ಚಳಿಗಾಲದ ಅಧಿವೇಶನ: 30ಕ್ಕೂ ಹೆಚ್ಚು ಸಂಸದರನ್ನು ಅಮಾನತುಗೊಳಿಸಿದ ಲೋಕಸಭಾ ಸ್ಪೀಕರ್

|

Updated on: Dec 18, 2023 | 4:19 PM

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ ವಿರೋಧ ಪಕ್ಷದ 31 ಸದಸ್ಯರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಸದನದಿಂದ ಅಮಾನತುಗೊಳಿಸಿರುವುದಾಗಿ ಲೋಕಸಸಭಾ ಸ್ಪೀಕರ್ ಹೇಳಿದ್ದಾರೆ

ಚಳಿಗಾಲದ ಅಧಿವೇಶನ: 30ಕ್ಕೂ ಹೆಚ್ಚು ಸಂಸದರನ್ನು ಅಮಾನತುಗೊಳಿಸಿದ ಲೋಕಸಭಾ ಸ್ಪೀಕರ್
ಲೋಕಸಭೆ
Follow us on

ದೆಹಲಿ ಡಿಸೆಂಬರ್ 18: ಲೋಕಸಭೆಯಲ್ಲಿ(Lok sabha) ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ (Adhir Ranjan Chowdhury) ಸೇರಿದಂತೆ 31 ವಿಪಕ್ಷ ಸದಸ್ಯರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಸದನದಿಂದ ಅಮಾನತುಗೊಳಿಸಲಾಗಿದೆ. ಲೋಕಸಭೆ ಭದ್ರತಾ ಲೋಪದ (Lok Sabha security breach) ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟನೆಯ ವೇಳೆ ಸಂಸದರು ಸದನದೊಳಗೆ ಫಲಕಗಳನ್ನು ಪ್ರದರ್ಶಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಇದುವರೆಗೆ 47 ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನ ಉಭಯ ಸದನಗಳಿಂದ ಅಮಾನತುಗೊಳಿಸಲಾಗಿದೆ. ಡಿಸೆಂಬರ್ 13 ರಂದು ನಡೆದ ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಯ ಬಗ್ಗೆ ವಿರೋಧ ಪಕ್ಷದ ಸಂಸದರು ಗದ್ದಲವನ್ನು ಸೃಷ್ಟಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಗೌರವ್ ಗೊಗೊಯ್, ಎ ರಾಜಾ, ಕಲ್ಯಾಣ್ ಬ್ಯಾನರ್ಜಿ, ದಯಾನಿಧಿ ಮುರಸೋಲಿ ಮಾರನ್, ಕೆ ಜಯಕುಮಾರ್, ವಿಜಯ್ ವಸಂತ್, ಪ್ರತಿಮಾ ಮೊಂಡಲ್, ಸೌಗತ ರಾಯ್ ಮತ್ತು ಸತಾಬ್ದಿ ರಾಯ್ ಸೇರಿದಂತೆ ಇತರ  ನಾಯಕರು ಸೋಮವಾರ  ಅಮಾನತುಗೊಂಡಿದ್ದಾರೆ.


ಡಿಸೆಂಬರ್ 13 ರಂದು ಲೋಕಸಭಾ ಕಲಾಪದ ವೇಳೆ ಭದ್ರತಾ ಉಲ್ಲಂಘನೆ ನಡೆದ ನಂತರ ವಿಪಕ್ಷ ಸದಸ್ಯರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ  ಕಲಾಪಗಳು ಅಡ್ಡಿಪಡಿಸಿವೆ.  ಪ್ರತಿಪಕ್ಷಗಳು ಕೇಂದ್ರ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿದರೆ, ಹಲವರು ರಾಜೀನಾಮೆಗೆ ಒತ್ತಾಯಿಸಿದರು.

ಗದ್ದಲದ ನಂತರ, ರಾಜ್ಯಸಭಾ ಸದಸ್ಯ ಡೆರೆಕ್ ಒ’ಬ್ರೇನ್ ಸೇರಿದಂತೆ 14 ಸಂಸದರನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ. ಚಳಿಗಾಲದ ಅಧಿವೇಶನದ ಕೊನೆಯ ವಾರದಲ್ಲಿ ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಬುಧವಾರದ ಭದ್ರತಾ ಉಲ್ಲಂಘನೆ ನಡೆದಿತ್ತು. ರಾಜ್ಯಸಭೆಯು ಸತತ ಎರಡು ಬಾರಿ ಮುಂದೂಡಿಕೆಗೆ ಸಾಕ್ಷಿಯಾಗಿದ್ದು, ಸದನವು ಮಧ್ಯಾಹ್ನ 2 ಗಂಟೆಗೆ ಪುನರಾರಂಭವಾಗಿತ್ತು,

