
ನವದೆಹಲಿ, ಫೆಬ್ರವರಿ 29: ಮುಂಬರಲಿರುವ ಲೋಕಸಭೆ (Lok Sabha Election) ಚುನಾವಣೆ ಹಿನ್ನೆಲೆ ದೆಹಲಿಯಲ್ಲಿ ಮಹತ್ವದ ರಾಜಕೀಯ ಘಟನೆಗಳು ನಡೆಯುತ್ತಿವೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ಪಕ್ಷದ ಚುನಾವಣಾ ಸಮಿತಿ ಸಭೆ ಮಾಡಲಾಗಿದೆ. ಈ ಸಭೆಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಉಪಸ್ಥಿತರಿದ್ದರು. ಸದ್ಯ ಈ ಸಭೆಯಲ್ಲಿ ಚರ್ಚೆಯಾದ ಮಹತ್ವದ ಸಂಗತಿಗಳು ಹೊರಬಿದ್ದಿದೆ. ಮೂಲಗಳ ಪ್ರಕಾರ ಈ ಬಾರಿ ಶೇ25 ರಿಂದ 30ರಷ್ಟು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸುವ ಮೂಲಕ ಹೊಸ ಮುಖಗಳಿಗೆ ಮಣೆಹಾಕಲು ಬಿಜೆಪಿ ಪ್ಲ್ಯಾನ್ ನಡೆಸಿದೆ.
ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಾರ್ಯ ಈಗಾಗಲೇ ಆರಂಭವಾಗಿದೆ. ಮೂಲಗಳ ಪ್ರಕಾರ, ಬಿಜೆಪಿ ಮಾರ್ಚ್ 10 ರ ಮೊದಲು ದೇಶದ 300 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ. ಆ ಮೂಲಕ ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ 125 ಸ್ಥಾನಗಳಿಗೆ ಮುದ್ರೆ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ನಿಖರವಾಗಿ ಯಾವ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ ಅಥವಾ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡುತ್ತದೆ ಎಂಬ ಮಹತ್ವದ ಮಾಹಿತಿ ಹೊರಬಿದ್ದಿದೆ. ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಮೂರು ಹಂತಗಳನ್ನು ಸಿದ್ಧಪಡಿಸಿದೆ. ಮೊದಲ ಹಂತವು ವಿಐಪಿ ಅಭ್ಯರ್ಥಿಗಳಿಗೆ ಇರುತ್ತದೆ. ಎರಡನೇ ಹಂತವು ರಾಜ್ಯಸಭಾ ಸಂಸದರಿಗೆ ಮತ್ತು ಮೂರನೇ ಹಂತವು ಇತರೆ ಪ್ರಮುಖ ಅಭ್ಯರ್ಥಿಗಳಿಗೆ.
ಇದನ್ನೂ ಓದಿ: ಇಂದು 125 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ ಬಿಜೆಪಿ, ಮೊದಲ ಪಟ್ಟಿಯಲ್ಲಿ ಯಾರ್ಯಾರ ಹೆಸರು?
ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಭಾರೀ ಕಸರತ್ತು ಮಾಡುತ್ತಿದೆ. ಮಹಾರಾಷ್ಟ್ರದ ಎಲ್ಲ 23 ಬಿಜೆಪಿ ಸಂಸದರ ಕಾರ್ಯವೈಖರಿ ಕುರಿತು ವರದಿ ಸಿದ್ಧಪಡಿಸಲು ಲೋಕಸಭೆ ವೀಕ್ಷಕರ ಸಮಿತಿಯನ್ನು ಬಿಜೆಪಿ ರಚಿಸಿತ್ತು. ಈ ಸಮಿತಿ ಎಲ್ಲ ಸಂಸದರ ಕ್ಷೇತ್ರಗಳಿಗೆ ತೆರಳಿ ಅವರ ಕೆಲಸಗಳ ಬಗ್ಗೆ ವರದಿ ಸಿದ್ಧಪಡಿಸಬೇಕಿದೆ.
ಅಲ್ಲದೆ ಈಗಿರುವ ಸಂಸದರ ಬದಲಿಗೆ ಇನ್ನೆರಡು ಹೆಸರುಗಳನ್ನು ಸೂಚಿಸಬೇಕಿತ್ತು. ಈ ಸಮಿತಿಯು ತನ್ನ ವರದಿಯನ್ನು ಸಿದ್ಧಪಡಿಸಿ ಮುಚ್ಚಿದ ಲಕೋಟೆಯಲ್ಲಿ ದೆಹಲಿಯಲ್ಲಿರುವ ಬಿಜೆಪಿಯ ಹಿರಿಯ ನಾಯಕರಿಗೆ ಈಗಾಗಲೇ ಕಳುಹಿಸಿಕೊಡಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:57 pm, Thu, 29 February 24