ಲಿ ಮುನ್ನಡೆ ಗಳಿಸಿದೆ.
ಬಿಜೆಪಿಗೆ ಈ ಬಾರಿ ಹೆಚ್ಚಿನ ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಪಾಲಕ್ಕಾಡ್ ಮುನ್ಸಿಪಾಲಿಟಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಬಿಜೆಪಿಗೆ ಈ ಚುನಾವಣೆಯಲ್ಲಿ ಹೆಚ್ಚಿನ ಸೀಟು ಗೆಲ್ಲಲು ಸಾಧ್ಯವಾಗಿದೆ. ತ್ರಿಶ್ಶೂರ್ ಕಾರ್ಪೊರೇಷನ್ನಲ್ಲಿ ಸ್ಪರ್ಧಿಸಿದ್ದ ಬಿಜೆಪಿ ನೇತಾರ ಬಿ.ಗೋಪಾಲಕೃಷ್ಣ ಅವರ ಸೋಲು ಬಿಜೆಪಿಗೆ ದೊಡ್ಡ ಹೊಡೆತವನ್ನು ನೀಡಿದೆ.
ರಾಜಕೀಯ ಪಕ್ಷಗಳ ವಿರುದ್ಧ ಸಂಘಟಿತವಾದ ಟ್ವೆಂಟಿ- 20 ಪಕ್ಷವು ಕಿಳಕ್ಕಂಬಲಂ, ಐಕ್ಕರನಾಡಿನಲ್ಲಿ ಗೆಲುವು ಸಾಧಿಸಿದೆ. ಮುಳುವನ್ನೂರ್, ಕುನ್ನತ್ತುನಾಡ್ನಲ್ಲಿ ಟ್ವೆಂಟಿ – 20 ಹೆಚ್ಚಿನ ಸೀಟುಗಳನ್ನು ಗೆದ್ದುಕೊಂಡಿದೆ. ಪಾಲಾ ನಗರಸಭೆಯಲ್ಲಿ ಜೋಸ್ ಕೆ. ಮಾಣಿ ಪಕ್ಷದ 5 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಕೋಟ್ಟಯಂ ಜಿಲ್ಲಾ ಪಂಚಾಯತ್ ನಲ್ಲಿ ಎಲ್ಡಿಎಫ್ ಹೆಚ್ಚಿನ ಸೀಟುಗಳಿಸುವಲ್ಲಿ ಯಶಸ್ವಿಯಾಗಿದೆ.
Thank you Kerala. Thank you for reposing faith in LDF. We are humbled by the trust and the confidence of the people of Kerala. This is a victory for secularism and inclusive development. My warm greetings to all the elected representatives. pic.twitter.com/KGnAb6Xj4f
— Pinarayi Vijayan (@vijayanpinarayi) December 16, 2020
ಇದು ಜನರ ಗೆಲುವು: ಸಿಎಂ ಪಿಣರಾಯಿ ವಿಜಯನ್
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲ್ಡಿಎಫ್ನ ಗೆಲುವು ಜನರ ಗೆಲುವು ಆಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯನ್, ಕೇರಳದಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಲು ಪ್ರಯತ್ನಿಸುವವರಿಗೆ ನಾಡಿನ ಜನರು ನೀಡಿದ ಉತ್ತರವಾಗಿದೆ ಈ ಚುನಾವಣಾ ಫಲಿತಾಂಶ ಎಂದಿದ್ದಾರೆ.
ದಲ್ಲಾಳಿಗಳಿಗೂ, ಅಪಪ್ರಚಾರ ಮಾಡುತ್ತಿರುವವರಿಗೂ ಕೇರಳಿಗರು ಸೂಕ್ತ ಉತ್ತರವನ್ನೇ ನೀಡಿದ್ದಾರೆ. ಕೇರಳ ರಾಜಕೀಯದಲ್ಲಿ ಯುಡಿಎಫ್ ಹೇಳಹೆಸರಿಲ್ಲದಂತಾಗುತ್ತಿದೆ. ಬಿಜೆಪಿಯ ಕುತಂತ್ರಗಳು ಮತ್ತೊಮ್ಮೆ ವಿಫಲವಾಗಿದೆ. ಕೇರಳ ರಾಜಕೀಯದಲ್ಲಿ ಧಾರ್ಮಿಕ, ಮತ ದ್ವೇಷಗಳಿಗೆ ಜಾಗವಿಲ್ಲ ಎಂಬುದನ್ನು ಈ ಚುನಾವಣೆ ಸಾಬೀತು ಪಡಿಸಿದೆ ಎಂದಿದ್ದಾರೆ ಪಿಣರಾಯಿ.
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಮುನ್ನಡೆ ಸಾಧಿಸಿದ LDF, ಕಣ್ಣೂರಿನಲ್ಲಿ ಕಣ್ಬಿಟ್ಟ BJP
Published On - 7:25 pm, Wed, 16 December 20