13 ಸಂಸದರ ಅಮಾನತು ಹಿಂಪಡೆಯಬೇಕು ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಲೋಕಸಭೆ ಸ್ಪೀಕರ್ ಅವರನ್ನು ಒತ್ತಾಯಿಸಿದ್ದಾರೆ. “ಅಶಿಸ್ತಿನ ನಡವಳಿಕೆಯ’ ಹೆಸರಲ್ಲಿ ಅಮಾನತುಗೊಂಡಿರುವ ಸದಸ್ಯರು ಬಹಳ ತೊಂದರೆಗೀಡಾದ ವಿಷಯಗಳ ಬಗ್ಗೆ ಸರ್ಕಾರದಿಂದ ವಿವರಣೆಯನ್ನು ಒತ್ತಾಯಿಸುತ್ತಿದ್ದಾರೆ ಎಂಬ ಅಂಶವನ್ನು ಪರಿಗಣಿಸಿ, ನನಗೆ ಅವರ ಕಾಳಜಿ ಮತ್ತು ದೃಷ್ಟಿಕೋನಗಳ ಬಗ್ಗೆ ಕೇಳುವುದು ಸೂಕ್ತವೆಂದು ತೋರುತ್ತದೆ. ಇತ್ತೀಚಿನ ದಿನಗಳಲ್ಲಿ 13 ಸದಸ್ಯರ ಅಮಾನತಿಗೆ ಕಾರಣವಾದ ಅಂಶಗಳನ್ನು ಪರಿಗಣಿಸಿ, ಈ ವಿಷಯವನ್ನು ಸಮಗ್ರವಾಗಿ ಪರಿಶೀಲಿಸಬೇಕು ಮತ್ತು ಅಮಾನತು ಹಿಂಪಡೆಯಲು ಮತ್ತು ಸದನದಲ್ಲಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಅವರು ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

13 ಸಂಸದರನ್ನು ಅಮಾನತುಗೊಳಿಸಿದ ಬೆನ್ನಲ್ಲೇ ಸೋಮವಾರ ಕಲಾಪಕ್ಕೆ ಅಡ್ಡಿ ಪಡಿಸಿದ 30ಕ್ಕೂ ಹೆಚ್ಚು ವಿಪಕ್ಷ ಸಂಸದರನ್ನು ಅಮಾನತುಗೊಳಿಸಲಾಗಿದೆ. ಇದಕ್ಕಿಂತ ಮುನ್ನ ಸದನದಲ್ಲಿ ಪ್ರತಿಭಟನೆ ನಡೆಸಿದ ವಿಪಕ್ಷದವರಲ್ಲಿ  ಲೋಕಸಭಾ ಸ್ಪೀಕರ್   ಓಂ ಬಿರ್ಲಾ, ಸಂಸತ್​​ನಲ್ಲಿ ನಡೆದ  ಭದ್ರತಾ ಲೋಪ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು ವಿಷಾದನೀಯ. ಸದನದ ಬಾವಿಗೆ ನುಗ್ಗಿ ಘೋಷಣೆ ಕೂಗುವುದು ಸದನದ ಘನತೆಗೆ ವಿರುದ್ಧವಾಗಿದೆ. ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲು ನಿಮ್ಮ (ವಿರೋಧ ಪಕ್ಷದ) ಸಹಕಾರ ಅಗತ್ಯವಿದೆ ಎಂದು ಹೇಳಿದ್ದಾರೆ.

ಅಧೀರ್ ರಂಜನ್ ಪ್ರತಿಕ್ರಿಯೆ


ಅಮಾನತು ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್,  ಸರ್ಕಾರ “ದಬ್ಬಾಳಿಕೆಯ ಉತ್ತುಂಗ” ತಲುಪಿದೆ ಎಂದು ಹೇಳಿದ್ದಾರೆ. ‘ನನ್ನನ್ನೂ ಒಳಗೊಂಡಂತೆ ಎಲ್ಲ ನಾಯಕರನ್ನು ಅಮಾನತುಗೊಳಿಸಲಾಗಿದೆ, ಈ ಹಿಂದೆ ಅಮಾನತುಗೊಂಡಿರುವ ನಮ್ಮ ಸಂಸದರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಮತ್ತು ಗೃಹ ಸಚಿವರು ಸದನಕ್ಕೆ ಬಂದು ಹೇಳಿಕೆ ನೀಡಬೇಕು ಎಂದು ಹಲವು ದಿನಗಳಿಂದ ಒತ್ತಾಯಿಸುತ್ತಿದ್ದೇವೆ, ಅವರು ಪ್ರತಿದಿನ ಟಿವಿಗೆ ಹೇಳಿಕೆ ನೀಡುತ್ತಾರೆ. ಸಂಸತ್ತಿನ ಭದ್ರತೆಗಾಗಿ ಸರ್ಕಾರ ಏನು ಮಾಡುತ್ತಿದೆ ಎಂಬುದರ ಕುರಿತು ಅವರು ಸಂಸತ್ತಿನಲ್ಲೂ ಸ್ವಲ್ಪ ಮಾತನಾಡಬಹುದು…ಇಂದಿನ ಸರ್ಕಾರ ದೌರ್ಜನ್ಯದ ಉತ್ತುಂಗಕ್ಕೆ ತಲುಪಿದೆ.ಮಗೆ ಚರ್ಚೆ ಬೇಕಿತ್ತು ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Mon, 18 December 23