ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಚಿರಾಗ್ ಪಾಸ್ವಾನ್(Chirag Paswan) ಅವರ ಲೋಕ ಜನಶಕ್ತಿ ಪಕ್ಷ(ರಾಮ್ವಿಲಾಸ್)ದ 22 ನಾಯಕರು ಇದೀಗ ಇಂಡಿಯಾ ಒಕ್ಕೂಟದ ಕಡೆ ಮುಖ ಮಾಡಲು ಸಿದ್ಧರಾಗಿದ್ದಾರೆ. ಮಾಜಿ ಸಚಿವ ರೇಣು ಕುಶ್ವಾಹ, ಮಾಜಿ ಶಾಸಕ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್, ರಾಜ್ಯ ಸಂಘಟನಾ ಸಚಿವ ರವೀಂದ್ರ ಸಿಂಗ್ , ಅಜಯ್ ಕುಶ್ವಾಹ, ಸಂಜಯ್ ಸಿಂಗ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಡಾಂಗಿ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದಾರೆ.
ಈಗ ಮೊದಲ ಹಂತದ ಚುನಾವಣೆಗೆ ಕೇವಲ 15 ದಿನಗಳು ಬಾಕಿ ಉಳಿದಿವೆ, ಚಿರಾಗ್ ಪಾಸ್ವಾನ್ ಅಭ್ಯರ್ಥಿಗಳ ಪರವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಲಿದ್ದಾರೆ. ಬಿಹಾರ ಫಸ್ಟ್-ಬಿಹಾರಿ ಫಸ್ಟ್ ಎಂಬ ಘೋಷವಾಕ್ಯ ನೀಡಿದ್ದ ಚಿರಾಗ್ ಪಾಸ್ವಾನ್ ಮನಿ ಫಸ್ಟ್-ಫ್ಯಾಮಿಲಿ ಫಸ್ಟ್ ಅಡಿಯಲ್ಲಿ ಟಿಕೆಟ್ ಮಾರಾಟ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.
ಸೀಟು ಹಂಚಿಕೆಯಲ್ಲಿ ಪಕ್ಷಕ್ಕೆ ಐದು ಸ್ಥಾನಗಳನ್ನು ನೀಡುವಂತೆ ಒತ್ತಾಯಿಸಲಾಗಿತ್ತು. ಆದರೆ ಟಿಕೆಟ್ ಹಂಚಿಕೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ ರೀತಿ ಅಚ್ಚರಿ ಮೂಡಿಸಿದೆ. ಚಿರಾಗ್ ಪಕ್ಷದ ನಿಜವಾದ ಕಾರ್ಯಕರ್ತರಿಗೆ ಟಿಕೆಟ್ ನೀಡಿಲ್ಲ.
ಎಲ್ಜೆಪಿಯನ್ನು ಒಡೆಯುವಲ್ಲ ಪ್ರಮುಖ ಪಾತ್ರವಹಿಸಿದ್ದ ವೀಣಾದೇವಿ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ ಎಂದು ರವೀಂದ್ರ ಸಿಂಗ್ ಆರೋಪಿಸಿದ್ದಾರೆ.
ಮತ್ತಷ್ಟು ಓದಿ: ಲೋಕಸಭಾ ಚುನಾವಣೆ: ಪಶುಪತಿ ಪರಾಸ್ ಬಿಟ್ಟು, ಚಿರಾಗ್ ಪಾಸ್ವಾನ್ ಆಯ್ಕೆ ಮಾಡಿದ ಬಿಜೆಪಿ
ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಗೆ ಎರಡು ದಿನಗಳ ಮೊದಲು ಚಿರಾಗ್ ಅವರೇ ದೇಶದ್ರೋಹಿಗಳಿಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ವೀಣಾದೇವಿಗೆ ಪಕ್ಷದ ಟಿಕೆಟ್ ನೀಡಿದ್ದು ಮಾತ್ರವಲ್ಲದೆ ಮಾಧ್ಯಮಗಳ ಮುಂದೆ ಬಂದು ಟಿಕೆಟ್ ನೀಡಿರುವುದು ಸರಿಯಾದ ನಿರ್ಧಾರ ಎಂದು ಹೇಳಿರುವುದಕ್ಕೆ ಸಾಕಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ.
ಪಕ್ಷದ ಜತೆ ಮುನಿಸಿಕೊಂಡಿರುವ ಮುಖಂಡರು ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಲಿದ್ದಾರೆ ಎಂದು ಮಾಜಿ ಶಾಸಕ ಸತೀಶ್ ಕುಮಾರ್ ಹೇಳಿದ್ದಾರೆ.
ಪಕ್ಷ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹಾಜಿಪುರದಿಂದ ಚಿರಾಗ್ ಪಾಸ್ವಾನ್, ವೈಶಾಲಿಯಿಂದ ಸಂಸದೆ ವೀಣಾ ಸಿಂಗ್, ಜಮುಯಿಯಿಂದ ಅರುಣ್ ಭಾರತಿ, ಸಮಷ್ಟಿಪುರದಿಂದ ಶಾಂಭವಿ ಚೌಧರಿ,ಖಡ್ಗಿಯಾದಿಂದ ರಾಜೇಶ್ ವರ್ಮಾ ಅವರನ್ನು ಕಣಕ್ಕಿಳಿಸಲಾಗಿದೆ.
ಏಪ್ರಿಲ್ 19ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಬಿಹಾರದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಜಮುಯಿ ಒಂದಾಗಿದೆ. ಇದಲ್ಲದೇ ಉಳಿದ ಔರಂಗಾಬಾದ್, ಗಯಾ ಹಾಗೂ ನಾವಡಾದಲ್ಲಿ ಅದೇ ದಿನ ಮತದಾನ ನಡೆಯಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:31 am, Thu, 4 April 24