ಸಂಸತ್ ದಾಳಿ: ಲೋಕಸಭೆ ಚುನಾವಣೆಯಲ್ಲಿ ಪುತ್ರನನ್ನು ಗೆಲ್ಲಿಸಲು ಪ್ರತಾಪ್ ಸಿಂಹ ವಿರುದ್ಧ ಸಿದ್ದರಾಮಯ್ಯ ಷಡ್ಯಂತರ: ಲೆಹರ್ ಸಿಂಗ್
ಸಂಸತ್ ಮೇಲೆ ಸ್ಮೋಕ್ ಬಾಂಬ್ ದಾಳಿ ನಡೆಸಿದ ಪ್ರಕರಣ ಸಂಬಂಧ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಇದೇ ವಿಚಾರವಾಗಿ ಮಾತನಾಡಿದ ರಾಜ್ಯಸಭಾ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಸಿರೋಯಾ, ಮೈಸೂರು ಲೋಕಸಭೆ ಚುನಾವಣೆಯಲ್ಲಿ ಪುತ್ರನನ್ನು ಗೆಲ್ಲಿಸಲು ಸಿದ್ದರಾಮಯ್ಯ ಅವರು ಪ್ರತಾಪ್ ಸಿಂಹ ವಿರುದ್ಧ ಷಡ್ಯಂತ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನವದೆಹಲಿ, ಡಿ.16: ಮೈಸೂರು ಲೋಕಸಭಾ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಪುತ್ರ ಯತೀಂದ್ರ ಅವರನ್ನು ಕಣಕ್ಕಿಳಿಸುವ ಮಾತುಗಳು ಕೇಳಿಬರುತ್ತಿವೆ. ಇದನ್ನೇ ಮುಂದಿಟ್ಟುಕೊಂಡು ಸಂಸತ್ ಮೇಲೆ ಸ್ಮೋಕ್ ಬಾಂಬ್ ದಾಳಿ ನಡೆಸಿದ ಪ್ರಕರಣದ ಕುರಿತು ಮಾತನಾಡಿದ ರಾಜ್ಯಸಭಾ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಸಿರೋಯಾ (Lehar Sing Siroya), ಮಗನನ್ನು ಗೆಲ್ಲಿಸಲು ಸಂಸದ ಪ್ರತಾಪ್ ಸಿಂಹ (Pratap Simmha) ವಿರುದ್ಧ ಸಿದ್ದರಾಮಯ್ಯ ಷಡ್ಯಂತರ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರನ್ನು ಟ್ರ್ಯಾಪ್ ಮಾಡಲಾಗಿದೆ. ಮೈಸೂರಿನಲ್ಲಿ ಸಿದ್ದರಾಮಯ್ಯ ಮಗ ಲೋಕಸಭೆಗೆ ಸ್ಪರ್ಧೆ ಮಾಡಲಿದ್ದಾರೆ. ಹೀಗಾಗಿ ಪ್ರತಾಪ್ ಸಿಂಹ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಮಗನನ್ನು ಗೆಲ್ಲಿಸಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಭಾರತ್ ಜೋಡೊ ಯಾತ್ರೆಯಲ್ಲಿ ಅರ್ಬನ್ ನಕ್ಸಲ್ಸ್ ಭಾಗಿಯಾಗಿದ್ದರು. ಸಿದ್ದರಾಮಯ್ಯ ಅರ್ಬನ್ ನಕ್ಸಲರನ್ನು ಬೆಳೆಸುತ್ತಿದ್ದಾರೆ. ಸಂಸತ್ನಲ್ಲಿ ಗಲಾಟೆಯಾದ 15 ನಿಮಿಷದಲ್ಲೇ ಕಾಂಗ್ರೆಸ್ನವರು ಪ್ರತಿಭಟನೆ ಮಾಡಿದ್ದಾರೆ. ಪ್ರತಾಪ್ ಸಿಂಹ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಇದರಿಂದಲೇ ಗೊತ್ತಾಗುತ್ತದೆ ಎಂದರು.
ಇದನ್ನೂ ಓದಿ: ಮೈಸೂರಿನವರು ಎನ್ನುವ ಕಾರಣಕ್ಕೆ ಪ್ರತಾಪ್ ಸಿಂಹ ಪಾಸ್ ಕೊಟ್ರಾ? ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಿಷ್ಟು
ಸಂಸತ್ ಅಧಿವೇಶನದ ವೇಳೆ ಇಬ್ಬರು ದುಷ್ಕರ್ಮಿಗಳು ಸದನದೊಳಗೆ ನುಗ್ಗಿ ಸ್ಮೋಕ್ ಬಾಂಬ್ ಎಸೆದಿದ್ದರು. ಇದರಿಂದ ದಟ್ಟ ಹೊಗೆ ಆವರಿಸಿತ್ತು. ಕೂಡಲೇ ಸಂಸದರು ದುಷ್ಕರ್ಮಿಗಳನ್ನು ಹಿಡಿದು ಥಳಿಸಿ ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಆರೋಪಿಗಳಿಗೆ ಸಂಸದ ಪ್ರತಾಪ್ ಸಿಂಹ ಕಡೆಯಿಂದ ಪಾಸ್ ಸಿಕ್ಕಿರುವುದು ತಿಳಿದುಬಂದಿದೆ.
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ವಿಪಕ್ಷ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳಿಗೆ ಇದು ಅಸ್ತ್ರವಾಗಿ ಪರಿಣಮಿಸಿದೆ. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವ ಕರ್ನಾಟಕದ ಸಚಿವರು, ಪ್ರತಾಪ್ ಸಿಂಹ ಅವರನ್ನು ಸಂಸದ ಸ್ಥಾನದಿಂದ ಅಮಾನತುಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ.
ಸಂಸತ್ತಿನಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿರುವ ಸಮಯದಲ್ಲಿ ವೀಕ್ಷಕರ ಗ್ಯಾಲರಿಯಿಂದ ಜಿಗಿದು, ಅಶ್ರುವಾಯು ಸಿಡಿಸಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣ ಸಂಬಂಧ ಸಾಗರ್ ಶರ್ಮಾ, ಮನೋರಂಜನ್, ನೀಲಂ ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ), ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